ಪ್ರಜ್ವಲ್ ರೇವಣ್ಣ ಪ್ರಕರಣ ಸಿಬಿಐಗೆ ವಹಿಸಲು ಕೆಆರ್‌ಎಸ್ ಪಕ್ಷ ಆಗ್ರಹ

KRS RROTEST AGAINEST PRAJWAL
ವಿಜಯಪುರ ಜಿಲ್ಲಾಡಳಿತಕ್ಕೆ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಪದಾಧಿಕಾರಿಗಳು ಮನವಿ ಸಲ್ಲಿಸಿದರು. ಶಿವಾನಂದ ಯಡಹಳ್ಳಿ, ರಾಕೇಶ ಇಂಗಳಗಿ, ಪ್ರವೀಣ ಕನಸೆ, ಹಮೀದ್ ಇನಾಮದಾರ ಮತ್ತಿತರರಿದ್ದಾರೆ.
Published on

ವಿಜಯಪುರ: ಹಾಸನ ಲೋಕಸಭೆ ಕ್ಷೇತ್ರದ ಎನ್‌ಡಿಎ ಮೈತ್ರಿ ಕೂಟದ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಮೇಲಿನ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕಲ್ಲದೇ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಬೇಕೆಂದು ಆಗ್ರಹಿಸಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಪದಾಧಿಕಾರಿಗಳು ಸೋಮವಾರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ರಾಜ್ಯ ಸಂಘಟನಾ ಕಾರ್ಯದರ್ಶಿ ಶಿವಾನಂದ ಯಡಹಳ್ಳಿ ಮಾತನಾಡಿ, ಪ್ರಜ್ವಲ್ ರೇವಣ್ಣಗೆ ಸಂಬಂಧಿಸಿದ ವಿಡಿಯೋ ದೃಶ್ಯಾವಳಿಗಳಿರುವ ಪೆನ್‌ಡ್ರೈವ್‌ಗಳು ಹಾದಿ ಬೀದಿಯಲ್ಲಿ ಸಿಗುತ್ತಿವೆ. ಮಾತ್ರವಲ್ಲ ಅದರಲ್ಲಿ ಪ್ರಜ್ವಲ್ ಅವರು ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿರುವುದು ಕಂಡು ಬಂದಿದೆ. ಈ ಬಗ್ಗೆ ಈಗಾಗಲೇ ಪ್ರಕರಣ ಕೂಡ ದಾಖಲಾಗಿದೆ. ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕೆಂದು ಆಗ್ರಹಿಸಿದರು.

ಪ್ರಜ್ವಲ್ ರೇವಣ್ಣ ಅವರು ಮಾಜಿ ಪ್ರಧಾನಿ ದೇವೇಗೌಡರ ಮೊಮ್ಮಗನಾಗಿರುವ ಕಾರಣಕ್ಕೆ ಕಳೆದ ಬಾರಿ ಲೋಕಸಭಾ ಅಭ್ಯರ್ಥಿಯಾಗಿ ಜನತೆ ಚುನಾಯಿಸಿ ಹಾಸನದಿಂದ ದೆಹಲಿಗೆ ಕಳುಹಿಸಿದರು. ಆದರೆ ಇಂದು ದೇಶ ಮಟ್ಟದಲ್ಲಿ ಕರ್ನಾಟಕದ ಮಾನ ಮರ್ಯಾದೆಯನ್ನು ಹರಾಜು ಹಾಕಿರುವ ಪ್ರಜ್ವಲ ರೇವಣ್ಣನವರ ಲೈಂಗಿಕ ಕಿರುಕುಳದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಈತ ಕಾಮುಕ ಉಮೇಶ ರೆಡ್ಡಿಗಿಂತಲೂ ಅಪಾಯಕಾರಿಯಾದ ಮನೋಭಾವ ಹೊಂದಿರುವ ಗೋಮುಖ ವ್ಯಾಘ್ರನಾಗಿದ್ದಾನೆ. ಮೊನ್ನೆಯ ದಿನ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷವೂ ಎರಡು ಕಡೆಗಳಲ್ಲಿ ಎಫ್‌ಐಆರ್ ದಾಖಲಿಸಿದ ನಂತರ ರಾಜ್ಯ ಸರ್ಕಾರವು ಎಚ್ಚೆತ್ತುಕೊಂಡು ಈ ಪ್ರಕರಣವನ್ನು ಎಸ್‌ಐಟಿಗೆ ವಹಿಸಿದೆ. ಆರೋಪಿಯು ಪ್ರಭಾವಿ ರಾಜಕಾರಣಿ ಆಗಿರುವ ಕಾರಣಕ್ಕೆ ರಾಜ್ಯ ಸರ್ಕಾರ ಮತ್ತು ಅಧಿಕಾರಿ ವರ್ಗ ಆತ ಇಂದು ಬಂಧನಕ್ಕೆ ಒಳಗಾಗುವ ಮುಂಚೆ ಜರ್ಮನ್ ದೇಶಕ್ಕೆ ಹೋಗಿ, ಅವಿತುಕೊಂಡು ಇರಲು ಅವಕಾಶವನ್ನು ನೀಡಿರುವುದು ಕರುನಾಡಿನ ಸ್ತ್ರೀ ಕುಲಕ್ಕೆ ಮಾಡಿದ ಅವಮಾನವಾಗಿದೆ ಎಂದರು.

ಕಳೆದ ಎರಡು ಮೂರು ದಿನಗಳಿಂದ ಇಷ್ಟೊಂದು ಪುರಾವೆಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದರೂ ಆತನು ತಪ್ಪಿಸಿಕೊಂಡು ಜರ್ಮನಿ ದೇಶಕ್ಕೆ ಹೋಗಲು ನಮ್ಮ ಆಡಳಿತ ವ್ಯವಸ್ಥೆ ಅನುಕೂಲ ಮಾಡಿ ಕೊಟ್ಟಿರುವುದು ಖೇದಕರ ಸಂಗತಿ. ಈ ವಿಷಯದ ಕುರಿತು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷವೂ ನಿನ್ನೆಯ ದಿನ ಹೊಳೆನರಸೀಪುರ ಮತ್ತು ಹಾಸನ ಜಿಲ್ಲೆಗಳಲ್ಲಿ ದೂರು ದಾಖಲಿಸಿದೆ. ಎಫ್‌ಐಆರ್ ತೆಗೆದುಕೊಳ್ಳುವಾಗ ಪೊಲೀಸ್ ಇಲಾಖೆಯ ಅಧಿಕಾರಿಗಳು ನಡೆದುಕೊಂಡ ರೀತಿ ಮೇಲೆ ಹಲವು ಅನುಮಾನಗಳು ಮೂಡುತ್ತಿವೆ. ನಿಷ್ಪಕ್ಷವಾದ ತನಿಖೆಯನ್ನು ಕೈಗೊಳ್ಳಲು ಮತ್ತು ಸಂತ್ರಸ್ತ ಮಹಿಳೆಯರಿಗೆ ನ್ಯಾಯ ಕೊಡಿಸಲು ಈ ಪೊಲೀಸರಿಂದ ಸಾಧ್ಯವಾಗದು. ಹೀಗಾಗಿ ಕೂಡಲೇ ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂದು ಆಗ್ರಹಿಸಿದರು.

ಮುಖಂಡರಾದ ರಾಕೇಶ ಇಂಗಳಗಿ, ಪ್ರವೀಣ ಕನಸೆ, ಹಮೀದ್ ಇನಾಮದಾರ, ವಿಕ್ರಮ ವಾಗ್ಮೋರೆ, ದೀಪಾ ಮರ್ನೂರ, ಕಾಂತುಗೌಡ ಬೆಂಡವಾಡ ಮತ್ತು ದುರ್ಗಪ್ಪ ಬೂದಿಹಾಳ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net