

ಗೋಣಿಕೊಪ್ಪ: ಕೃಷಿ ಕ್ಷೇತ್ರದ ಉತ್ತೇಜನಕ್ಕೆ ಆಗಾಗ್ಗೆ ವಿವಿಧ ಕಾರ್ಯಕ್ರಮಗಳು ಜಿಲ್ಲೆಯ ವಿವಿಧ ಭಾಗದಲ್ಲಿ ನಡೆಯುವಂತಾಗಬೇಕು. ಇದು ಆಯಾ ಭಾಗದ ಕೃಷಿಕರ, ರೈತರ ಅಭಿವೃದ್ಧಿಗೆ ಪೂರಕವಾಗುತ್ತದೆ. ಆ ನಿಟ್ಟಿನಲ್ಲಿ ಪೊನ್ನಂಪೇಟೆ ಕೂರ್ಗ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಕೊಡವ ಎಜುಕೇಷನ್ ಸೊಸೈಟಿ ವತಿಯಿಂದ ಕೃಷಿಯಂತ್ರ ಮೇಳ ಆಯೋಜಿಸಿರುವುದು ಸಮಯೋಜಿತ ಎಂದು ಮಡಿಕೇರಿ ಶಾಸಕ ಮಂತರ್ ಗೌಡ ತಿಳಿಸಿದರು.
ಪೊನ್ನಂಪೇಟೆ ಕೂರ್ಗ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕೊಡವ ಎಜುಕೇಷನ್ ಸೊಸೈಟಿಗೆ 25 ವರ್ಷ ತುಂಬಿದ ನೆನಪಿನಲ್ಲಿ ಡಾ.ಎಂ.ಎಂ. ಚಂಗಪ್ಪ ವೇದಿಕೆಯಲ್ಲಿ ಭಾನುವಾರ ಆಯೋಜಿಸಿದ್ದ ರಾಜ್ಯಮಟ್ಟದ ಕೃಷಿ ಯಂತ್ರ ಮೇಳದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಭತ್ತದ ಕೃಷಿಯಲ್ಲಿ ನಷ್ಟ ಅನುಭವಿಸಿದರೂ ಸಾಕಷ್ಟು ರೈತರು ತಮ್ಮ ಭೂಮಿಯನ್ನು ಹದಗೊಳಿಸಿ ಭತ್ತ ಬೆಳೆಯುತ್ತಿದ್ದಾರೆ. ಪ್ರಸ್ತುತ ಸನ್ನಿವೇಶದಲ್ಲಿ ತಂತ್ರಜ್ಞಾನ ಅಳವಡಿಸಿಕೊಳ್ಳುವ ಮೂಲಕ ಯಂತ್ರಗಳ ಬಳಕೆ ಅವಶ್ಯವಿದೆ. ಆ ನಿಟ್ಟಿನಲ್ಲಿ ರೈತರ ಅನುಕೂಲಕ್ಕಾಗಿ ಸಿಐಟಿ ಸಂಸ್ಥೆಯು ಯಂತ್ರಗಳ ಮೇಳ ಆಯೋಜಿಸಿ ಸಹಕಾರಿಯಾಗಿರುವುದು ಶ್ಲಾಘನೀಯ ಎಂದರು.
ವಿಧಾನ ಪರಿಷತ್ ಸದಸ್ಯ ಮಂಡೇಪಂಡ ಸುಜಾಕುಶಾಲಪ್ಪ ಮಾತನಾಡಿ, ಜಿಲ್ಲೆಯಲ್ಲಿ ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆ ಮಾಡಲು ಉತ್ತಮ ವಿದ್ಯಾಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿವೆ. ಪೊನ್ನಂಪೇಟೆಯಲ್ಲಿ ಸಿಐಟಿ ಕಾಲೇಜು ಉತ್ತಮ ರೀತಿಯಲ್ಲಿ ಬೆಳೆದು ನಿಂತಿದೆ. ಇದರಿಂದಾಗಿ ಬೆಳ್ಳಿ ಮಹೋತ್ಸವ ಅತ್ಯಂತ ಯಶಸ್ವಿಯಾಗಿ ನಡೆದಿದೆ ಎಂದರು.
ಕೊಡವ ಎಜುಕೇಷನ್ ಸೊಸೈಟಿಯ ಅಧ್ಯಕ್ಷ ಡಾ.ಎಂ.ಸಿ.ಕಾರ್ಯಪ್ಪ, ಟಾಟಾ ಕಾಫಿ ಕಾರ್ಯಕಾರಿ ಉಪಾಧ್ಯಕ್ಷ ಎಂ.ಬಿ.ಗಣಪತಿ, ಕಾಫಿ ಬೋರ್ಡ್ ಮಾಜಿ ಅಧ್ಯಕ್ಷ ಎನ್.ಬೋಸ್ ಮಂದಣ್ಣ, ಸಂಸ್ಥೆಯ ಉಪಾಧ್ಯಕ್ಷ ಕೆ.ಎ.ಚಿನ್ನಪ್ಪ, ಕೋಶಾಧಿಕಾರಿ ಕೆ.ಎನ್.ಉತ್ತಪ್ಪ, ಕಾರ್ಯದರ್ಶಿ ಸಿ.ಪಿ.ರಾಕೇಶ್ ಪೂವಯ್ಯ, ಪ್ರಾಂಶುಪಾಲ ಡಾ.ಎಂ.ಬಸವರಾಜ್, ಬೆಳ್ಳಿ ಹಬ್ಬದ ಸಂಚಾಲಕ ಡಾ.ರೋಹಿಣ ತಿಮ್ಮಯ್ಯ, ಕೃಷಿ ಯಂತ್ರ ಮೇಳದ ಸಂಚಾಲಕ ಡಾ.ಬಿ.ಬಿ. ರಾಮಕೃಷ್ಣ ಇದ್ದರು.