ಕೃಷಿಮೇಳ ಕಣ್ತುಂಬಿಕೊಂಡ ಜನರು: ಎರಡು ದಿನದ ಕಾರ್ಯಕ್ರಮಕ್ಕೆ ತೆರೆ

03_12_Mdy_Krushimela(1)
Published on

ಮಂಡ್ಯ: ಸಂಶೋಧನಾ ಬೆಳೆ, ವಿವಿಧ ತಳಿಗಳ ಪರಿಚಯ, ಆಧುನಿಕ ಯಂತ್ರೋಪಕರಣಗಳ ಜತೆಗೆ ವೈಜ್ಞಾನಿಕ ಕೃಷಿಯ ಬಗ್ಗೆ ಮಾಹಿತಿ ನೀಡುವ ಉದ್ದೇಶದೊಂದಿಗೆ ತಾಲೂಕಿನ ವಿ.ಸಿ ಫಾರ್ಮ್ನಲ್ಲಿ ಆಯೋಜಿಸಿದ್ದ ಎರಡು ದಿನದ ಕೃಷಿ ಮೇಳ ಶನಿವಾರ ತೆರೆ ಕಂಡಿತು. ರಾಜ್ಯದ ವಿವಿಧೆಡೆಯಿಂದ ಆಗಮಿಸಿದ್ದ ಸಾವಿರಾರೂ ಜನರು ಮೇಳವನ್ನು ಕಣ್ತುಂಬಿಕೊಂಡರು.

ಎರಡು ದಿನದ ಕೃಷಿ ಮೇಳ ರೈತರ ಜತೆಗೆ ಸಾರ್ವಜನಿಕರಿಗೂ ಹೊಸತನ ಮೂಡಿಸಿತು. ಮಾತ್ರವಲ್ಲದೆ ಹಲವು ರೈತ ಮಹಿಳೆಯರು ಆಗಮಿಸಿ ಹಲವು ಉಪಯುಕ್ತ ಮಾಹಿತಿ ಪಡೆದುಕೊಂಡರು. ಕೃಷಿ ವಿಜ್ಞಾನಿಗಳೊಂದಿಗಿನ ಸಂವಾದ ಹೊಸ ವಿಷಯ ತಿಳಿಸುವಂತೆ ಮಾಡಿತು. ಜತೆಗೆ ಮೇಳವನ್ನು ನೋಡಿದ ಹಲವರಿಗೆ ಕೃಷಿಯ ಬಗ್ಗೆ ಒಲವು ಮೂಡುವಂತೆ ಮಾಡಿತು. ಇನ್ನು ಈ ನಡುವೆ ಕೃಷಿ ಕ್ಷೇತ್ರದಲ್ಲಿ ಯಂತ್ರೋಪಕರಣಗಳ ಬಳಕೆ ಬಗ್ಗೆ ರೈತರು ಕುತೂಹಲದಿಂದ ವೀಕ್ಷಣೆ ಮಾಡಿದರು.

ಮೇಳ ಸಮೂಹ ಮಾಧ್ಯಮ: ಕೃಷಿಮೇಳ ರೈತರಿಗೆ ಮಾಹಿತಿ ಒದಗಿಸುವ ಸಮೂಹ ಮಾಧ್ಯಮ ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ವಿಸ್ತರಣಾ ನಿರ್ದೇಶಕ ಡಾ.ಕೆ.ನಾರಾಯಣಗೌಡ ಅಭಿಪ್ರಾಯಪಟ್ಟರು.

ವಿ.ಸಿ ಫಾರ್ಮ್ನ ವಲಯ ಕೃಷಿ ಸಂಶೋಧನಾ ಕೇಂದ್ರದಲ್ಲಿ ಆಯೋಜಿಸಲಾಗಿದ್ದ ಕೃಷಿ ಮೇಳದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಕೃಷಿ ಮೇಳದ ಮೊದಲ ದಿನ ಅಂದಾಜು ೧೫ ಸಾವಿರ ಹಾಗೂ ಎರಡನೇ ದಿನ ೨೦ ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸಿದ್ದಾರೆ. ಕೃಷಿ ಮೇಳ ಒಂದು ಸಮೂಹ ಮಾಧ್ಯಮ. ರೈತರು, ಕೃಷಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಹಲವು ಉಪಯುಕ್ತ ಮಾಹಿತಿ ಒದಗಿಸುತ್ತದೆ ಎಂದರು.

ಬೆಂಗಳೂರಿನ ಜಿ.ಕೆ.ವಿ.ಕೆ ನಂತರ ದೊಡ್ಡ ಪ್ರಮಾಣದಲ್ಲಿ ಕೃಷಿ ಮೇಳ ನಡೆಯುವುದು ವಿ.ಸಿ.ಫಾರ್ಮ್ನಲ್ಲಿ ಮಾತ್ರ. ಅಂತಿಮ ವರ್ಷದ ಕೃಷಿ ವಿದ್ಯಾರ್ಥಿಗಳನ್ನು ತೊಡಗಿಸಿಕೊಂಡು  ಗ್ರಾಮಗಳಲ್ಲೂ ಸಹ ಕೃಷಿ ಮೇಳವನ್ನು ಆಯೋಜಿಸಿ ರೈತರಿಗೆ ಮಾಹಿತಿ ನೀಡಲಾಗುತ್ತಿದೆ. ಇದು ಉತ್ತಮ ಕಾರ್ಯಕ್ರಮ.

ಕೃಷಿ, ತೋಟಗಾರಿಕೆ, ರೇಷ್ಮೆ ಇಲಾಖೆ ಸಹಕಾರದೊಂದಿಗೆ ಉತ್ತಮವಾಗಿ ಕೃಷಿ ಮೇಳವನ್ನು ಆಯೋಜಿಸಲಾಗಿದೆ. ಮೇಳ ನಡೆಸಲು ಯೋಜನೆ ರೂಪಿಸಿ ಎಲ್ಲ ಇಲಾಖೆ ಹಾಗೂ ವಿಜ್ಞಾನಿಗಳು ಶ್ರಮಿಸಿದ್ದಾರೆ. ಒಂದೇ ಸೂರಿನಡಿ ಸಹಸ್ರಾರು ಜನರಿಗೆ ಕೃಷಿಗೆ ಸಂಬಂಧಿಸಿದ ಮಾಹಿತಿಯನ್ನು ನೀಡುವುದು ಇದರ ಉದ್ದೇಶವಾಗಿದೆ ಎಂದರು.

ಸರ್ಕಾರಿ ಇಲಾಖೆಗಳಲ್ಲಿ ರೈತರಿಗೆ ದೊರಕುವ ಸವಲತ್ತು, ಸೇವೆಗಳು, ಸಂಶೋಧನಾ ಕೇಂದ್ರದಿಂದ ಸುಧಾರಿತ ತಳಿಗಳು, ಖಾಸಗಿ ಕಂಪನಿಗಳು ರೈತರಿಗೆ ಮಾರಾಟ ಮಾಡುವ ಕೀಟನಾಶಕಗಳು, ಕೃಷಿ ಯಂತ್ರೋಪಕರಣಗಳು, ಪರಿಕರಗಳ ಬಗ್ಗೆ ಪರಿಚಯಿಸಲು ಮಳಿಗೆಗಳನ್ನು ಸಹ ತೆರೆಯಲಾಗಿದೆ. ಸುಧಾರಿತ ವಿವಿಧ ತಳಿಗಳ ತಾಕುಗಗಳನ್ನು ಇಲ್ಲಿ ಬೆಳೆಯಲಾಗಿದೆ. ಇದನ್ನು ವೀಕ್ಷಿಸಿದ ನಂತರ ರೈತರು ವಿಜ್ಞಾನಿಗಳೊಂದಿಗೆ ಚರ್ಚೆ ನಡೆಸಿದ್ದಾರೆ ಎಂದರು.

ಹಾಸನ ಕೃಷಿ ಮಹಾವಿದ್ಯಾಲಯ ಡೀನ್ ಡಾ.ಎಸ್.ಎಸ್.ವಾಸುದೇವನ್ ಮಾತನಾಡಿ, ವಿ.ಸಿ ಫಾರ್ಮ್ ಮಂಡ್ಯ ಜಿಲ್ಲೆಯ ಹೃದಯ ಭಾಗವಾಗಿದೆ.  ರಾಜ್ಯದಲ್ಲಿ  ಬೆಳೆಯುವಂತಹ ಪ್ರಮುಖ ಬೆಳೆಗಳಾದ  ಭತ್ತ, ಮೆಕ್ಕೆಜೋಳ, ಕಬ್ಬು, ಹತ್ತಿ ಹಾಗೆಯೇ ಜೋಳ, ಬಿಳಿ ಜೋಳ ಮತ್ತು ಮೇವಿನ ಬೆಳೆಗಳ ಪದ್ಧತಿ ಹಾಗೂ ಕೃಷಿ ಉಪಕರಣಗಳ ಬಳಕೆ  ಬಗ್ಗೆ ವಿ.ಸಿ.ಫಾರ್ಮ್ನ ಸಂಶೋಧನಾ ನಿರಂತರ ಪ್ರಯೋಗಗಳು ನಡೆಯುತ್ತಿರುತ್ತದೆ ಎಂದರು.

ಸುಮಾರು ೪೦-೪೫ ವರ್ಷಗಳಿಂದ ಕೃಷಿ ವಿಶ್ವವಿದ್ಯಾನಿಲಯದ ವಿಜ್ಞಾನಿಗಳು ಸತತ ಪ್ರಯತ್ನದಿಂದ ಹಲವರು ಸುಧಾರಿತ ತಳಿಗಳು,  ಹೈಬ್ರಿಡ್ ತಳಿಗಳನ್ನು ಬಿಡುಗಡೆ ಮಾಡಿ  ದಕ್ಷಿಣ ಒಣವಲಯ ಹಾಗೂ ರಾಜ್ಯದ ಹವಾಗುಣಕ್ಕೆ ಅನುಗುಣವಾಗಿ ಪರಿಚಯಿಸಿದ್ದಾರೆ. ವಲಯ ಸಂಶೋಧನಾ ಕೇಂದ್ರ ಮಂಡ್ಯ, ಮೈಸೂರು, ಚಾಮರಾಜನಗರ ಹಾಗೂ ಹಾಸನ ದಕ್ಷಿಣ ಒಣ ಪ್ರದೇಶಕ್ಕೆ ಬರುತ್ತದೆ. ಈ ನಾಲ್ಕು ಜಿಲ್ಲೆಗಳಲ್ಲಿ ಬೆಳೆಯುವಂತ ಪ್ರಮುಖ ಬೆಳೆಗಳನ್ನು ರೈತಾಪಿ ವರ್ಗಕ್ಕೆ ಬೇಕಾಗಿರುವಂತಹ ಬಿತ್ತನೆ ಬೀಜದ ಜತೆಗೆ ಅವರಿಗೆ ಮಾಹಿತಿಯನ್ನು ಕೊಡುವುದಕ್ಕೆ ಕೃಷಿಮೇಳವನ್ನು ಪ್ರತಿವರ್ಷ ಆಯೋಜಿಸುತ್ತಾ ಬರುತ್ತಿದ್ದೇವೆ ಎಂದರು.

ಡೀನ್ ಡಾ.ಎಸ್.ಎಸ್ ಪ್ರಕಾಶ್, ವಲಯ ಕೃಷಿ ಸಂಶೋಧನಾ ಕೇಂದ್ರದ ಸಹ ಸಂಶೋಧನಾ ನಿರ್ದೇಶಕರಾದ ಡಾ.ಎನ್.ಶಿವಕುಮಾರ್, ಡಾ.ಕೆ.ಬಿ.ಉಮೇಶ್, ಸಹ ವಿಸ್ತರಣಾ ನಿರ್ದೇಶಕ ಡಾ.ಡಿ.ರಘುಪತಿ, ಜಂಟಿ ಕೃಷಿ ನಿರ್ದೇಶಕ ವಿ.ಎಸ್.ಅಶೋಕ್, ಜಂಟಿ ಕೃಷಿ ನಿರ್ದೇಶಕಿ(ಕಾಡಾ) ಚಂದ್ರಕಲಾ, ಡಾ.ಬಿ.ಜಿ.ಶೇಖರ್ ಇತರರಿದ್ದರು.

ಕೃಷಿ ಇಲಾಖೆಗೆ ಪ್ರಶಸ್ತಿ: ಕೃಷಿ ಮೇಳಕ್ಕೆ ಸಂಬಂಧಿಸಿದಂತೆ ಅಭಿವೃದ್ಧಿ ಇಲಾಖೆಗಳ ವಿಭಾಗದಲ್ಲಿ "ಸುಸ್ಥಿರ ಕಬ್ಬಿನ ಬೇಸಾಯದ ಕ್ರಮ' ಕುರಿತು ಮಾದರಿ ಪ್ರದರ್ಶಿಸಿದ ಕೃಷಿ ಇಲಾಖೆ ಪ್ರಥಮ, ತೋಟಗಾರಿಕೆ ಇಲಾಖೆ ಎರಡು ಹಾಗೂ ರೇಷ್ಮೆ ಇಲಾಖೆ ಮೂರನೇ ಸ್ಥಾನ ಪಡೆದುಕೊಂಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net