

-ನುಡಿದಂತೆ ನಡೆಯದ ಸಿಎಂ ಸಿದ್ದರಾಮಯ್ಯ
-ಅಧ್ಯಕ್ಷ ಅಜಯಕುಮಾರ ಸರ್‌ನಾಯಕ ಬೇಸರ
ವಿಜಯವಾಣಿ ಸುದ್ದಿಜಾಲ ಬೆಳಗಾವಿ
ಉತ್ತರ ಕರ್ನಾಟಕ ಭಾಗದ ಮಹತ್ವಾಕಾಂಕ್ಷಿ ನೀರಾವರಿ ಯೋಜನೆಯಾದ ಕೃಷ್ಣಾ ಮೇಲ್ದಂಡೆ ಯೋಜನೆ ಹತ್ತು, ಹಲವು ಸವಾಲುಯಗಳ ನಡುವೆ ದಶಕಗಳಿಂದ ಕುಂಟುತ್ತಾ ಸಾಗಿದ್ದು, ಯೋಜನೆ ಪೂರ್ಣಗೊಳಿಸಲು ಅಹೋರಾತ್ರಿ ಹೋರಾಟದ ಮೂಲಕ ಸರ್ಕಾರದ ಮೇಲೆ ಒತ್ತಡ ಹಾಕಲಾಗಿದೆ ಎಂದು ಕೃಷ್ಣಾ ಮೇಲ್ದಂಡೆ ಯೋಜನೆ ಹೋರಾಟ ಸಮಿತಿ ಅಧ್ಯಕ್ಷ ಅಜಯಕುಮಾರ ಸರ್‌ನಾಯಕ ಹೇಳಿದರು.
ಸದಾಶಿವ ನಗರದ ರೆಡ್ಡಿ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೃಷ್ಣಾ ಮೇಲ್ದಂಡೆ ಯೋಜನೆ ಪೂರ್ಣಗೊಳಿಸುವಂತೆ ಸರ್ಕಾರಗಳಿಗೆ ಮನವಿ ಸಲ್ಲಿಸಿದರು ಪ್ರಯೋಜನವಾಗುತ್ತಿಲ್ಲ. ಹಾಗಾಗಿ ಬಾಗಲಕೋಟೆ ಜಿಲ್ಲಾಡಳಿತ ಕಚೇರಿ ಮುಂಭಾಗದಲ್ಲಿ ರೈತರು ಹೋರಾಟ ನಡೆಸುತ್ತಿದ್ದೇವೆ. ಸರ್ಕಾರವು ನಮ್ಮ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ಉಗ್ರ ಹೋರಾಟ ನಡೆಸುವುದು ಅನಿವಾರ್ಯವಾಗಲಿದೆ ಎಂದು ಎಚ್ಚರಿಸಿದರು.
ಚುನಾವಣೆ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೃಷ್ಣಾ ಮೇಲ್ದಂಡೆ ಯೋಜನೆಗೆ 40ಸಾವಿರ ಕೋಟಿ ರೂ. ಅನುದಾನ ನೀಡುತ್ತೇವೆ. ನುಡಿದಂತೆ ನಡೆಯುವ ನಡೆಯುತ್ತೇವೆ ಎಂದು ಹೇಳಿದ್ದರು. ಆದರೆ, ಇಲ್ಲಿಯವರೆಗೆ ಅನುದಾನ ನೀಡಿಲ್ಲ. ಯೋಜನೆ ಬಗ್ಗೆ ಸರ್ಕಾರವು ಸಂಪೂರ್ಣ ನಿರ್ಲಕ್ಷೃ ವಹಿಸಿಕೊಂಡು ಬರುತ್ತಿದೆ. ಕೂಡಲೇ ಕೃಷ್ಣಾ ಮೇಲ್ದಂಡೆ ಯೋಜನೆ ಪೂರ್ಣಗೊಳಿಸಲು ಕ್ರಮ ವಹಿಸಬೇಕು.ಅಲ್ಲದೆ, ಮುಳುಗಡೆಯಾದ ಭೂಮಿ ಸ್ವಾಧೀನಪಡಿಸಿಕೊಂಡ ಸಂತ್ರಸ್ಥರಿಗೆ ಪರಿಹಾರ ಹಾಗೂ ಅವರ ಅತಂತ್ರ ಸ್ಥಿತಿಯನ್ನು ಹೋಗಲಾಡಿಸಬೇಕು ಎಂದು ಒತ್ತಾಯಿಸಿದರು.
ಕೃಷ್ಣಾ ಮೇಲ್ದಂಡೆ ಯೋಜನೆ ಅನುಷ್ಠಾನ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡಿ.11ರಂದು ನಾಲ್ಕು ಜಿಲ್ಲೆಯ ಸರ್ವಪಕ್ಷ ಸಭೆಯನ್ನು ಕರೆದಿದ್ದಾರೆ. ಸಭೆಯಲ್ಲಿ ನಮ್ಮ ಹಕ್ಕನ್ನು ನಾವು ಪ್ರತಿಪಾಧಿಸುತ್ತೇವೆ.ನಮ್ಮ ಬೇಡಿಕೆಯನ್ನು ಮುಖ್ಯಮಂತ್ರಿ ಇಡೇರಿಸಬೇಕು ಇಲ್ಲದಿದ್ದರೆ ಮುಂದಿನ ಹೋರಾಟದ ಬಗ್ಗೆ ಚರ್ಚಿಸಿ ಹೋರಾಟ ಮಾಡುತ್ತೆವೆ. 1964 ರಲ್ಲಿ ದಿ ಲಾಲ್ ಬಹದ್ದೂರ ಶಾಸ್ತ್ರೀಜಿ ಅವರು ಶಂಕು ಸ್ಥಾಪನೆ ಮಾಡಿದ ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3ಕ್ಕೆ ಹಂಚಿಕೆಯಾದ 130 ಟಿ.ಎಂ.ಸಿ. ನೀರನ್ನು ಬಳಸಿಕೊಂಡು ಉತ್ತರ ಕರ್ನಾಟಕದ 7 ಜಿಲ್ಲೆಗಳ 15 ಲಕ್ಷ ಎಕರೆ ಜಮೀನನ್ನು ನೀರಾವರಿಗೆ ಒಳಪಡಿಸಿಬೇಕು. ಈ ಯೋಜನೆಯಿಂದ ಬಾಧಿತರಾಗುವ ಸಂತ್ರಸ್ತರಿಗೆ ಯೋಗ್ಯ ಪರಿಹಾರ ಮತ್ತು ಪುನರ ವಸತಿ ಕಲ್ಪಿಸಿಕೊಡಬೇಕು ಎಂಬುದು ನಮ್ಮ ಪ್ರಮುಖ ಬೇಡಿಕೆಯಾಗಿದೆ ಎಂದರು.
ಮಾಜಿ ಸಚಿವ ಎಸ್.ಆರ್.ಪಾಟೀಲ, ಆರ್.ವಿ.ಮುಳ್ಳೂರ, ಪ್ರಕಾಶ ಅಂತರಗೊಂಡ, ಅದೃಶ್ಯಪ ದೇಸಾಯಿ ಇತರರಿದ್ದರು.
.