ಕೊರಟಗೆರೆಯನ್ನು ಬರಪೀಡಿತ ತಾಲೂಕಾಗಿ ಘೋಷಿಸಿ ; ಶಾಸಕ ಡಾ.ಜಿ.ಪರಮೇಶ್ವರ್ ಒತ್ತಾಯ

18 KrT 1
Published on

ಕೊರಟಗೆರೆ: ತಾಲೂಕು ಅತಿವೃಷ್ಟಿ ಮತ್ತು ಅನಾವೃಷ್ಟಿ ಎರಡನ್ನೂ ಕಂಡಿದ್ದು, ರೈತರು ಸಂಕಷ್ಟದಲ್ಲಿ ಇರುವುದರಿಂದ ಸರ್ಕಾರ ತಾಲೂಕನ್ನು ಬರಪೀಡಿತ ಎಂದು ಘೋಷಿಸಬೇಕೆಂದು ಶಾಸಕ ಡಾ.ಜಿ.ಪರಮೇಶ್ವರ್ ಒತ್ತಾಯಿಸಿದರು.

ಪಟ್ಟಣ ಹೊರವಲಯದ ಜಂಪೇನಹಳ್ಳಿ ಕೆರೆ ತುಂಬಿದ ಹಿನ್ನೆಲೆಯಲ್ಲಿ ಸೋಮವಾರ ಬಾಗಿನ ಅರ್ಪಿಸಿ ಮಾತನಾಡಿದ ಅವರು, ರಾಜ್ಯದ ಹಲವು ಕಡೆ ಅತಿವೃಷ್ಟಿ ಮತ್ತು ಅನಾವೃಷ್ಟಿ ಸಂಭವಿಸಿದ್ದು, ಅಪಾರ ಬೆಳೆನಷ್ಟ ಉಂಟಾಗಿದೆ. ಸರ್ಕಾರ ಶೀಘ್ರ ರೈತರ ಸಂಕಷ್ಟಕ್ಕೆ ಸ್ಪಂದಿಸಿ ಸೂಕ್ತ ಪರಿಹಾರ ನೀಡಬೇಕೆಂದು ಮನವಿ ಮಾಡಿದರು.

ಜಂಪೇನಹಳ್ಳಿ ಕೆರೆ ಅಂಗಳದಲ್ಲಿ ನಿರ್ಮಾಣವಾಗಿದ್ದ ವೀಕ್ಷಣಾ ಮಂದಿರ ನಾಶವಾಗಿದೆ. ಅನುಮತಿ ಪಡೆಯದೆ ಎತ್ತಿನಹೊಳೆ ಅಧಿಕಾರಿ ವರ್ಗ ಕೋಡಿ ಒಡೆಯುವ ಕೆಲಸ ಮಾಡಿದ್ದಾರೆ. ಕೆರೆ ಏರಿ ಮತ್ತು ಕೋಡಿಯ ಮೇಲೆ ಬೆಳೆದಿರುವ ಗಿಡಗಳನ್ನು ತೆರವುಗೊಳಿಸಿ ಕೆರೆಯನ್ನು ಸಣ್ಣ ನೀರಾವರಿ ಇಲಾಖೆ ಕಾಪಾಡಬೇಕಿದೆ ಎಂದು ಸೂಚಿಸಿದರು.

ಬ್ಲಾಕ್ ಕಾಂಗ್ರೆಸ್ ನಗರ ಅಧ್ಯಕ್ಷ ಕೋಡ್ಲಹಳ್ಳಿ ಅಶ್ವತ್ಥ್ ನಾರಾಯಣ, ಗ್ರಾಮಾಂತರ ಅಧ್ಯಕ್ಷ ಅರಕೆರೆ ಶಂಕರ್, ಮಹಿಳಾ ಅಧ್ಯಕ್ಷೆ ಜಯಮ್ಮ, ಯುವ ಅಧ್ಯಕ್ಷ ವಿನಯ್ ಕುಮಾರ್, ಜಿಪಂ ಮಾಜಿ ಸದಸ್ಯ ಟಿ.ಡಿ ಪ್ರಸನ್ನಕುಮಾರ್, ಮುಖ್ಯಾಧಿಕಾರಿ ಲಕ್ಷ್ಮಣ್ ಕುಮಾರ್, ಪಪಂ ಸದಸ್ಯರಾದ ಎ.ಡಿ.ಬಲರಾಮಯ್ಯ, ಕೆ.ಆರ್.ಓಬಳರಾಜು, ಕೆ.ಎನ್ ಲಕ್ಷ್ಮೀನಾರಾಯನ್, ರಂಗನಾಥ್, ಗೋವಿಂದರಾಜು, ರಮೇಶ್, ಗಣೇಶ್, ಜಮೀರ್, ಕಾರ್ ಮಹೇಶ್ ಇದ್ದರು.

ಜಂಪೇನಹಳ್ಳಿ ಕೆರೆ ಒತ್ತುವರಿಯಾಗಿರುವ ಬಗ್ಗೆ ಆರೋಪಗಳು ಕೇಳಿ ಬರುತ್ತಿವೆ. ಸರ್ವೇ ಮಾಡಿ ಒತ್ತುವರಿ ತೆರವಿಗೆ ಸಣ್ಣ ನೀರಾವರಿ, ಕಂದಾಯ, ಅರಣ್ಯ ಇಲಾಖೆ ಹಾಗೂ ಜೆಟ್ಟಿ ಅಗ್ರಹಾರ ಗ್ರಾಪಂ ಒಗ್ಗೂಡಿ ಕ್ರಮ ಕೈಗೊಳ್ಳಬೇಕು. ಹಿಂದೆ ಇದ್ದ ತಹಸೀಲ್ದಾರ್‌ಗೆ ಸೂಚಿಸಿದ್ದರೂ ಕ್ರಮ ಕೈಗೊಂಡಿಲ್ಲ, ಈಗ ಇರುವ ತಹಸೀಲ್ದಾರ್‌ಗೆ ಸರ್ವೇ ಮಾಡಿಸಿ ವರದಿ ನೀಡುವಂತೆ ಸೂಚಿಸಿದ್ದೇನೆ. ಡಾ.ಜಿ.ಪರಮೇಶ್ವರ್, ಕೊರಟಗೆರೆ ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net