ರಾಜಕೀಯ ಅವಕಾಶ ಕೊಡದೆ ವಂಚನೆ: ಕೆಆರ್‌ಎಸ್ ಪಕ್ಷದ ಕಾರ್ಯದರ್ಶಿ ಜನನಿ ವತ್ಸಲಾ ಬೇಸರ

DSC_0005
Published on

ಮಂಡ್ಯ: ಎಲ್ಲ ರಾಜಕೀಯ ಪಕ್ಷಗಳೂ ಮಹಿಳೆಯರನ್ನು ದುಡಿಸಿಕೊಳ್ಳಲು ಬಳಸಿಕೊಳ್ಳುತ್ತಾರೆ. ಆದರೆ ಅವರಿಗೆ ಸ್ಥಾನಮಾನ ಕೊಡುವುದು, ಶಾಸಕ, ಸಂಸದ ಸ್ಥಾನಕ್ಕೆ ಸ್ಪರ್ಧಿಸಲು ಅವಕಾಶ ನೀಡುವುದೇ ಇಲ್ಲ. ಬದಲಿಗೆ ಪಂಚಾಯಿತಿ ಮಟ್ಟದ ಚುನಾವಣೆಗಳಿಗಷ್ಟೇ ಸೀಮಿತಗೊಳಿಸಿವೆ ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಬೆಂಗಳೂರು ಘಟಕದ ಕಾರ್ಯದರ್ಶಿ ಜನನಿ ವತ್ಸಲಾ ದೂರಿದರು.

ಒಂದು ವೇಳೆ ಚುನಾವಣೆಯಲ್ಲಿ ಸ್ಪರ್ಧಿಸಿ ಆಯ್ಕೆಯಾದರೂ ಮಹಿಳೆಗೆ ಅಧಿಕಾರ ಚಲಾಯಿಸಲು ಬಿಡದೆ ಆಕೆಯ ಗಂಡ, ಮಗ ಅಥವಾ ಸಂಬಂಧಿಕರು ಚಲಾವಣೆಯಲ್ಲಿರುತ್ತಾರೆ. ಇಂತಹ ಧೋರಣೆಯನ್ನು ಎಲ್ಲ ರಾಜಕೀಯ ಪಕ್ಷಗಳು ತಾಳಿವೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.

ರಾಜಕೀಯ ಪಕ್ಷಗಳಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಕಡಿಮೆಯಾಗಿದೆ. ಕೆಆರ್‌ಎಸ್ ಪಕ್ಷದ ಮೂಲಕ ರಾಜಕೀಯ ಕ್ಷೇತ್ರಕ್ಕೆ ಪ್ರವೇಶಿಸಲು ನಾಡಿನ ಮಹಿಳೆಯರಿಗೆ ಆಹ್ವಾನ ನೀಡಲಾಗುತ್ತಿದೆ. ಈ ನಿಟ್ಟಿನಲ್ಲಿ ಅಭಿಯಾನ ಆರಂಭಿಸಲಾಗಿದೆ. ಮೊದಲ ಹಂತವಾಗಿ ರಾಮನಗರ, ಮಂಡ್ಯ, ಮೈಸೂರು, ಹಾಸನ, ತುಮಕೂರು ಜಿಲ್ಲೆಗಳಲ್ಲಿ ನಡೆಯಲಿದೆ. ಮಹಿಳಾ ಗುಂಪುಗಳೊಂದಿಗೆ ಸಂವಾದ, ಚರ್ಚೆ, ಸದಸ್ಯತ್ವ ನೋಂದಣಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಆದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ರಾಜಕೀಯಕ್ಕೆ ಸೇರ್ಪಡೆಗೊಳ್ಳಬೇಕು ಎಂದು ಮನವಿ ಮಾಡಿದರು.

ಬೆಂಗಳೂರು ಘಟಕದ ಪ್ರಧಾನ ಕಾರ್ಯದರ್ಶಿ ಮಹಾಲಕ್ಷ್ಮೀ, ಧಾರವಾಡ ಜಿಲ್ಲಾಧ್ಯಕ್ಷೆ ಸುಮಿತ್ರಾ ಹಳ್ಳಿಕೇರಿ, ಕೋಲಾರ ಜಿಲ್ಲಾಧ್ಯಕ್ಷೆ ಇಂದಿರಾರೆಡ್ಡಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net