

ಮಂಡ್ಯ: ಸಣ್ಣ ಮತ್ತು ಅತಿ ಸಣ್ಣ ಮಹಿಳಾ ಕುಟುಂಬಗಳಿಗೆ ಅಗತ್ಯವಿರುವ ಕೃಷಿ ಸಂಬಂಧಿತ ನೂತನ ತಾಂತ್ರಿಕ ಸೇವೆಗಳು ಮತ್ತು ಮಾರುಕಟ್ಟೆ ಕಲ್ಪಿಸುವ ನಿಟ್ಟಿನಲ್ಲಿ ಕೃಷಿ ಜೀವನೋಪಾಯ ಸಂಪನ್ಮೂಲ ವ್ಯಕ್ತಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ಕೃಷಿ ವಿಶ್ವವಿದ್ಯಾನಿಲಯದ ಹಿರಿಯ ವಿಜ್ಞಾನಿ ಡಾ.ನರೇಶ್ ಹೇಳಿದರು.
ತಾಲೂಕಿನ ವಿ.ಸಿ.ಫಾರ್ಮ್‌ನಲ್ಲಿ ಜಿಲ್ಲಾ ಪಂಚಾಯಿತಿ, ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ಆಯೋಜಿಸಿದ್ದ ಕೃಷಿ ಸಖಿಯರ ಸಾಮರ್ಥ್ಯಾಭಿವೃದ್ಧಿ ತರಬೇತಿಯಲ್ಲಿ ಮಾತನಡಿದರು. ಇವರ ಮೂಲಕ ಗ್ರಾಮ ಮಟ್ಟದಲ್ಲಿ ಹೆಚ್ಚು ತಾಂತ್ರಿಕ ಜ್ಞಾನ ಹೆಚ್ಚಿಸಲು ವಿವಿಧ ವಿಷಯಗಳಿಗೆ ವಿಸ್ತರಣಾ ಸೇವೆಗಳನ್ನು ವಿಸ್ತರಿಸಲು ತರಬೇತಿ ಕಾರ್ಯಕ್ರಮ ರೂಪಿಸಲಾಗಿದೆ ಎಂದರು.
ಜಿಲ್ಲಾ ಪಂಚಾಯಿತಿ ಸಹಾಯಕ ಯೋಜನಾಧಿಕಾರಿ ಷಣ್ಮುಗಂ ಮಾತನಾಡಿ, ಸಂಜೀವಿನಿ ಜೀವನೋಪಾಯ ವರ್ಷದಲ್ಲಿ ಸಂಜೀವಿನಿ ಯೋಜನೆಯ ಕಾರ್ಯಕ್ರಮಗಳು ಹೆಚ್ಚಾಗಿ ಗ್ರಾಮ ಮಟ್ಟದಲ್ಲಿ ಅನುಷ್ಠಾನದೊಂದಿಗೆ ಮಹಿಳಾ ಸಬಲೀಕರಣದೊಂದಿಗೆ ಮಹಿಳಾ ಉನ್ನತೀಕರಣ ಆದರೆ ಮಹಿಳಾ ಸ್ವಸಹಾಯ ಸಂಘದ ಸದಸ್ಯರ ಜೀವನ ಮಟ್ಟ ಮತ್ತು ಆರ್ಥಿಕ ಮಟ್ಟವನ್ನು ಸುಧಾರಿಸಬಹುದು ಎಂದು ತಿಳಿಸಿದರು.
ಸಂಜೀವಿನಿ ಯೋಜನೆಯ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ಕೆ.ಟಿ.ಕಿಶೋರ್, ಸಂಜೀವಿನಿ ಯೋಜನೆಯಲ್ಲಿ ಕೃಷಿ ಜೀವನೋಪಾಯ ಚಟುವಟಿಕೆ ಮತ್ತು ಮಹತ್ವ, ಸಂಜೀವಿನಿ ಯೋಜನೆಯ ಮಹಿಳಾ ಸ್ವಸಹಾಯ ಸಂಘದ ಸದಸ್ಯರ ಪಾತ್ರದೊಂದಿಗೆ ಕೃಷಿ ಸಖಿಯರ ಮೂಲಕ ತಾಂತ್ರಿಕತೆಯ ಪ್ರಸರಣವನ್ನು ವಿಶೇಷವಾಗಿ ವಿವಿಧ ಅಪ್ಲಿಕೇಷನ್ ಮತ್ತು ವೆಬ್‌ಲಿಂಕ್ ಮೂಲಕ ಪ್ರಾಯೋಗಿಕವಾಗಿ ತಿಳಿಸಿದರು.