ಲೋಕಾಯುಕ್ತದಲ್ಲಿ ಲಭ್ಯವಾಗಲಿ ಅಧಿಕಾರಿಗಳ ಆಸ್ತಿ ವಿವರ, ಸರ್ಕಾರಕ್ಕೆ ಕೆಆರ್‌ಎಸ್ ಪಕ್ಷ ಮನವಿ

krs manavi to dc bhubalan
ವಿಜಯಪುರ ಜಿಲ್ಲಾಧಿಕಾರಿ ಟಿ.ಭೂಬಾಲನ್‌ಗೆ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಪದಾಧಿಕಾರಿಗಳು ಮನವಿ ಸಲ್ಲಿಸಿದರು. ಜಿಲ್ಲಾಧ್ಯಕ್ಷ ಅಶೋಕ ಜಾಧವ, ಶಿವಾನಂದ ಯಡಹಳ್ಳಿ, ಲಕ್ಷ್ಮಣ ಚಡಚಣ ಮತ್ತಿತರರಿದ್ದಾರೆ.
Published on

ವಿಜಯಪುರ: ರಾಜ್ಯದ ಎಲ್ಲ ಸರ್ಕಾರಿ ನೌಕರರು ಹಾಗೂ ಅಧಿಕಾರಿಗಳ ಆಸ್ತಿ ವಿವರ ಲೋಕಾಯುಕ್ತ ಸಂಸ್ಥೆಯಲ್ಲಿ ಲಭ್ಯವಾಗುವಂಥ ವ್ಯವಸ್ಥೆ ರೂಪಿಸಲು ಆಗ್ರಹಿಸಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಪದಾಧಿಕಾರಿಗಳು ಬುಧವಾರ ಜಿಲ್ಲಾಡಳಿತದ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಜಿಲ್ಲಾಧ್ಯಕ್ಷ ಅಶೋಕ ಜಾಧವ ಮಾತನಾಡಿ, ರಾಜ್ಯ ಸರ್ಕಾರದ ಇಲಾಖಾ ಅಧಿಕಾರಿಗಳು ಅವರ ಅಧೀನದ ಅಧಿಕಾರಿಗಳ ಹಾಗೂ ನೌಕರರ ಆಸ್ತಿ ವಿವರಗಳನ್ನು ನೀಡಲು ವಿನಾಕಾರಣ ವಿಳಂಬ ಮಾಡುತ್ತಿರುವುದು ಮತ್ತು ಈ ವಿಚಾರದ ಗೌಪ್ಯತೆ ಕಾಪಾಡದೇ ಅಕ್ರಮ ಆಸ್ತಿ ಗಳಿಸಿರುವ ನೌಕರರ ವಿರುದ್ಧ ತನಿಖೆಯ ದಾರಿ ತಪ್ಪಿಸುವಂತಹ ಪರಿಸ್ಥಿತಿ ನಿರ್ಮಾಣ ಆಗುತ್ತಿರುವುದರಿಂದ ಕರ್ನಾಟಕ ಲೋಕಾಯುಕ್ತರು ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಪರಿಹಾರೋಪಾಯವನ್ನು ಸೂಚಿಸಿರುತ್ತಾರೆ. ಈ ವಿಚಾರವಾಗಿ ಅವರು ಎಲ್ಲ ಸರ್ಕಾರಿ ನೌಕರರ ಆಸ್ತಿ ವಿವರವನ್ನು ಕಡ್ಡಾಯವಾಗಿ ಪ್ರತಿವರ್ಷ ಸಂಗ್ರಹಿಸಿ, ಆ ವಿವರಗಳನ್ನು ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಿ, ಆ ವಿವರಗಳು ನಿರಂತರವಾಗಿ ಲೋಕಾಯುಕ್ತ ಸಂಸ್ಥೆಗೆ ಮುಕ್ತವಾಗಿ ಲಭ್ಯವಾಗುವಂತಹ ವ್ಯವಸ್ಥೆಯನ್ನು ರೂಪಿಸಬೇಕೆಂದು ತಿಳಿಸಿದರು.

ರಾಜ್ಯ ಸಂಘಟನಾ ಕಾರ್ಯದರ್ಶಿ ಶಿವಾನಂದ ಯಡಹಳ್ಳಿ ಮಾತನಾಡಿ, ತಮಿಳುನಾಡು ಸರ್ಕಾರದಂತೆ ಕರ್ನಾಟಕದಲ್ಲಿಯೂ ನೌಕರರ ಆಸ್ತಿ ಮತ್ತು ಸರ್ವಿಸ್ ರೆಕಾರ್ಡ್ ವಿವರಗಳನ್ನು ಮಾಹಿತಿ ಹಕ್ಕಿನಡಿ ನೀಡಲು ನಿರಾಕರಿಸಲಾಗುತ್ತಿದೆ. ಈ ತೀರ್ಪಿನ ಅನ್ವಯದಂತೆ ಪುಸ್ತುತ ಲೋಕಾಯುಕ್ತರ ಕೋರಿಕೆಯು ಸಮಂಜಸವಾಗಿದ್ದು, ಇದನ್ನು ನಿರಾಕರಿಸಲು ಕಾನೂನಿನಲ್ಲಿ ಯಾವುದೇ ಅಡೆತಡೆಗಳಿರುವುದಿಲ್ಲ. ಮುಂದುವರೆದು, ಲೋಕಪಾಲ ಕಾಯ್ದೆಯಡಿಯಲ್ಲಿ ಎಲ್ಲ ಒಕ್ಕೂಟ (ಕೇಂದ್ರ) ಸರ್ಕಾರದ ನೌಕರರು ತಮ್ಮ ಆಸ್ತಿ ವಿವರಗಳನ್ನು ಲೋಕಪಾಲರಿಗೆ ಸಲ್ಲಿಸಬೇಕೆಂಬ ನಿಯಮವಿದೆ. ಕೇಂದ್ರ ಸರ್ಕಾರದ ನೌಕರರು ತಮ್ಮ ಆಸ್ತಿ ವಿವರಗಳನ್ನು ಲೋಕಪಾಲರಿಗೆ ಸಲ್ಲಿಸುತ್ತಿರಬೇಕಾದರೆ ಅದೇ ರೀತಿ ರಾಜ್ಯ ಸರ್ಕಾರದ ನೌಕರರ ವಿವರಗಳನ್ನು ರಾಜ್ಯದಲ್ಲಿ ಲೋಕಾಯುಕ್ತ ಸಂಸ್ಥೆಗೆ ಲಭ್ಯವಾಗುವಂತೆ ಮಾಡುವುದಕ್ಕೆ ಯಾವುದೇ ವಿರೋಧವಿರಬಾರದು ಎಂದರು.

ಮುಖಂಡರಾದ ಲಕ್ಷ್ಮಣ ಚಡಚಣ, ದುರ್ಗಪ್ಪ ಬೂದಿಹಾಳ, ವಿಕ್ರಮ ವಾಘಮೋರೆ, ರಾಕೇಶ ಇಂಗಳಗಿ, ಪ್ರವೀಣ ಕನಸೇ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net