

ಮಡಿಕೇರಿ: ಮುಖ್ಯಮಂತ್ರಿ ಹಾಗೂ ಸಚಿವರಿಗೆ ಜೈಲಿಗೆ ಹೋಗುವ ಭಯದಿಂದ ಕರ್ನಾಟಕ ಲೋಕಾಯುಕ್ತವನ್ನು ಬಲ ಪಡಿಸುತ್ತಿಲ್ಲ. ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಉಳಿಸಿಕೊಳ್ಳಲು ಹೈಕೋಟರ್ ಆದೇಶವನ್ನು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಿದ್ದಾರೆಂದು ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್‌ಎಸ್) ಅಧ್ಯಕ್ಷ ರವಿ ಕೃಷ್ಣಾರೆಡ್ಡಿ ಆರೋಪಿಸಿದ್ದಾರೆ.
ಕರ್ನಾಟಕ ಜನಚೈತನ್ಯ ಯಾತ್ರೆ ಭಾಗವಾಗಿ ಮಂಗಳವಾರ ಕೊಡಗಿಗೆ ಆಗಮಿಸಿದ್ದ ಅವರು ಮಂಗಳವಾರ ಮಡಿಕೇರಿಯಲ್ಲಿ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿದರು. ಬಿಜೆಪಿ ಅಧಿಕಾರಕ್ಕೆ ಬಂದ ಸಂದರ್ಭ ಎಲ್ಲಾ ಭ್ರಷ್ಟಾಚಾರ ಮಿತಿಮೀರಿ ನಡೆದಿದೆ. ಭಿನ್ನ ಪಕ್ಷ ಎಂದು ಅಧಿಕಾರಕ್ಕೆ ಬಂದವರು ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆಂದು ಟೀಕಿಸಿದರು.
ರಾಜ್ಯದಲ್ಲಿ ಶೇ.೪೦ ರಷ್ಟು ಕಮಿಷನ್ ಪಡೆಯುವ ೪೦ ಕಳ್ಳರ ಸರ್ಕಾರ ಆಡಳಿತದಲ್ಲಿದೆ. ಲೋಕಾಯುಕ್ತ ಬಲ ಪಡಿಸಿದ್ದಲ್ಲಿ ೨೦೦೮ ರಿಂದ ೧೩ ರವರೆಗೆ ಜೈಲಿಗೆ ಹೋದ್ದಂತೆ ಹಾಲಿ ಆಡಳಿತ ನಡೆಸುತ್ತಿರುವವರು ಜೈಲಿಗೆ ಹೋಗುತ್ತಾರೆ. ಎಸ್.ಆರ್. ಹಿರೇಮಠ್ ಲೋಕಾಯುಕ್ತ ಬಲ ಪಡಿಸುವ ನಿಟ್ಟಿನಲ್ಲಿ ಸುಪ್ರೀಂಕೋಟರ್‌ನಲ್ಲಿಯೂ ತಮ್ಮ ಪ್ರಯತ್ನ ಮುಂದುವರಿಸಲಿದ್ದಾರೆ. ಆ ಮೂಲಕ ರಾಜ್ಯದ ಹಿತಕಾಯುವ ಕೆಲಸ ಮಾಡಲಿದ್ದಾರೆಂದರು.
ಪ್ರಾಮಾಣಿಕತೆ ಇಟ್ಟುಕೊಂಡಿರುವ ದೇಶಭಕ್ತ ಬಿಜೆಪಿ ಕಾರ್ಯಕರ್ತರು ಕರ್ನಾಟಕ ಲೋಕಾಯುಕ್ತ ಬಲ ಪಡಿಸಲು ಸರ್ಕಾರದ ಮೇಲೆ ಒತ್ತಡ ಹೇರಬೇಕು. ಇತರೆ ರಾಜಕೀಯ ಪಕ್ಷಕ್ಕಿಂತ ಭಿನ್ನ ಎಂಬ ಕಾರಣಕ್ಕಾಗಿ ಬಿಜೆಪಿಗೆ ಮತ ಚಲಾಯಿಸಿದ ಮತದಾರರು ಇವರನ್ನು ಪ್ರಶ್ನಿಸಿ ಬೇಕೆಂದು ಮನವಿ ಮಾಡಿದರು.
ದೇಶದ ಗಡಿ ಕಾಯಲು ತ್ಯಾಗ, ಬಲಿದಾನ ಮಾಡಿದವರು ಕೊಡಗಿನರು. ಕೊಡಗಿನಲ್ಲಿ ಇತ್ತೀಚೆಗೆ ನಡೆದಿರುವ ಅಹಿತಕರ ಘಟನೆ ಖಂಡನೀ ಯ. ಜಿಲ್ಲಾಡಳಿತ ಜಾರಿಗೊಳಿಸಿರುವ ನಿಷೇಧಾಜ್ಞೆ ತಕ್ಷಣ ತೆರವುಗೊಳಿಸಿ, ಸಹಜ ಜನಜೀವನ ನಡೆಯಲು ಅನುವು ಮಾಡಿಕೊಡಬೇಕೆಂದು ಆಗ್ರಹಿಸಿದರು.
ಮೊಟ್ಟೆ ಎಸೆದಿರುವುದು ವಿಷಾದನೀಯ. ಕಿಡಿಗೇಡಿಗಳು ಸಿದ್ದರಾಮಯ್ಯ ತೆರಳುತ್ತಿದ್ದ ಕಾರಿಗೆ ಮೊಟ್ಟೆ ಎಸೆದಿರುವುದನ್ನು ಕೆಆರ್‌ಎಸ್ ಪಕ್ಷ ಖಂಡಿಸುತ್ತದೆ. ಸಿದ್ದರಾಮಯ್ಯ ವಿಧಾನಸಭೆ ಪ್ರತಿಪಕ್ಷ ನಾಯಕನ ಜವಾಬ್ದಾರಿ ಅರಿತು ರಾಜ್ಯ ಪ್ರವಾಸ ಪ್ರಾರಂಭಿಸಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಸೂಕ್ಷ್ಮ ವಿಚಾರ ಮಾತನಾಡುವುದನ್ನು ಸಿದ್ದರಾಮಯ್ಯ ನಿಲ್ಲಿಸಬೇಕೆಂದು ಮನವಿ ಮಾಡಿದರು.
ಜೆಸಿಬಿ (ಜನತಾದಳ, ಕಾಂಗ್ರೆಸ್, ಬಿಜೆಪಿ) ನಾಯಕರಿಗೆ ಜನಪರ ವಿಚಾರದ ಬಗ್ಗೆ ಕಾಳಜಿ ಇಲ್ಲ. ಖಾಲಿ- ಪೋಲಿ ವಿಚಾರ ಮಾತನಾಡುತ್ತಿ
ದ್ದಾರೆ. ರಾಜ್ಯದ ಜನತೆ ಜೆಸಿಬಿ ಪಕ್ಷ ಅಧಿಕಾರದಿಂದ ದೂರವಿಟ್ಟು, ಪ್ರಾಮಾಣಿಕ ರಾಜಕೀಯ ಮಾಡುವ ಕೆಆರ್‌ಎಸ್ ಪಕ್ಷ ಬೆಂಬಲಿಸಲಿ ದ್ದಾರೆಂದು ವಿಶ್ವಾಸ ವ್ಯಕ್ತ ಪಡಿಸಿದರು.
ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆಯಲ್ಲಿಯೂ ಕೆಆರ್‌ಎಸ್ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ. ಒಂದು ಓಟು. ಒಂದು ನೋಟು ಅಭಿಯಾನ ನಡೆಯುತ್ತಿದೆ. ಕೆಆರ್‌ಎಸ್ ಪಕ್ಷ ಜನರ ದೇಣಿಗೆಯಿಂದ ನಡೆಯುತ್ತಿದೆ ಎಂದು ರವಿ ಕೃಷ್ಣಾರೆಡ್ಡಿ ಹೇಳಿದರು.
ಕೆಆರ್‌ಎಸ್ ರಾಜ್ಯ ಜಂಟಿ ಕಾರ್ಯದರ್ಶಿ ಸೋಮ ಸುಂದರ್, ಜಿಲ್ಲಾ ಸಂಚಾಲಕರಾದ ಎನ್.ಎಂ. ಸಜೀರ್, ಎಂ.ಕೆ. ಆಷಿಕ್, ಪದಾಧಿಕಾರಿಗಳಾದ ಪಿ. ಮಿಥುನ್ ಮತ್ತಿತರರು ಇದ್ದರು.