

ಮಂಡ್ಯ: ಬೇಸಾಯವನ್ನು ಲಾಭದಾಯಕ ಉದ್ದಿಮೆಯನ್ನಾಗಿಸಲು ಉಪಕಸುಬುಗಳನ್ನು ಅಳವಡಿಸಿಕೊಳ್ಳುವುದು ಬಹುಮುಖ್ಯ ಎಂದು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ.ಎಸ್.ವಿ.ಸುರೇಶ್ ತಿಳಿಸಿದರು.
ತಾಲೂಕಿನ ಮಾರಗೌಡನಹಳ್ಳಿ ಗ್ರಾಮದಲ್ಲಿ ವಿ.ಸಿ.ಫಾರ್ಮ್‌ನ ಕೃಷಿ ಮಹಾವಿದ್ಯಾಲಯದ ಅಂತಿಮ ವರ್ಷದ ಬಿಎಸ್ಸಿ(ಆನ್ಸರ್ಸ್) ಕೃಷಿ ಹಾಗೂ ಡಿಪ್ಲೊಮಾ (ಕೃಷಿ) ವಿದ್ಯಾರ್ಥಿಗಳ ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರದ ಅಂಗವಾಗಿ ಆಯೋಜಿಸಿದ್ದ ಕೃಷಿ ವಸ್ತುಪ್ರದರ್ಶನ ಉದ್ಘಾಟಿಸಿ ಮಾತನಾಡಿದರು. ಕೃಷಿ ಲಾಭದಾಯಕ ಉದ್ದಿಮೆಯಾದರೆ ಯುವಕರೆಲ್ಲ ನಗರದ ಕಡೆಗೆ ವಲಸೆ ಹೋಗುವ ಸಂದರ್ಭ ಕಡಿಮೆಯಾಗಿ ಕೃಷಿಯಲ್ಲಿಯೇ ಜೀವನ ಕಟ್ಟಿಕೊಳ್ಳಬಹುದು ಎಂದರು.
ಬೇಸಾಯ ಬಹಳ ಕಷ್ಟಕರವಾಗುತ್ತಿದೆ ಮತ್ತು ಲಾಭದಾಯಕವಾಗುತ್ತಿಲ್ಲ. ಪರಿಣಾಮ, ವಲಸೆ ಹೆಚ್ಚಿ ಹಳ್ಳಿಗಳು ವೃದ್ಧಾಶ್ರಮವಾಗಿ ಬಿಡುತ್ತದೆ ಎಂಬ ಭಯ ಕಾಡುತ್ತಿದೆ. ಕೃಷಿಯನ್ನು ಪ್ರಗತಿಯತ್ತ ತೆಗೆದುಕೊಂಡು ಹೋಗುವ ಯುವಪಡೆ ನಗರದತ್ತ ಮುಖ ಮಾಡುತ್ತಿರುವುದು ಕೃಷಿಯ ಮೇಲೆ ಬಹಳ ಪರಿಣಾಮ ಬೀರುತ್ತಿದೆ. ವಲಸೆ ಹೋಗುತ್ತಿರುವ ಜನರನ್ನು ಕೃಷಿಯ ಕಡೆಗೆ ಆಕರ್ಷಿತರನ್ನಾಗಿ ಮಾಡಬೇಕು. ಕೃಷಿಯಲ್ಲಿ ಜೀವನವನ್ನು ಕಟ್ಟಿಕೊಳ್ಳಬಹುದು ಎಂಬ ಭಾವನೆಯನ್ನು ಬೆಳೆಸಬೇಕಿರುವುದು ಕೃಷಿ ವಿಜ್ಞಾನಿಗಳು, ವಿಸ್ತರಣಾ ಕಾರ್ಯಕರ್ತರ ಕರ್ತವ್ಯವಾಗಿದೆ ಎಂದು ತಿಳಿಸಿದರು.
ಕೃಷಿ ವಿಷಯಗಳಲ್ಲಿ ಏನೇ ಕೆಲಸಗಳಾಗುತ್ತಿದ್ದರೂ ಲಾಭದಾಯಕವೆಂದರೆ ಬಹಳಷ್ಟು ಜನ ಒಪ್ಪಿಕೊಳ್ಳಲ್ಲ. ಕೃಷಿ ಕಾಲೇಜಿನ ವಿಧ್ಯಾರ್ಥಿಗಳು 3 ತಿಂಗಳು ಮಾರಗೌಡನಹಳ್ಳಿಯಲ್ಲಿದ್ದು, ಗ್ರಾಮೀಣ ಭಾಗದಲ್ಲಿ ವಾಸಿಸುತ್ತಿರುವ ರೈತರ ಜೀವನ ಯಾವ ರೀತಿ ಇದೆ. ಅವರ ಕೃಷಿ ಹೇಗೆ ನಡೆಯುತ್ತಿದೆ. ಬೇಸಾಯದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಸಂದರ್ಭದಲ್ಲಿ ಬರುತ್ತಿರುವ ಕುಂದು ಕೊರತೆಗಳೇನು ಎಂಬುದರ ಬಗ್ಗೆ ಅಧ್ಯಯನ ನಡೆಸಿದ್ದಾರೆ. ರೈತರ ಕಷ್ಟವನ್ನು ಹೇಗೆ ಅವರು ನಿವಾರಣೆ ಮಾಡಿಕೊಳ್ಳುತ್ತಿದ್ದಾರೆ. ಇದಕ್ಕೆ ವಿಶ್ವವಿದ್ಯಾಲಯಗಳು ಯಾವ ರೀತಿ ರೈತರೊಂದಿಗೆ ಕೈಜೋಡಿಸಬೇಕು ಎಂಬ ಸಮಸ್ಯೆಯನ್ನು ಸಹ ಅಧ್ಯಯನ ಮಾಡಿದ್ದಾರೆ. ಮಾತ್ರವಲ್ಲದೆ ರೈತರೊಂದಿಗೆ ಒಡನಾಟ ಮಾಡಿ ಹೆಚ್ಚಿನ ವಿಷಯಗಳನ್ನು ತಿಳಿದುಕೊಂಡು ಅವರ ಸಮಸ್ಯೆಗಳನ್ನು ವಿಶ್ಲೇಷಣೆ ಮಾಡಿ ಅದನ್ನು ನಿವಾರಣೆ ಮಾಡುವ ನಿಟ್ಟಿನಲ್ಲಿ ನಮ್ಮ ವೈಜ್ಞಾನಿಕ ತಂತ್ರಜ್ಞಾನಗಳನ್ನು ಅವರಿಗೆ ತಿಳಿ ಹೇಳುವ ಉದ್ದೇಶಕ್ಕಾಗಿಯೇ ಮೂರು ತಿಂಗಳು ವಿದ್ಯಾರ್ಥಿಗಳನ್ನು ರೈತರ ಒಟ್ಟಿಗೆ ಬಿಡಲಾಗಿತ್ತು ಎಂದು ವಿವರಿಸಿದರು.
ಕೃಷಿ ಕಾಲೇಜಿನ ವಿದ್ಯಾರ್ಥಿಗಳು 3 ತಿಂಗಳಲ್ಲಿ ಹಳ್ಳಿಗಳಲ್ಲಿನ ಸಮಸ್ಯೆಗಳೇನು ಎಂದು ತಿಳಿದುಕೊಂಡು ಕೆಲ ವಿಷಯಗಳನ್ನು ಕುರಿತು 16 ರಿಂದ 18 ಮಳಿಗೆಗಳಲ್ಲಿ ವಿಶ್ಲೇಷಿಸಿದ್ದಾರೆ. ಪ್ರತಿ ವಿದ್ಯಾರ್ಥಿಯು ಕಷ್ಟ ಪಟ್ಟು ವಿಷಯಗಳನ್ನು ರೈತರಿಂದ ಹೊರಗೆ ತೆಗೆದು ಪ್ರದರ್ಶಿಸುತ್ತಿದ್ದಾರೆ ಎಂದರೆ ಹಳ್ಳಿಯ ರೈತನ ಬದುಕು ಏನೆಂದು ಮಕ್ಕಳಿಗೆ ಅರ್ಥವಾಗುತ್ತಿದೆ. ವಿದ್ಯಾರ್ಥಿಗಳೊಂದಿಗೆ ಎಲ್ಲರೂ ಸಹ ಹೊಂದಿಕೊಂಡಿದ್ದಾರೆ. ಗ್ರಾಮದಲ್ಲಿ ಎಲ್ಲರ ಒಗ್ಗಟ್ಟನ್ನು ನೋಡಿ ಬಹಳ ಖುಷಿಯಾಯಿತು. ಏಕ ಬೆಳೆಯಲ್ಲಿ ದುಡಿಮೆ ಮಾಡಿದರೆ ಒಂದಲ್ಲ ಒಂದು ಸಂಕಷ್ಟಕ್ಕೆ ಸಿಲುಕುತ್ತೇವೆ. ಆದ್ದರಿಂದ ಕೃಷಿ ಜತೆಗೆ ಹೈನುಗಾರಿಕೆ, ಜೇನು ಸಾಕಣೆ ಮಾಡುವುದರಿಂದ ಲಾಭ ಗಳಿಸಬಹುದು. ಮಾತ್ರವಲ್ಲದೆ ನಾಟಿಕೋಳಿ ಸಾಕಣೆಯಂತಹ ಉಪಕಸುಬು ಇಡೀ ವರ್ಷ ನಿರಂತರವಾಗಿ ರೈತರು ಆದಾಯವನ್ನು ನಿರೀಕ್ಷಣೆ ಮಾಡಬಹುದು ಎಂದರು.
ಕೃಷಿ ಘಟಕದಲ್ಲಿ 80ರಷ್ಟು ಕಾರ್ಯ ಚಟುವಟಿಕೆಗಳನ್ನು ಮಹಿಳೆಯರೆ ಮಾಡುತ್ತಿದ್ದಾರೆ. ಮಹಿಳೆಯರು ಮನೆಯನ್ನು ನೋಡಿಕೊಳ್ಳುವುದರ ಜತೆಗೆ ಮಕ್ಕಳ ವಿದ್ಯಾಭ್ಯಾಸವನ್ನು ನೋಡಿಕೊಳ್ಳುತ್ತ ಸಾಕಷ್ಟು ಉಪಕಸುಬುಗಳನ್ನು ಹಳ್ಳಿಗಳಲ್ಲಿ ಅಳವಡಿಸಿಕೊಳ್ಳುತ್ತಿದ್ದಾರೆ. ಒಂದು ಮನೆಯನ್ನು ಪೋಷಣೆ ಮಾಡುವ ಹೆಚ್ಚಿನ ಮಟ್ಟದ ತಿಳಿವಳಿಕೆ ಮಹಿಳೆಯರಿಗಿದೆ. ಆದ್ದರಿಂದ ಕೃಷಿ ಕಾರ್ಯಕ್ರಮಗಳು ಮಹಿಳೆಯರನ್ನು ಸಬಲೀಕರಣ ಮಾಡಿ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಅವರ ಮಟ್ಟಗಳನ್ನು ಸುಧಾರಿಸಬೇಕೆಂದು ಹಲವಾರು ಕಾರ್ಯಕ್ರಮಗಳನ್ನು ಅವರಿಗಾಗಿಯೇ ಹಮ್ಮಿಕೊಳ್ಳುತ್ತಿದ್ದೇವೆ ಎಂದರು.
ಕೃಷಿ ಮಹಾವಿದ್ಯಾಲಯದ ಡೀನ್(ಕೃಷಿ) ಡಾ.ಎಸ್.ಎಸ್.ಪ್ರಕಾಶ್, ಸಹ ನಿರ್ದೇಶಕರಾದ ಡಾ.ಎನ್.ಶಿವಕುಮಾರ್, ಸಹ ವಿಸ್ತರಣಾ ನಿರ್ದೇಶಕ ಡಾ.ಡಿ.ರಘುಪತಿ, ಡಿಪ್ಲೊಮಾ(ಕೃಷಿ) ಮಹಾವಿದ್ಯಾಲಯದ ಪ್ರಾಂಶುಪಾಲೆ ಡಾ.ಪಿ.ಎಸ್.ಫಾತಿಮಾ, ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಡಾ.ಎನ್.ಟಿ.ನರೇಶ್ ಇತರರಿದ್ದರು. ಗ್ರಾಮದ ರೈತರು ಹಾಗೂ ರೈತ ಮಹಿಳೆಯರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.