

ಮಂಡ್ಯ: ಕೆಲವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಹಿಂದೆ-ಮುಂದಿಲ್ಲದವರು ಎಂದು ಅತ್ಯಂತ ಲಘುವಾಗಿ ಟೀಕಿಸುತ್ತಾರೆ. ಆದರೆ, ರಾಷ್ಟ್ರನಾಯಕರನ್ನು ಸೃಷ್ಟಿಸಬಲ್ಲಂತಹ ಶಕ್ತಿ ಹೊಂದಿದ್ದ ಕೆ.ಕಾಮರಾಜ್ ನಾಡಾರ್ ಅವರೂ ಕೂಡ ಆಜನ್ಮ ಬ್ರಹ್ಮಚಾರಿಯಾಗಿದ್ದರು ಎನ್ನುವುದನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂದು ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಹೇಳಿದರು.
ನಗರದ ಕರ್ನಾಟಕ ಸಂಘದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಕರ್ನಾಟಕ ಸಂಘ ಮತ್ತು ಸಂಕಥನ ಮಂಡ್ಯ ವತಿಯಿಂದ ಆಯೋಜಿಸಿದ್ದ ಲೇಖಕ ಡಾ.ಜಗದೀಶ್ ಕೊಪ್ಪ ಅವರ ‘ದಕ್ಷಿಣದ ಗಾಂಧಿ ಕೆ.ಕಾಮರಾಜ್’ ಎಂಬ ಕೃತಿ ಬಿಡುಗಡೆಗೊಳಿಸಿ ಮಾತನಾಡಿದರು.
ಸಂಗೀತ, ಸಾಹಿತ್ಯ, ಕ್ರೀಡೆ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ನಿರಂತರ ತೊಡಗಿಸಿಕೊಳ್ಳುವಿಕೆಯಿಂದ 91ರ ಇಳಿ ವಯಸ್ಸಿನಲ್ಲೂ ನನ್ನ ಜೀವನೋತ್ಸಾಹ ಕುಂದಿಲ್ಲ. 1967ರ ಚುನಾವಣೆಯಲ್ಲಿ ನಾನು ಹಾಗೂ ಎಚ್.ಕೆ.ವೀರಣ್ಣಗೌಡರು ಸೋಲು ಅನುಭವಿಸಿದ್ದೆವು. ಆಗ ಆಕಾಶವಾಣಿ ವಾರ್ತೆಯಲ್ಲಿ ಕೆ.ಕಾಮರಾಜ್ ನಾಡಾರ್ ಕೂಡ ಚುನಾವಣೆಯಲ್ಲಿ ಸೋಲನುಭವಿಸಿದ್ದು ಬಿತ್ತರಗೊಂಡಿತ್ತು. ಆಗ ನಾವು ಅಂತಹ ದೊಡ್ಡ ವ್ಯಕ್ತಿಯೇ ಸೋತಿದ್ದಾರೆ. ನಮ್ಮದೇನು ಮಹಾ ಎಂದು ಸಮಾಧಾನಪಟ್ಟುಕೊಂಡಿದ್ದೆವು. ಆದರೆ, ಸಭ್ಯತೆಯ ವ್ಯಾಪ್ತಿಯನ್ನು ಮೀರಿ ಎದುರಾಳಿಯನ್ನು ಟೀಕಿಸುವ ಮಟ್ಟಕ್ಕೆ ನಾವು ಇಳಿಯುತ್ತಿರಲಿಲ್ಲ. ಒಮ್ಮೆ ಕೆ.ವಿ.ಶಂಕರಗೌಡ ಕೂಡ ನನ್ನ ಎದುರಾಳಿಯಾಗಿದ್ದರು. ಪ್ರಚಾರದ ದಿನಗಳಲ್ಲಿ ಒಂದು ದಿನವೂ ಅವರ ವಿರುದ್ಧ ಲಘುವಾಗಿ ಮಾತನಾಡಿಲ್ಲ. ಏಕೆಂದರೆ, ಕೆ.ವಿ.ಶಂಕರಗೌಡರು ಜಿಲ್ಲೆಗೆ ಕೊಟ್ಟಿರುವ ಕೊಡುಗೆ ಅನನ್ಯವಾದುದು ಎಂಬ ಸೂಕ್ಷ್ಮತೆ ನಮ್ಮಲ್ಲಿತ್ತು ಎಂದು ನೆನಪು ಮಾಡಿಕೊಂಡರು.
ಆನಂತರದಲ್ಲಿ ಜಿಲ್ಲೆಯ ಜನರು ನನ್ನನ್ನು ಸಂಸತ್ತಿಗೆ ಕಳುಹಿಸಿದರು. ಅಲ್ಲಿ ಕೆ.ಕಾಮರಾಜ್ ಅವರ ರಾಜಕೀಯ ಕಾರ್ಯವೈಖರಿಯನ್ನು ಹತ್ತಿರದಿಂದ ಕಾಣುವಂತಾಯಿತು. ಇಂತಹ ಅವಕಾಶ ಕೊಟ್ಟಿದ್ದಕ್ಕಾಗಿ ಜಿಲ್ಲೆಯ ಜನರನ್ನು ಮನಃತುಂಬಿ ಅಭಿನಂದಿಸುತ್ತೇನೆ ಎಂದ ಅವರು, ಡಾ.ಜಗದೀಶ್ ಕೊಪ್ಪ ಅವರು ಪುಸ್ತಕಗಳನ್ನು ಬರೆಯುತ್ತಾ ದೊಡ್ಡ ಮನುಷ್ಯರ ಸಮಾಜಮುಖಿ ಕೆಲಸಗಳನ್ನು ದಾಖಲಿಸುವಂತಹ ಕೆಲಸ ಮಾಡುತ್ತಿದ್ದಾರೆ. ಇಂತಹ ದಾಖಲೀಕರಣಗಳು ಮುಂದುವರೆದರೆ ಭವಿಷ್ಯದ ಪ್ರಜೆಗಳ ನೈತಿಕ ಶಕ್ತಿಯನ್ನು ಹೆಚ್ಚಿಸುವಂತಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಕೃತಿಯ ಕುರಿತು ಮಾತನಾಡಿದ ಕರ್ನಾಟಕ ಚಿತ್ರಕಲಾ ಪರಿಷತ್ ಅಧ್ಯಕ್ಷ ಡಾ.ಬಿ.ಎಲ್.ಶಂಕರ್, ಇಂದಿನ ದಿನಗಳಲ್ಲಿ ಗ್ರಾಮ ಪಂಚಾಯಿತಿ ಸದಸ್ಯನಾಗಿ ಗೆದ್ದ ಬಳಿಕ ಅಧ್ಯಕ್ಷನಾಗಬೇಕು. ತಾಪಂ, ಜಿಪಂ ಅಧ್ಯಕ್ಷನಾಗಿ ಏಕಾಏಕಿ ಶಾಸಕನಾಗಿಬಿಡಬೇಕು ಎಂಬ ಆತುರದಲ್ಲಿರುತ್ತಾರೆ. ಆದರೆ, ತಮಿಳುನಾಡಿನಲ್ಲಿ ಅತ್ಯಂತ ಜನಪ್ರಿಯ ಆಡಳಿತಗಾರನೆನಿಸಿಕೊಂಡ ಕೆ.ಕಾಮರಾಜ್ ಅವರನ್ನೇ ಸೋಲಿಸಿಬಿಡುತ್ತಾರೆ. ಇದು ಸಾಮಾಜಿಕ ವಿಪ್ಲವಗಳ ಒಂದು ಮುಖವನ್ನು ತೋರಿಸುತ್ತದೆ ಎಂದು ವಿವರಿಸಿದರು.
ದೇಶದ ಪ್ರಥಮ ಪ್ರಧಾನಿ ನೆಹರು ಅವರು ಪಂಚವಾರ್ಷಿಕ ಯೋಜನೆ ಚಿಂತನೆಯಲ್ಲಿದ್ದಾಗ ಕೆ.ಕಾಮರಾಜ್ ಅವರು ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಹಣಕಾಸು ಮೀಸಲಿರಿಸುವಂತೆ ಒತ್ತಡ ಹಾಕಿ ಅದರಲ್ಲಿ ಯಶಸ್ವಿಯಾಗುತ್ತಾರೆ. ಅದರ ಪ್ರತಿಫಲವನ್ನು ತಮಿಳುನಾಡು ಜನತೆ ನಿರಂತರವಾಗಿ ಅನುಭವಿಸಿಕೊಂಡು ಬಂದಿದ್ದಾರೆ. ಅವರಿಂದ ಪ್ರೇರಣೆಗೊಂಡ ಎಸ್.ಎಂ.ಕೃಷ್ಣ ಅವರೂ ಕೂಡ ಕರ್ನಾಟಕದಲ್ಲಿ ಪ್ರಥಮಬಾರಿಗೆ ಸರ್ಕಾರಿ ಶಾಲೆಗಳಲ್ಲಿ ಬಿಸಿಯೂಟ ಯೋಜನೆ ಜಾರಿಗೊಳಿಸಿದರು. ಅಂದಿನ ಸಂದರ್ಭದಲ್ಲಿ ನಾನು ದೇಶದಲ್ಲಿ ಪ್ರಥಮವಾಗಿ ಆರಂಭಿಸಿದ್ದಲ್ಲ, ಕಾಮರಾಜ್ ಅವರು ತಮಿಳುನಾಡಿನ ಮುಖ್ಯಮಂತ್ರಿಯಾಗಿ ಜಾರಿಗೊಳಿಸಿದ ಯೋಜನೆಯಾಗಿದೆ. ಅದನ್ನೇ ನಾನು ಕರ್ನಾಟಕದಲ್ಲಿ ಅನುಷ್ಠಾನಕ್ಕೆ ತಂದಿದ್ದೇನೆ ಎಂದು ಆತ್ಮವಂಚನೆ ಇಲ್ಲದೆ ಹೇಳಿಕೊಂಡಿದ್ದಾರೆ. ಇಂತಹ ಬೆಳವಣಿಗೆಗಳು ರಾಜಕೀಯ ಧುರೀಣರಲ್ಲಿ ಮಾತ್ರ ಕಾಣಬಹುದು ಎಂದು ಹೇಳಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಮಾತನಾಡಿದರು. ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ ಅಧ್ಯಕ್ಷತೆ ವಹಿಸಿದ್ದರು. ಲೇಖಕ ಡಾ.ಜಗದೀಶ್ ಕೊಪ್ಪ, ಕರ್ನಾಟಕ ಸಂಘದ ಕಾರ್ಯಾಧ್ಯಕ್ಷ ತಗ್ಗಹಳ್ಳಿ ವೆಂಕಟೇಶ್ ಇತರರಿದ್ದರು.