ಬಂಡಿದಾರಿ ಮುಚ್ಚುವ ಹುನ್ನಾರಕ್ಕೆ ವಿರೋಧ

24-09-24--krs3
Published on
  • ಕೆ.ಆರ್.ಸಾಗರ : ನೂರಾರು ವರ್ಷಗಳಿಂದ ಇದ್ದ ಬಂಡಿದಾರಿಯನ್ನು ಮುಚ್ಚಿ ಖಾಸಗಿ ಕಂಪನಿಯವರು ವಾಣಿಜ್ಯ ನಿವೇಶನ ಮಾಡುತ್ತಿದ್ದಾರೆಂದು ಆರೋಪಿಸಿ ಹುಲಿಕೆರೆ ಗ್ರಾಮಸ್ಥರು ಮಂಗಳವಾರ ಕಾಮಗಾರಿ ತಡೆದು ಪ್ರತಿಭಟನೆ ನಡೆಸಿದರು.
    ಹಲವು ವರ್ಷಗಳಿಂದ ಹುಲಿಕೆರೆ ಸರ್ವೆ ನಂ. 105 ರಲ್ಲಿ 30 ಗುಂಟೆ ಜಾಗದಲ್ಲಿ ಹೊಂಗಳ್ಳಿ- ಹುಲಿಕೆರೆ ಸಂಪರ್ಕದ ಬಂಡಿದಾರಿ ಇದೆ. ಇದು ಕಂದಾಯ ದಾಖಲೆಯಲ್ಲೂ ಇದೆ. ಆದರೆ ಜುವಾರಿ ಕಂಪನಿ ಸಿಬ್ಬಂದಿ ಈ ಸ್ಥಳದಲ್ಲೇ ಕಾಮಗಾರಿ ಮುಂದುವರಿಸಿದ್ದಾರೆಂದು ಪ್ರತಿಭಟನಾಕಾರರು ಘೋಷಣೆ ಕೂಗಿದರು. ಈ ಹಿಂದೆಯೂ ಇದೇ ಸಂಸ್ಥೆಯವರು ಬಂಡಿದಾರಿಯಲ್ಲಿ ಕಾಮಗಾರಿ ನಡೆಸಿದ್ದನ್ನು ವಿರೋಧಿಸಿದಾಗ, ಕಂದಾಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸ್ಥಳಪರಿಶೀಲನೆ ನಡೆಸಿ ದಾಖಲಾತಿ ಒದಗಿಸಲು ತಿಳಿಸಿದ್ದರು. ಮುಂದಿನ ಆದೇಶದ ತನಕ ಈ ಸ್ಥಳದಲ್ಲಿ ಕಾಮಗಾರಿ ಮಾಡದಂತೆ ಜುವಾರಿ ಕಂಪನಿಗೆ ಸೂಚನೆ ನೀಡಿದ್ದರು. ಆದರೂ ಕೆಲಸ ಮುಂದುವರಿದಿದೆ ಎಂದು ಗ್ರಾಮಸ್ಥರು ದೂರಿದರು.
    ಮುಡಾ ಬೇಜವಾಬ್ದಾರಿ: ಹುಲಿಕರೆ ಗ್ರಾ.ಪಂ ಮಾಜಿ ಉಪಾಧ್ಯಕ್ಷ ಚೆಲುವರಾಜು ಈ ಸಂದರ್ಭ ಮಾತನಾಡಿ, ಮುಡಾ ಅಧಿಕಾರಿಗಳ ಬೇಜವಾಬ್ದಾರಿ ಹಾಗೂ ನಿರ್ಲಕ್ಷಕ್ಕೆ ಸರ್ಕಾರಿ ಜಾಗ ಒತ್ತುವರಿ ಮಾಡಲಾಗುತ್ತಿದೆ. ಕಂದಾಯ ಇಲಾಖೆ ಜಾಗದಲ್ಲಿ ಅವೈಜ್ಞಾನಿಕ ಕಾಮಗಾರಿ ಮಾಡಲಾಗುತ್ತಿದೆ. ಈ ಬಗ್ಗೆ ಪ್ರತಿಭಟಿಸಿದರೆ ಪೊಲೀಸ್ ಠಾಣೆಗೆ ಗ್ರಾಮಸ್ಥರ ವಿರುದ್ಧ ದೂರು ನೀಡಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಬಂಡಿದಾರಿಯನ್ನು ಉಳಿಸಬೇಕು ಎಂದು ಅವರು ಒತ್ತಾಯಿಸಿದರು.
    ವಾಣಿಜ್ಯ ನಿವೇಶನ ಮಾಡುತ್ತಿದ್ದೇವೆ: ಸ್ಥಳಕ್ಕೆ ಆಗಮಿಸಿದ ಜುವಾರಿ ಕಂಪನಿ ಯೋಜನಾ ವ್ಯವಸ್ಥಾಪಕ ಬಿ.ಕೆ.ಸಿಂಗ್ ಪ್ರತಿಕ್ರಿಯಿಸಿ, ನಾವು ಕಾನೂನಿನ ಚೌಕಟ್ಟಿನಲ್ಲೇ ವಾಣಿಜ್ಯ ನಿವೇಶನ ಮಾಡುತ್ತಿದ್ದೇವೆ. ಮುಡಾ ನಿರ್ದೇಶನ ಅನುಸರಿಸಿದ್ದೇವೆ. ಸ್ಥಳೀಯರು ವಿರೋಧ ವ್ಯಕ್ತ ಪಡಿಸಿದ ಜಾಗದಲ್ಲೇ ರಸ್ತೆ ನಿರ್ಮಾಣ ಮಾಡುತ್ತಿದ್ದೇವೆ. ಸದ್ಯ ತಾತ್ಕಾ ಲಿಕವಾಗಿ ಕಾಮಗಾರಿ ನಿಲ್ಲಿಸಿದ್ದೇವೆ ಎಂದು ಪ್ರತಿಭಟನಾನಿರತರನ್ನು ಸಮಾಧಾನ ಪಡಿಸಲು ಯತ್ನಿಸಿದರು. ಮುಖಂಡರಾದ ಹುಲಿಕೆರೆ ಕುಂಟೇಗೌಡ, ಚೆಲುವೇಗೌಡ, ಮಹದೇವ, ಕೃಷ್ಣ, ಶ್ರೀನಿವಾಸ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net