

ಮಂಡ್ಯ: ರೈತರಿಗೆ ಪ್ರತಿ ಎಕರೆಗೆ ಡೀಸೆಲ್ಗಾಗಿ 250 ರೂ ನೀಡುವುದು ಬಹಳ ಒಳ್ಳೆಯ ಯೋಜನೆ ಎಂದು ಶಾಸಕ ಎಂ.ಶ್ರೀನಿವಾಸ್ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ಸಹಾಯಕ ಕೃಷಿ ಇಲಾಖೆ ಕಚೇರಿ ಆವರಣದಲ್ಲಿ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ಕೃಷಿ ಇಲಾಖೆ ಸಹಯೋಗದಲ್ಲಿ ಸೋಮವಾರ ಆಯೋಜಿಸಿದ್ದ ಕೃಷಿ ಅಭಿಯಾನ ರಥಕ್ಕೆ ಚಾಲನೆ ನೀಡಿ ಮಾತನಾಡಿದರು.
ಕೃಷಿಗೆ ಸಂಬಂಧಿಸಿದ ಮಾಹಿತಿಗಳನ್ನು ರೈತರ ಮನೆ ಬಾಗಿಲಿಗೆ ತಲುಪಿಸಲು ಕೃಷಿ ಅಭಿಯಾನ ವಾಹನಕ್ಕೆ ಪ್ರತಿ ಬಾರಿಯಂತೆ ಈ ವರ್ಷವೂ ಸಹ ಚಾಲನೆ ನೀಡಲಾಗಿದೆ. ಸರ್ಕಾರದಿಂದ ಸೋಲಾರ್ ನೀಡುವುದು ಹಾಗೂ ಅನೇಕ ಯೋಜನೆಗಳ ಬಗ್ಗೆ ರೈತರಿಗೆ ಮಾಹಿತಿ ನೀಡಲು ಕೃಷಿ ಇಲಾಖೆ ಆಯೋಜಿಸಿರುವ ಕಾರ್ಯಕ್ರಮವನ್ನು ಎಲ್ಲ ರೈತರು ಸದುಪಯೋಗ ಪಡಿಸಿಕೊಳ್ಳಿ ಎಂದು ಹೇಳಿದರು.
ಜಿಪಂ ಸಿಇಒ ಶಾಂತಾ ಎಂ.ಹುಲ್ಮನಿ ಮಾತನಾಡಿ, ಜಿಲ್ಲೆಯ ವಿವಿಧ ಇಲಾಖೆಗಳಿಂದ ರೈತರಿಗೆ ಸಂಬಂಧಿಸಿದಂತೆ ಸೌಲಭ್ಯಗಳ ಕುರಿತು ಮಾಹಿತಿಯ ನೀಡುವಂತಹ ಕೃಷಿ ಅಭಿಯಾನ ರಥವು ಹೋಬಳಿ ಮತ್ತು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸಂಚರಿಸಿ ರೈತರಿಗೆ ಎಲ್ಲ ಮಾಹಿತಿಯನ್ನು ನೀಡಲಿದೆ ಎಂದರು.
ಜಂಟಿ ಕೃಷಿ ನಿರ್ದೇಶಕ ವಿ.ಎಸ್.ಅಶೋಕ್, ಉಪನಿರ್ದೇಶಕಿ ಮಾಲತಿ, ಸಹಾಯಕ ನಿರ್ದೇಶಕಿ ಜಿ.ಟಿ.ಸೌಮ್ಯಾ, ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕಿ ಎಂ.ಸಿ.ಪುಷ್ಪಲತಾ ಇತರರಿದ್ದರು.