ರೈತರ ಮನೆಬಾಗಿಲಲ್ಲೇ ಮಣ್ಣು ಪರೀಕ್ಷೆ

krushi sanjeevini
Published on

‘ಕೃಷಿ ಸಂಜೀವಿನಿ’ಯಡಿ ತಾಲೂಕಿಗೊಂದು ವಾಹನ

‘ಲ್ಯಾಬ್ ಟು ಲ್ಯಾಂಡ್’ ಮಾದರಿಯಲ್ಲಿ ಕಾರ್ಯನಿರ್ವಹಣೆ

ಸದೇಶ್ ಕಾರ್ಮಾಡ್ ಮೈಸೂರು
ಇನ್ನು ಮುಂದೆ ರೈತರು ತಮ್ಮ ಜಮೀನಿನ ಮಣ್ಣು ಪರೀಕ್ಷೆಗೆ ಮೈಸೂರಿಗೆ ಆಗಮಿಸುವ ಅವಶ್ಯಕತೆ ಇಲ್ಲ. ರೈತರ ಮನೆ ಬಾಗಿಲಿನಲ್ಲೇ ಈ ಸೇವೆ ದೊರೆಯಲಿದೆ. ಕೇವಲ ಮಣ್ಣು ಪರೀಕ್ಷೆ ಮಾತ್ರವಲ್ಲ ‘ಕೃಷಿ ಸಂಜೀವಿನಿ’ ಯೋಜನೆಯಡಿ ಇನ್ನು ಮುಂದೆ ಜಿಲ್ಲೆಯ ರೈತರಿಗೆ ಹಲವು ಸೇವೆಗಳು ‘ಲ್ಯಾಬ್ ಟು ಲ್ಯಾಂಡ್’ ಕೃಷಿ ಸಂಚಾರಿ ವಾಹನದಲ್ಲೇ ಲಭ್ಯ.

ಕೃಷಿಕರು ಬೆವರು ಸುರಿಸಿ ಬೆಳೆ ಬೆಳೆಯುತ್ತಾರೆ. ಕೆಲವೊಂದು ಬಾರಿ ಸೂಕ್ತ ಮಾರ್ಗದರ್ಶನ ಕೊರತೆಯಿಂದ, ಕೀಟಬಾಧೆಯಿಂದ, ಮಣ್ಣು ಪರೀಕ್ಷೆ ಮಾಡದೆ ಕೃಷಿ ಚಟುವಟಿಕೆ ಕೈಗೊಳ್ಳುವ ಪರಿಣಾಮ ಉತ್ತಮ ಇಳುವರಿ ಪಡೆಯಲು ಸಾಧ್ಯವಾಗುವುದಿಲ್ಲ. ಕೆಲವೊಮ್ಮೆ ಇದು ರೈತರನ್ನು ತೀವ್ರ ಆರ್ಥಿಕ ಸಂಕಷ್ಟಕ್ಕೆ ದೂಡುತ್ತದೆ. ಹಲವಾರು ರೈತರು ಎದುರಿಸುತ್ತಿರುವ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಸಲುವಾಗಿ ರಾಜ್ಯ ಸರ್ಕಾರ ಕೃಷಿ ಸಂಜೀವಿನಿ ಯೋಜನೆ ಜಾರಿಗೊಳಿಸಿತು. ಈ ಯೋಜನೆ ಸೌಲಭ್ಯ ಇದೀಗ ಜಿಲ್ಲೆಯ ಎಲ್ಲ ಕಡೆಗಳಲ್ಲೂ ದೊರೆಯಲು ಪ್ರಾರಂಭವಾಗಿದೆ.

ಯೋಜನೆಯಡಿ ಈ ಹಿಂದೆ ಜಿಲ್ಲೆಗೆ ಒಂದು ವಾಹನವನ್ನು ಮಾತ್ರ ನೀಡಲಾಗಿತ್ತು. ಇದೀಗ ಹೊಸದಾಗಿ ಪ್ರತಿ ತಾಲೂಕಿಗೆ ಒಂದು ವಾಹನ ನೀಡಲಾಗಿದೆ. ಮುಂದಿನ ಹಂತದಲ್ಲಿ ಹೋಬಳಿಗೆ ಒಂದು ವಾಹನಗಳನ್ನು ನೀಡುವ ಉದ್ದೇಶ ಹೊಂದಲಾಗಿದೆ. ರೈತರಿಗೆ ಕೃಷಿ ಇಲಾಖೆಯಿಂದ ನೀಡುವ ಹಲವು ಸೇವೆಗಳನ್ನು ಪಡೆಯಲು ಇನ್ನು ಮುಂದೆ ಕಚೇರಿಗೆ ಅಲಿಯುವ ಅವಶ್ಯಕತೆ ಇಲ್ಲ. ಆ ಎಲ್ಲ ಸೇವೆಗಳು ಇನ್ನು ಮುಂದೆ ಅವರ ಮನೆ ಬಾಗಿಲಿನಲ್ಲಿಯೇ ದೊರೆಯಲಿದೆ.

ಜಮೀನಿನ ಮಣ್ಣು, ನೀರು ಪರೀಕ್ಷೆ, ಬೀಜ, ಗೊಬ್ಬರಗಳ ಗುಣಮಟ್ಟ ಪರೀಕ್ಷೆಯನ್ನು ಈ ಸಂಚಾರಿ ವಾಹನದ ಪ್ರಯೋಗಾಲಯದಲ್ಲಿ ನಡೆಸಬಹುದು. ರೈತರು ಕುಳಿತಲ್ಲಿಯೇ ಸಹಾಯವಾಣಿ ಮೂಲಕ ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಬಹುದು. ಅಲ್ಲದೆ ನೇರವಾಗಿ ತಮ್ಮ ಜಮೀನಿಗೆ ವಾಹನ ತರಿಸಿ ಸ್ಥಳದಲ್ಲಿಯೇ ಪರೀಕ್ಷೆ ಮಾಡಿಸಿಕೊಂಡು ಎಲ್ಲ ಮಾಹಿತಿ, ಪರೀಕ್ಷೆಯ ಫಲಿತಾಂಶ ಪಡೆಯಬಹುದು.

ಈ ಸಂಚಾರಿ ಪ್ರಯೋಗಾಲಯದಲ್ಲಿ ಮಣ್ಣು, ನೀರು, ಕೀಟಬಾಧೆ ಸೇರಿದಂತೆ ಇತರೆ ತಾಂತ್ರಿಕ ನೆರವು ಪಡೆಯಬಹುದು. ವಾಹ ದಲ್ಲಿ ಇರುವ ತಾಂತ್ರಿಕ ತಂಡ ಜಮೀನಿನ ಸಮಗ್ರ ವೀಕ್ಷಣೆ, ಪರಿಶೀಲನೆ ನಡೆಸಿ ಸಲಹೆಗಳನ್ನು ನೀಡುವರು. ರೈತರು ಈ ವಾಹನದ ಪ್ರಯೋಜನೆ ಪಡೆಯಲು ಉಚಿತ ಸಹಾಯವಾಣಿಗೆ (155313) ಕರೆ ಮಾಡಿದರೆ ಆ ಕರೆಯು ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕರ ಕಚೇರಿಗೆ ಹೋಗಲಿದೆ. ಅಲ್ಲಿಂದ ಸಂಪರ್ಕಿಸಿದ ರೈತರ ಜಮೀನುಗಳಿಗೆ ತೆರಳಿ ಎಲ್ಲ ಮಾಹಿತಿ ನೀಡಲಾಗುತ್ತದೆ. ವಾಹನದಲ್ಲಿ ಎಲ್‌ಇಡಿ ಡಿಸ್ಪ್ಲೆ ಇದ್ದು, ಇದರ ಮೂಲಕ ಕೃಷಿಗೆ ಸಂಬಂಧಿಸಿದಂತೆ ರೈತರಿಗೆ ಮಾರ್ಗದರ್ಶನ ನೀಡುವ ಮಾಹಿತಿಯನ್ನು ನೀಡಲಾಗುತ್ತದೆ.

ಕೃಷಿ ಉತ್ಪಾದನಾ ವೆಚ್ಚ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಉತ್ಪಾದನಾ ವೆಚ್ಚಗಳನ್ನು ತಗ್ಗಿಸಲು ರೈತರು ಅನುಸರಿಸಬೇಕಾದ ಕ್ರಮಗಳು ಏನು? ಕಡಿಮೆ ವೆಚ್ಚದಲ್ಲಿ ಹೆಚ್ಚು ಇಳುವರಿ ಪಡೆಯುವುದು ಹೇಗೆ? ಅದಕ್ಕೆ ಅನುಸರಿಸಬೇಕಾದ ತಾಂತ್ರಿಕ ಹಾಗೂ ವೈಜ್ಞಾನಿಕ ಅಂಶಗಳೇನು ಎಂಬ ಕುರಿತು ಕುರಿತು ರೈತರಿಗೆ ಮಾರ್ಗದರ್ಶನ ನೀಡಲಾಗುತ್ತದೆ. ಯೋಜನೆ ಜಿಲ್ಲೆಯಲ್ಲಿ ಸಮರ್ಪಕವಾಗಿ ಅನುಷ್ಠಾನಗೊಂಡರೆ ನಿಜವಾಗಿಯೂ ಈ ಯೋಜನೆ ರೈತರ ಪಾಲಿಗೆ ಸಂಜೀವಿನಿಯಾಗಲಿದೆ.

"ಜಿಲ್ಲೆಯ ರೈತರ ಅನುಕೂಲಕೋಸ್ಕರ ರಾಜ್ಯ ಸರ್ಕಾರ ಕೃಷಿ ಸಂಜೀವಿನಿ ಯೋಜನೆಯಡಿ ಪ್ರತಿ ತಾಲೂಕಿಗೆ ಒಂದು ಕೃಷಿ ಸಂಜೀವಿನಿ ವಾಹನವನ್ನು ನೀಡಿದೆ. ಈ ವಾಹನದಲ್ಲಿ ರೈತರ ಕೃಷಿ ಚಟುವಟಿಕೆಗೆ ಸಂಬಂಧಿಸಿದಂತೆ ಎಲ್ಲ ಮಾರ್ಗದರ್ಶನವನ್ನು ನೀಡಲಾಗುವುದು. ಮಣ್ಣು ಪರೀಕ್ಷೆ ಸೇರಿದಂತೆ ವಿವಿಧ ಪರೀಕ್ಷೆಗಳನ್ನು ವಾಹನದಲ್ಲಿರುವ ಪ್ರಯೋಗಾಲಯದಲ್ಲಿ ಪ್ರಯೋಗ ನಡೆಸಿ ರೈತರಿಗೆ ಅಗತ್ಯ ಮಾರ್ಗ ದರ್ಶನ ನೀಡಲಾಗುವುದು. ರೈತರಿಗೆ ಅತ್ಯಂತ ಉಪಯುಕ್ತವಾದ ಯೋಜನೆ ಇದಾಗಿದ್ದು, ಜಿಲ್ಲೆಯ ರೈತರು ಯೋಜನೆಯನ್ನು ಸದುಪಯೋಗ ಪಡಿಸಿಕೊಳ್ಳಬೇಕು''

ರಾಜು, ಸಹಾಯಕ ಕೃಷಿ ನಿರ್ದೇಶಕ,

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net