

ಮಂಡ್ಯ: ಸೃಷ್ಠಿಯಲ್ಲಿರುವ ಯಾವ ಕ್ರಿಮಿ, ಕೀಟವೂ ನಾಶವಾಗುವುದಿಲ್ಲ. ಅವನ್ನು ನಿವಾರಣೆ ಮಾಡುವ ನಿಟ್ಟಿನಲ್ಲಿ ಪಾರಂಪರಿಕ ಕೃಷಿ ಮಾಡಬೇಕು. ಅದು ಬಿಟ್ಟು ಕ್ರಿಮಿನಾಶಕವನ್ನು ಬಳಸುವುದರಿಂದ ಏನೂ ಪ್ರಯೋಜನವಿಲ್ಲ ಎಂದು ಸಾವಯವ ತಜ್ಞ ಸಿದ್ದರಾಮೇಶ್ವರ ಸಲಹೆ ನೀಡಿದರು.
ನಗರದ ರೈತಬಂಧು ಫೌಂಡೇಷನ್ ಭಾಂಗಣದಲ್ಲಿ ಆಯೋಜಿಸಿದ್ದ ಮಂಡ್ಯ ನೆಲ ಮತ್ತು ಸಾವಯವ ಕೃಷಿ ಬಗ್ಗೆ ನಡೆದ ಚರ್ಚೆ ಮತ್ತು ಸಂವಾದ ಉದ್ಘಾಟಿಸಿ ಮಾತನಾಡಿದರು. ಯಾವ ಬೆಳೆಗೆ ಯಾವ ಪೋಷಕಾಂಶ ನೀಡಬೇಕು ಎಂಬುದನ್ನು ಮೊದಲು ಅರಿಯಬೇಕು. ಎಲ್ಲ ಬೆಳೆಗಳಿಗೂ ಒಂದೇ ರೀತಿಯ ಪೋಷಕಾಂಶ ನೀಡುವುದರಿಂದ ಬೆಳೆ ಲಾಭರಿತವಾಗುವುದಿಲ್ಲ ಎಂದು ಸಲಹೆ ನೀಡಿದರು.
ಶೇ.೭೦ರಷ್ಟು ಗ್ರಾಮೀಣ ಪ್ರದೇಶವಿದ್ದ ಭಾರತದಲ್ಲಿ ಪಾರಂಪರಿಕ ಕೃಷಿ ಪದ್ಧತಿ ಇತ್ತು. ಆಧುನೀಕತೆ, ವೈಜ್ಞಾನಿಕತೆ ಬೆಳೆದಂತೆಲ್ಲಾ ಎಲ್ಲವೂ ಬದಲಾಯಿತು. ಹಿತ್ತಲಲ್ಲಿ ಸಾಕಷ್ಟು ಸೊಪ್ಪು, ತರಕಾರಿ, ಹಣ್ಣುಗಳನ್ನು ಬೆಳೆಯುತ್ತಿದ್ದೆವು. ಅವುಗಳಿಗೆ ಯಾವುದೇ ರಾಸಾಯನಿಕಗಳನ್ನು ಸಿಂಪಡನೆ ಮಾಡುತ್ತಿರಲಿಲ್ಲ. ನಮ್ಮ ಆರೋಗ್ಯವೂ ಚೆನ್ನಾಗಿತ್ತು. ಅವಿಭಕ್ತ ಕುಟುಂಬಗಳಲ್ಲಿ ಎಷ್ಟೇ ಜನರಿದ್ದರೂ ಅದು ನಮಗೆ ಸಾಕಾಗುವಷ್ಟು ದೊರೆಯುತ್ತಿತ್ತು ಎಂದು ಹೇಳಿದರು.
ಮುಖಂಡರಾದ ಎಂ.ಎನ್. ಶಿವಕುಮಾರ ಆರಾಧ್ಯ, ಸಾತನೂರು ವೇಣುಗೋಪಾಲ್, ಎಚ್.ಪಿ.ವಿನಯಕುಮಾರ್, ಮಂಜು, ವೆಂಕಟೇಶ್, ಮಹೇಶ್ ಬೂಹಳ್ಳಿ ಇತರರಿದ್ದರು.