ಜ.6 ಮತ್ತು 7ರಂದು ಬೆಂಗಳೂರಿನಲ್ಲಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಆಕಾಂಕ್ಷಿತರ ಸಂದರ್ಶನ: ಕೆಆರ್‌ಎಸ್ ಪಕ್ಷದ ಜಿಲ್ಲಾಧ್ಯಕ್ಷ ರಮೇಶ್‌ಗೌಡ ಮಾಹಿತಿ

KRS Party District President Press Conference mandya
Published on

ಮಂಡ್ಯ: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ರಾಜ್ಯದ ಎಲ್ಲ 28 ಸ್ಥಾನಗಳಲ್ಲಿಯೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಜ.6 ಮತ್ತು 7ರಂದು ಬೆಂಗಳೂರಿನಲ್ಲಿ ನಡೆಯಲಿರುವ ಆಕಾಂಕ್ಷಿತರ ಸಂದರ್ಶನಕ್ಕೆ ಸ್ಪರ್ಧಾಕಾಂಕ್ಷಿಗಳು ಭಾಗವಹಿಸಬಹುದು ಎಂದು ಕೆಆರ್‌ಎಸ್ ಪಕ್ಷದ ಜಿಲ್ಲಾಧ್ಯಕ್ಷ ರಮೇಶ್‌ಗೌಡ ತಿಳಿಸಿದರು.

ಬೆಂಗಳೂರಿನ ಪಕ್ಷದ ಕಚೇರಿಯಲ್ಲಿ ಸಂದರ್ಶನ ಪ್ರಕ್ರಿಯೆ ನಡೆಯಲಿದೆ. ಈಗಾಗಲೇ ಪಕ್ಷದಲ್ಲಿ ಕಾರ್ಯಕರ್ತರಾಗಿ ಕೆಲಸ ಮಾಡುತ್ತಿರುವವರಿಗೆ 5 ಸಾವಿರ ರೂ ಹಾಗೂ ಪಕ್ಷಕ್ಕೆ ಹೊಸದಾಗಿ ಸೇರಿ ಸಂದರ್ಶನ ಎದುರಿಸುವವರಿಗೆ 10 ಸಾವಿರ ರೂ ಶುಲ್ಕ ನಿಗದಿಪಡಿಸಲಾಗಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಸಂದರ್ಶನದ ಬಳಿಕ ರಾಜ್ಯ ಸಮಿತಿಯು ಸಂಭಾವ್ಯ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ, ಪಟ್ಟಿ ಬಿಡುಗಡೆ ಮಾಡಲಿದೆ. ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಾಣ ಆಶಯದೊಂದಿಗೆ ಕೆಲಸ ಮಾಡಲಿಚ್ಛಿಸುವವರು ಪಕ್ಷವನ್ನು ಸೇರಿ ಸಂದರ್ಶನ ಎದುರಿಸಿ ಅಭ್ಯರ್ಥಿಗಳಾಗಿ ಕಣಕ್ಕಿಳಿಯಬಹುದು. ಆದರೆ, ಚುನಾವಣೆಯಲ್ಲಿ ಹಣ ಮತ್ತು ಮದ್ಯವನ್ನು ಹಂಚುವಂತಿಲ್ಲ ಎಂದರು.

ಲೋಕಸಭೆ ಚುನಾವಣೆ ತಯಾರಿ ಹಾಗೂ ಪ್ರಚಾರ ಸಂಬಂಧ ಪಕ್ಷದ ರಾಜ್ಯ ಸಮಿತಿಯು ಸುದೀರ್ಘವಾಗಿ ಚರ್ಚಿಸಿ, ಹಲವಾರು ಕಾರ್ಯಕ್ರಮ ರೂಪಿಸಿದೆ. ಪಕ್ಷಕ್ಕೆ ಅಗತ್ಯವಿರುವ ನಿಧಿಯನ್ನು ದೇಣಿಗೆ ಮೂಲಕ ಸಂಗ್ರಹಿಸುವ ಯೋಜನೆ ಹಾಗೂ ಯುವಜನರ ಒಳಗೊಳ್ಳುವಿಕೆ ಬಗ್ಗೆಯೂ ಗಂಭೀರ ಚರ್ಚೆ ನಡೆಸಲಾಗಿದೆ. ಈ ನಿಟ್ಟಿನಲ್ಲಿ ಪಕ್ಷವನ್ನು ತಳಮಟ್ಟದಿಂದ ಸಂಘಟಿಸುವ ಕೆಲಸ ನಡೆಯುತ್ತಿದ್ದು, ಶೀಘ್ರದಲ್ಲೇ ಜಿಲ್ಲಾ ಹಾಗೂ ತಾಲೂಕು ಸಮಿತಿಗಳನ್ನು ಪುನರ್ ರಚಿಸಲಾಗುತ್ತದೆ ಎಂದು ವಿವರಿಸಿದರು.

ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಂದ್ರು ಕೀಲಾರ, ಉಪಾಧ್ಯಕ್ಷ ಮಲ್ಲೇಶ್ ಹೆಬ್ಬಕವಾಡಿ, ತಾಲೂಕು ಕಾರ್ಯದರ್ಶಿ ಮಲ್ಲೇಶ್, ರೈತ ಘಟಕದ ಕಾರ್ಯದರ್ಶಿ ಮಲ್ಲಯ್ಯ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net