ಸುಂಸ್ಕೃತವಾಗಿ ಬೆಳೆದವರು ಕೇಡನ್ನು ಮಾಡಲ್ಲ: ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಅಭಿಮತ

KRS Kathana book release Mandya
Published on

ಮಂಡ್ಯ: ಪ್ರಸ್ತುತ ಹಿಂಸಾ ಪ್ರವೃತ್ತಿಯಿಂದ ಎಲ್ಲರೂ ಹೊರಬರಬೇಕು. ಸುಸಂಸ್ಕೃತವಾಗಿ ಬಂದವರು ಯಾರಿಗೂ ಕೇಡನ್ನು ಮಾಡುವುದಿಲ್ಲ. ಮದ್ದೂರು ಪ್ರಕರಣ ಸೇರಿದಂತೆ ಎಲ್ಲ ಘಟನೆಗಳು ಏಕೆ ಆಗುತ್ತಿವೆ? ಎನ್ನುವುದನ್ನು ನೋಡಿದರೆ ಸಹಿಸಲು ಸಾಧ್ಯವಾಗುತ್ತಿಲ್ಲ. ಎಲ್ಲರೂ ಇದರಿಂದ ಹೊರಬರಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಹೇಳಿದರು.

ನಗರದ ಕರ್ನಾಟಕ ಸಂಘದ ಕೆವಿಎಸ್ ಭವನದಲ್ಲಿ ಆಯೋಜಿಸಿದ್ದ ಸಾಹಿತಿ ಗಣಂಗೂರು ನಂಜೇಗೌಡ ಅವರ ‘ಕೆಆರ್‌ಎಸ್ ಕಥನ’ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿ, ಕೆಆರ್‌ಎಸ್ ನಿರ್ಮಾಣದ ವಿಚಾರಗಳನ್ನು ತೆರೆದಿಡುವ ಕೃತಿ ಓದುಗರ ಕೈ ತಲುಪುವಂತೆ ಮಾಡಿರುವುದು ಸಾಧನೆಯಾಗಿದೆ. ಆ ಮೂಲಕ ಐತಿಹ್ಯವಿರುವ ಪುರಾಣಗಳನ್ನು ಒಮ್ಮೆ ತಿಳಿದುಕೊಳ್ಳಬೇಕು. ಇತಿಹಾಸವನ್ನು ಮಕ್ಕಳಿಗೆ ಕಥನಗಳ ಮೂಲಕ ಹೇಳಿಕೊಡುವ ಕೆಲಸ ಇನ್ನಾದರೂ ಆಗಬೇಕು. ಏಕೆಂದರೆ ಜಾಗತೀಕರಣದಿಂದ ಎಲ್ಲವೂ ಕಳೆದು ಹೋಗುತ್ತಿವೆ ಎನ್ನಬಹುದು. ಸ್ಥಳೀಯ ಸ್ಥಳಗಳು ಮತ್ತು ಇತಿಹಾಸ ಪ್ರಸಿದ್ಧವಾದ ಘಟನೆಗಳನ್ನು ವರ್ತಮಾನವಾಗಿ ಬರೆದು ತಿಳಿಸುವ ಕೆಲಸಕ್ಕೆ ನಂಜೇಗೌಡ ಅವರು ಪ್ರಯತ್ನ ಪಟ್ಟಿರುವುದಕ್ಕೆ ಫಲ ಸಿಗಲಿ.

ಉನ್ನತ, ಕೆಳ, ಮಧ್ಯಮ ಮಟ್ಟದಲ್ಲಿ ಯಾರಿದ್ದರೂ ಎನ್ನುವುದು ಕೆಆರ್‌ಎಸ್ ಕಥನವು ತೆರೆದಿಡುತ್ತಾ ಹೋಗುತ್ತದೆ. ಸಂಶೋಧನಾ ಗ್ರಂಥವಾಗಿ ಕಾಣುತ್ತಿದೆ ಎಂದರೆ ಅತಿಶಯೋಕ್ತಿಯಲ್ಲ. ನಾಲೆಗಳ ನಿರ್ಮಾಣ ಸೇರಿದಂತೆ ಎಲ್ಲವೂ ಇದರೊಳಗೆ ವಿಷಯಗಳಾಗಿ ಅಡಕವಾಗಿದೆ ಎಂದು ಹೇಳಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಸಾಹಿತಿ ತೈಲೂರು ವೆಂಕಟಕೃಷ್ಣ, ಶ್ರೀರಂಗಪಟ್ಟಣದ ಭಾಗಗಳಲ್ಲಿ ಎಲ್ಲವನ್ನೂ ಪುಸ್ತಕದ ರೂಪದಲ್ಲಿ ಪ್ರವಾಸಿ ತಾಣಗಳನ್ನೇ ಕಟ್ಟಿಕೊಟ್ಟು ಓದುಗರ ಮುಂದಿಟ್ಟಿದ್ದಾರೆ. ಕೇವಲ ಪತ್ರಕರ್ತರಾಗಿ ಉಳಿಯದೇ ಸಾಹಿತ್ಯ ಪ್ರಜ್ಞೆಗೋಸ್ಕರ ಕೆಲಸ ಮಾಡಿದ್ದಾರೆ. ಕೆಆರ್‌ಎಸ್ ಅಣೆಕಟ್ಟೆ, ನಾಲೆಗಳು, ಇತಿಹಾಸ ಸ್ಥಳಗಳು, ಶಾಸನಗಳು ಸೇರಿದಂತೆ ಎಲ್ಲ ಬಗೆಯಲ್ಲಿ ವಿವರಿಸುವ ಕೆಲಸವನ್ನು ಕೃತಿಗಳ ರೂಪದಲ್ಲಿ ತಂದಿರುವ ನಂಜೇಗೌಡ ಸಾಧನೆ ಮೆಚ್ಚುವಂತದ್ದು ಎಂದು ಶ್ಲಾಘಿಸಿದರು.

ಕೆಂಗೇರಿ ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ನಿಶ್ಚಲಾನಂದನಾಥ ಸ್ವಾಮೀಜಿ ಮಾತನಾಡಿ, ಜಿಲ್ಲೆಯ ಮಹಿಮೆ ಹಾಗೂ ಊರಿನ ಮಹಿಮೆಯನ್ನು ಹಾಗೂ ಐತಿಹಾಸಿಕ ವಿಷಯವನ್ನು ಜನರಿಗೆ ತಿಳಿಸುವ ಕೆಲಸ ಮಾಡುವುದರಿಂದ ಸಾಹಿತಿಗಳ ಮೌಲ್ಯ ಹೆಚ್ಚುತ್ತದೆ. ಆ ಕೆಲಸವನ್ನು ನಂಜೇಗೌಡ ಅವರು ಪುಸ್ತಕದ ರೂಪದಲ್ಲಿ ಹೊರತಂದು ಎಲೆಮರೆಕಾಯಿಯಂತೆ ಹೋಗುತ್ತಿದ್ದಾರೆ ಎಂದರು.

ಶ್ರೀರಂಗಪಟ್ಟಣ ಶಾಸಕ ರಮೇಶ ಬಂಡಿಸಿದ್ದೇಗೌಡ, ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ ಇತರರಿದ್ದರು.

Related Stories

No stories found.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net