

ವಿಜಯಪುರ: ಹಬ್ಬದ ಆಚರಣೆ ಹೆಸರಲ್ಲಿ ವ್ಯಾಪಾರಿಗಳು, ಉದ್ಯಮಿಗಳು ಹಾಗೂ ಅಂಗಡಿಕಾರರಿಂದ ಹಣ ವಸೂಲಿ ಮಾಡುತ್ತಿರುವ ಆರೋಪ ಪೊಲೀಸರ ಮೇಲಿದ್ದು, ಹೆಸರು ಹೇಳಿಕೊಳ್ಳಲು ಭಯಬೀಳುತ್ತಿರುವ ಮತ್ತು ಸುಲಿಗೆ ತಡೆಯಲು ಸಾಮಾಜಿಕ ಸಂಘಟನೆಗಳಿಗೆ ಮೊರೆ ಇಟ್ಟವರ ರಕ್ಷಣೆಗೆ ಧಾವಿಸುವಂತೆ ಕರ್ನಾಟಕ ರಾಷ್ಟ್ರ ಸಮಿತಿ ಪದಾಧಿಕಾರಿಗಳು ಸೋಮವಾರ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.
ಭಾರತ ಬಹುತ್ವದ ದೇಶ. ಅನೇಕ ಧರ್ಮಗಳು, ಆಚರಣೆಗಳು, ಸಂಪ್ರದಾಯಗಳಿಂದ ಕೂಡಿದ ಈ ದೇಶದಲ್ಲಿ ಭಾವೈಕ್ಯತೆಯಿಂದ, ಸೌಹಾರ್ದತೆಯಿಂದ ಹಬ್ಬ ಹರಿದಿನಗಳನ್ನು ಆಚರಿಸಲಾಗುತ್ತದೆ. ಅನೇಕ ವ್ಯಾಪಾರಿಗಳು ಮತ್ತು ಉದ್ಯಮಿಗಳು ತಮ್ಮ ತಮ್ಮ ಅಂಗಡಿ ಮುಂಗಟ್ಟುಗಳಲ್ಲಿ ವಿಶೇಷ ಪೂಜೆ ಸಲ್ಲಿಸುತ್ತಾರೆ. ಅದೇ ರೀತಿ ಸರ್ಕಾರಿ ಕಚೇರಿಗಳಲ್ಲೂ ಹಬ್ಬ ಹರಿದಿನಗಳನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಗುತ್ತದೆ. ಆದರೆ, ಕೆಲವು ಪೊಲೀಸರು ಹಬ್ಬ-ಹರಿದಿನಗಳ ಹೆಸರಲ್ಲಿ ಹಣ ವಸೂಲಿ ದಂಧೆಗಿಳಿದಿರುವ ಆರೋಪ ಜೋರಾಗಿ ಕೇಳಿ ಬರುತ್ತಿದೆ. ಪ್ರತಿ ವರ್ಷ ದಸರಾ ಆಚರಣೆಯ ಆಯುಧ ಪೂಜೆ ಸಂದರ್ಭ ಪೊಲೀಸ್ ಇಲಾಖೆಯಲ್ಲಿ ವಿಶೇಷ ರೀತಿಯಲ್ಲಿ ಪೂಜೆ ನೆರವೇರಿಸಲಾಗುತ್ತದೆ. ಆದರೆ, ಈ ಆಚರಣೆಗೆ ವ್ಯಾಪಾರಿಗಳಿಂದ, ಉದ್ಯಮಿಗಳಿಂದ ‘ಖುಷಿ’ ಹೆಸರಲ್ಲಿ ಸಾವಿರಾರು ರೂಪಾಯಿ ಬಲವಂತವಾಗಿ ಪೀಕಲಾಗುತ್ತಿದೆ ಎಂದು ಅಂಗಡಿಕಾರರು ಅಳಲು ತೋಡಿಕೊಳ್ಳುತ್ತಿದ್ದಾರೆ ಎಂದು ಪದಾಧಿಕಾರಿಗಳು ತಿಳಿಸಿದರು.
ಪೊಲೀಸ್ ಸಿಬ್ಬಂದಿಯ ಈ ಕಾನೂನು ಬಾಹಿರ ಕೃತ್ಯದಿಂದಾಗಿ ವ್ಯಾಪಾರಸ್ಥರು ಯಾಕಾದರೂ ಈ ಆಚರಣೆಗಳು ಬಂದವೋ ಎಂದು ಶಪಿಸುವಂತಾಗಿದೆ. ಇದೊಂದು ಹಿಂಸೆಯಾಗಿ ಪರಿಣಮಿಸಿದ್ದು, ಬಹಿರಂಗವಾಗಿ ಹೇಳಿಕೊಳ್ಳಲೂ ಆಗದೇ ಹಣ ಕೊಡುವ ಸಾಮರ್ಥ್ಯವೂ ಇಲ್ಲದೇ ಒಳಗೊಳಗೇ ಸಂಕಟ ಅನುಭವಿಸುತ್ತಿದ್ದಾರೆ. ಕೆಲವು ವ್ಯಾಪಾರಸ್ಥರು ಕೆಆರ್‌ಎಸ್ ಪಕ್ಷದ ಮುಂದೆ ತಮ್ಮ ಸಂಕಟ ತೋಡಿಕೊಂಡಿದ್ದಾರೆ. ಹೀಗಾಗಿ ದಕ್ಷ-ಪ್ರಾಮಾಣಿಕತೆಗೆ ಹೆಸರಾದ ಕರ್ನಾಟಕ ಪೊಲೀಸ್ ಇಲಾಖೆಯಿಂದ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದ ರೀತಿಯಲ್ಲಿ ಉದ್ಯಮಿಗಳು, ವ್ಯಾಪಾರಿಗಳಿಂದ ಹಣ ವಸೂಲಿ ಮಾಡುವುದನ್ನು ತಡೆಯಬೇಕೆಂದು ಮನವಿ ಮಾಡಿದರು.
ಅಲ್ಲದೇ, ಪೊಲೀಸ್ ಇಲಾಖೆ ಕೂಡಲೇ ಸಾರ್ವಜನಿಕ ಪ್ರಕಟಣೆ ಹೊರಡಿಸಿ ಹಬ್ಬದಾಚರಣೆ ಹೆಸರಲ್ಲಿ ಹಣ ಕೇಳಿದರೆ ಮಾಹಿತಿ ನೀಡುವಂತೆ ಸಹಾಯವಾಣಿ ಸ್ಥಾಪಿಸಬೇಕು. ಮಾಹಿತಿ ನೀಡುವವರ ಹೆಸರು ಮತ್ತು ವಿಳಾಸವನ್ನು ಗೌಪ್ಯವಾಗಿರಿಸಬೇಕು. ಎಲ್ಲಕ್ಕಿಂತ ಹೆಚ್ಚಾಗಿ ಆಯಾ ಠಾಣೆ ಅಧಿಕಾರಿ ಮತ್ತು ಸಿಬ್ಬಂದಿ ಕಟ್ಟುನಿಟ್ಟಿನ ಸೂಚನೆ ನೀಡಬೇಕೆಂದು ಒತ್ತಾಯಿಸಿದರು.
ಮುಖಂಡರಾದ ಅಬ್ದುಲ್ ಹಮೀದ್ ಇನಾಮದಾರ, ದುರ್ಗಪ್ಪ ಬೂದಿಹಾಳ, ವಿಕ್ರಮ ವಾಘಮೋರೆ, ಪ್ರವೀಣ ರಾಯಗೊಂಡ, ಶೀನು ಹಿಪ್ಪರಗಿ, ಪ್ರವೀಣ ಕನಸೇ, ರಾಕೇಶ ಇಂಗಳಗಿ ಮತ್ತಿತರರಿದ್ದರು.