

ಮಂಡ್ಯ: ಇತ್ತೀಚೆಗೆ ನಡೆದ ರಾಜ್ಯಮಟ್ಟದ ಬ್ರೈನ್ ಓ ಥಾನ್ ಪರೀಕ್ಷೆಯಲ್ಲಿ ನಗರದ ಡ್ಯಾಪೋಡಿಲ್ಸ್ ಪ್ರೌಢಶಾಲೆಯ 8ನೇ ತರಗತಿ ವಿದ್ಯಾರ್ಥಿನಿ ಕೃತಿ ಶೇ.99ರಷ್ಟು ಅಂಕಗಳಿಸಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ ಎಂದು ಸಂಸ್ಥೆಯ ಕಾರ್ಯದರ್ಶಿ ಸುಜಾತಾ ಕೃಷ್ಣ ಹೇಳಿದರು.
ಬ್ರೈನ್ ಸೆಂಟರ್ ಹಾಗೂ ಖಾಸಗಿ ಶಾಲೆಗಳ ಸಂಘಟನೆಯಾದ ಕ್ಯಾಮ್ಸ್ ಸಹಯೋಗದಲ್ಲಿ ಬ್ರೈನ್ ಓ ಥಾನ್ ಪರೀಕ್ಷೆ ನಡೆಸಲಾಗಿತ್ತು. ಇದೊಂದು ಸಾರ್ವತ್ರಿಕ ವಿಷಯಾಧಾರಿತ, ವಿದ್ಯಾರ್ಥಿಗಳ ಸಾಮರ್ಥ್ಯ, ವಿಶ್ಲೇಷಣಾತ್ಮಕ ಮತ್ತು ವಿಮರ್ಶನಾತ್ಮಕ ಚಿಂತನೆಗಳನ್ನು ಉತ್ತೇಜಿಸಲು ವಿನ್ಯಾಸಗೊಳಿಸಲಾದ ಸ್ಪರ್ಧಾ ಪರೀಕ್ಷೆ ಎಂದು ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.
ಪರೀಕ್ಷೆಯಲ್ಲಿ 57 ಸಾವಿರ ವಿದ್ಯಾರ್ಥಿಗಳು ಮತ್ತು ನಮ್ಮ ಶಾಲೆಯಿಂದ 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಅದರಲ್ಲಿ ಕೃತಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ಕ್ಯಾಮ್ಸ್‌ನ ವತಿಯಿಂದ ಒಂದು ಲಕ್ಷ ರೂ ನಗದು ಬಹುಮಾನ ಹಾಗೂ ಆಕೆಯ ಕುಟುಂಬಕ್ಕೆ ಗೋವಾ ಪ್ರವಾಸವನ್ನು ಬಹುಮಾನವಾಗಿ ನೀಡಿದೆ. ಅಂತೆಯೇ ಶಾಲೆಯ 6ನೇ ತರಗತಿಯ ಸೈಯ್ಯದ್ ಶುರೈಮ್ ಶೇ.97 ರಷ್ಟು ಅಂಕ ಪಡೆದು ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಶಾಲೆಯ ಶಿಕ್ಷಕಿ ತರುಣ ಅವರು ಶೇ.98ರಷ್ಟು ಅಂಕಗಳಿಸಿ ರಾಜ್ಯಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ ಪಡೆದಿದ್ದಾರೆ ಎಂದು ಹೇಳಿದರು.
ಸಂಸ್ಥೆಯ ಅಧ್ಯಕ್ಷ ಡಾ.ಪ್ರದೀಪ್‌ಕುಮಾರ್ ಹೆಬ್ರಿ, ಶಾಲೆಯ ಮುಖ್ಯಶಿಕ್ಷಕಿ ನಯನಾ, ಶಿಕ್ಷಕಿ ತರುಣ, ವಿದ್ಯಾರ್ಥಿಗಳಾದ ಕೃತಿ ಹಾಗೂ ಸೈಯ್ಯದ್ ಶುರೈಮ್ ಇದ್ದರು.