

ಮಂಡ್ಯ: ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಮಿಮ್ಸ್)ಯಲ್ಲಿ ಚಿಕಿತ್ಸಾ ಶುಲ್ಕ ಇಳಿಕೆ ಮಾಡುವುದು ಸೇರಿದಂತೆ ವಿವಿಧ ಲೋಪ ದೋಷಗಳನ್ನು ಸರಿಪಡಿಸುವಂತೆ ಒತ್ತಾಯಿಸಿ ಕರುನಾಡ ಸೇವಕರು ಸಂಘಟನೆ ಮತ್ತು ಕೆಆರ್‌ಎಸ್ ಪಕ್ಷದ ಕಾರ್ಯಕರ್ತರು ಮಿಮ್ಸ್ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ವಿವಿಧ ಚಿಕಿತ್ಸಾ ವಿಭಾಗಕ್ಕೆ ಭೇಟಿ ನೀಡಿದ ಪ್ರತಿಭಟನಾಕಾರರು, ಆಯಾ ವಿಭಾಗದಲ್ಲಿ ವೈದ್ಯರು ಹಾಜರಿದ್ದಾರೆಯೇ ಎಂದು ಪರಿಶೀಲಿಸಿ, ಸಿಬ್ಬಂದಿಯನ್ನು ಪ್ರಶ್ನೆ ಮಾಡಿದರು. ಬಳಿಕ ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ಪ್ರಸ್ತುತ ಏರಿಕೆ ಮಾಡಿರುವ ತಪಾಸಣೆ ಹಾಗೂ ಚಿಕಿತ್ಸಾ ಶುಲ್ಕವನ್ನು ಇಳಿಸಬೇಕು. ಕರ್ತವ್ಯದ ವೇಳೆಯಲ್ಲಿ ವೈದ್ಯರು ಖಾಸಗಿ ಪ್ರಾಕ್ಟಿಸ್ ನಡೆಸದಂತೆ ನಿಗಾವಹಿಸಬೇಕು. ಸರ್ಕಾರಿ ಆದೇಶದಂತೆ ನಾಲ್ಕು ಬಾರಿ ಬಯೋಮೆಟ್ರಿಕ್ ಹಾಜರಾತಿ ಕಡ್ಡಾಯಗೊಳಿಸಬೇಕು. ಗುಣಮಟ್ಟದ ಚಿಕಿತ್ಸೆಯನ್ನು ಖಾತ್ರಿಗೊಳಿಸಬೇಕು. ರೋಗಿಗಳಿಗೆ ಅಗತ್ಯ ಔಷಧೋಪಚಾರ ಆಸ್ಪತ್ರೆಯಲ್ಲಿ ದೊರಕಬೇಕು. ಹೊರಗಡೆ ಯಾವುದೆ ಔಷಧಕ್ಕೆ ಕಳುಹಿಸಬಾರದು. ಆಸ್ಪತ್ರೆ ಆವರಣದಲ್ಲಿ ಮೆಡಿಕಲ್ ದಿನದ 24 ಗಂಟೆ ತೆರದಿರಬೇಕು. ಅಗತ್ಯ ಎಲ್ಲ ಔಷಧಗಳು ಲಭ್ಯವಿರಬೇಕು ಎಂದು ಒತ್ತಾಯಿಸಿದರು.
ಆಸ್ಪತ್ರೆಗೆ ಹೊರೆಯಾಗಿರುವ ರೋಗ ಪರೀಕ್ಷೆ ರಾಸಾಯನಿಕ ಸರಬರಾಜುಗಳ ಖಾಸಗಿ ನಿರ್ವಹಣೆಯ ಒಪ್ಪಂದ ಹಿಂಪಡೆಯಬೇಕು. ಮಾತ್ರವಲ್ಲದೆ ಹಳೆಯ ಪದ್ಧತಿಗೆ ಮರಳಬೇಕು. ಮೆಡಿಕಲ್ ವ್ಯಾಪ್ತಿಯ ತುಂಡು ಕಾಮಗಾರಿಗೆ ತಡೆಯೊಡ್ಡಬೇಕು. ಅವುಗಳ ಗುಣಮಟ್ಟ ಪರಿಶೀಲನೆ ಆಗುವರೆಗೆ ಯಾವುದೇ ಬಿಲ್ ನೀಡಬಾರದು. ರಾಜಕಾರಣಿಗಳು ಮತ್ತವರ ಹಿಂಬಾಲಕರು ಬೇನಾಮಿಯಾಗಿ ನಿರ್ಮಿತಿ ಕೇಂದ್ರ, ಲ್ಯಾಂಡ್ ಆರ್ಮಿ ಹೆಸರಿನಲ್ಲಿ ನಡೆಸುತ್ತಿರುವ ಕಾಮಗಾರಿಗಳು ನಿಲ್ಲಬೇಕು ಎಂದು ಆಗ್ರಹಿಸಿದರು.
ನಕಲಿ ದಾಖಲೆ ಮೂಲಕ ಟೆಂಡರ್ ಗಿಟ್ಟಿಸಿದ ಹಾಗೂ ಹಣ ಲಪಟಾಯಿಸಿದ ಏಜೆನ್ಸಿಗಳು ಮತ್ತು ಇದರಲ್ಲಿ ಭಾಗಿಯಾದ ಅಧಿಕಾರಿಗಳ ವಿರುದ್ಧ ನಿಯಮಾನುಸಾರ ತನಿಖೆ ನಡೆಸಿ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು. ನಗದು ವಿಭಾಗದಲ್ಲಿ ಆಗಿರುವ ಹಣಕಾಸು ಹಗರಣದ ಕುರಿತು ತಕ್ಷಣ ತನಿಖೆಗೆ ಮುಂದಾಗಬೇಕು. ಕರ್ತವ್ಯ ನಿರ್ಲಕ್ಷೃ ತೋರಿದ ಅಧಿಕಾರಿಗಳ ವಿರುದ್ಧ ಕ್ರಮ ಜರುಗಬೇಕು. ಮೆಡಿಕಲ್ ಕಾಲೇಜಿನ ವೈದ್ಯರ ವರ್ಗಾವಣೆ ಸಾಧ್ಯವಾಗುವಂತೆ ಬೈಲಾ ತಿದ್ದುಪಡಿಯಾಗಬೇಕು. ವೈದ್ಯರ ಸಲಹಾ ಚೀಟಿಯಲ್ಲಿ ಖಾಯಿಲೆಯ ಸ್ವರೂಪ, ಚಿಕಿತ್ಸೆಯ ವಿವರಗಳನ್ನು ಕನ್ನಡದಲ್ಲಿಯೇ ಬರೆಯಬೇಕು. ಮೆಡಿಕಲ್ ಕಾಲೇಜಿನ ಯಾವುದೆ ಪತ್ರ ಸೇರಿದಂತೆ ಪ್ರತಿಯೊಂದು ಕನ್ನಡದಲ್ಲಿ ಪ್ರಕಟವಾಗಬೇಕೆಂದು ಆಗ್ರಹಿಸಿದರು.
ತಮಿಳು ಕಾಲನಿ ಸೇರಿದಂತೆ ಖಾಸಗಿಯವರ ವಶವಾಗಿರುವ ಮೆಡಿಕಲ್ ಕಾಲೇಜು ಜಾಗವನ್ನು ಮಿಮ್ಸ್‌ಗೆ ಮರಳಿ ಪಡೆಯಲು ವಕೀಲರ ನಿಯೋಜನೆ ಮಾಡಬೇಕು. ಪ್ರತಿ ವಾರ್ಡ್‌ಗಳಲ್ಲಿ ಸಲಹೆ ಹಾಗೂ ದೂರು ಪೆಟ್ಟಿಗೆ ಅಳವಡಿಸಬೇಕು. ಅಂತೆಯೇ ಸ್ವೀಕೃತವಾದ ಮನವಿ/ದೂರನ್ನು ಆದ್ಯತೆಯ ಮೇಲೆ ಪರಿಹರಿಸಬೇಕು. ಶೀಘ್ರವೇ ಸಹಾಯವಾಣಿ ಆರಂಭಿಸಬೇಕು. ಕೀಲು ಮತ್ತು ಮೂಳೆ ವಿಭಾಗದ ವಾರ್ಡ್‌ಗಳಲ್ಲಿ ಪಾಶ್ಚಾತ್ಯ ಕಮೋಡ್ ಅಳವಡಿಸಬೇಕು. ಹೆರಿಗೆ ವಿಭಾಗದಲ್ಲಿ ರೋಗಿಗಳ ಸಂಖ್ಯೆಗನುಗುಣವಾಗಿ ಹಾಸಿಗೆ ವ್ಯವಸ್ಥೆ ಮಾಡಬೇಕೆಂದು ಆಗ್ರಹಿಸಿ ಮಿಮ್ಸ್ ನಿರ್ದೇಶಕ ಡಾ.ನರಸಿಂಹಮೂರ್ತಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಕರುನಾಡ ಸೇವಕರು ಸಂಘಟನೆಯ ಎಂ.ಬಿ.ನಾಗಣ್ಣಗೌಡ, ಕೆಆರ್‌ಎಸ್ ಪಕ್ಷದ ರಮೇಶ್‌ಗೌಡ, ಕರ್ನಾಟಕ ರಕ್ಷಣಾ ವೇದಿಕೆ(ಶಿವರಾಮೇಗೌಡ ಬಣ) ಜಿಲ್ಲಾಧ್ಯಕ್ಷ ಎಚ್.ಡಿ.ಜಯರಾಂ ಇತರರಿದ್ದರು.