ಸಿಬ್ಬಂದಿ ನೇಮಕದಲ್ಲಿ ಹಗರಣ ಆರೋಪ, ಎಂಎಸ್‌ಐಎಲ್ ಅಧಿಕಾರಿ ಮೇಲೆ ಕ್ರಮಕ್ಕೆ ಕೆಆರ್‌ಎಸ್ ಆಗ್ರಹ

KRS PARTY ABAKARI
ವಿಜಯಪುರದ ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿಗೆ ಕೆಆರ್‌ಎಸ್ ಪಕ್ಷದ ಪದಾಧಿಕಾರಿಗಳು ಮನವಿ ಸಲ್ಲಿಸಿದರು. ಶಿವಾನಂದ ಯಡಹಳ್ಳಿ, ವಿಕ್ರಮ ವಾಘಮೋರೆ, ಪ್ರವೀಣ ಕನಸೇ ಮತ್ತಿತರರಿದ್ದಾರೆ.
Published on

ವಿಜಯಪುರ: ಎಂಎಸ್‌ಐಎಲ್‌ನಲ್ಲಿ ಗುತ್ತಿಗೆ ಧಾರದ ಮೇಲೆ ಕಾರ್ಯನಿರ್ವಹಿಸಲು ಸಿಬ್ಬಂದಿ ನೇಮಕ ಮಾಡಿಕೊಳ್ಳುವ ಸಂದರ್ಭ ಲಕ್ಷಾಂತರ ರೂಪಾಯಿ ಲಂಚ ಪಡೆದ ಆರೋಪದ ಮೇರೆಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿ ಮೇಲೆ ಕ್ರಮ ಕೈಗೊಳ್ಳಬೇಕೆಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಪದಾಧಿಕಾರಿಗಳು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ.

ಎಂಎಸ್‌ಐಎಲ್ ಅಧಿಕಾರಿ ಚಂದ್ರಶೇಖರ ಪೋಳ ಇವರನ್ನು ಅಮಾನತ್ತುಗೊಳಿಸುವಂತೆ ಆಗ್ರಹಿಸಿ ಕಳೆದ ಗುರುವಾರವೇ ಪಕ್ಷದ ಪದಾಧಿಕಾರಿಗಳು ಮನವಿ ಸಲ್ಲಿಸಿದ್ದು, ಈವರೆಗೆ ಯಾವುದೇ ಪ್ರಕ್ರಿಯೆ ನಡೆದಿಲ್ಲವಾದ್ದರಿಂದ ಪದಾಧಿಕಾರಿಗಳು ಆಕ್ರೋಶ ಹೊರಹಾಕಿದ್ದಾರೆ.

ಜಿಲ್ಲಾಡಳಿತ ಕಚೇರಿ ಎದುರು ಕೆಲ ಕಾಲ ಪ್ರತಿಭಟನೆ ನಡೆಸಿ ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಅವರಿಗೆ ಮನವಿ ಸಲ್ಲಿಸಿದ್ದ ಪದಾಧಿಕಾರಿಗಳು, ಎಂಎಸ್‌ಐಎಲ್ ಮಳಿಗೆಗಳಲ್ಲಿ ಗುತ್ತಿಗೆ ಆಧಾರಿತವಾಗಿ ಕೆಲಸಗಾರರನ್ನು ನೇಮಕ ಮಾಡಿಕೊಳ್ಳುವಾವ ಪ್ರತಿಯೊಬ್ಬ ನೌಕರರಿಂದ 1.4 ಲಕ್ಷ ರೂ.ಗಳಂತೆ ಸುಮಾರು 1.5 ಕೋಟಿ ರೂಪಾಯಿ ಲಂಚ ಪಡೆದಿರುವುದಾಗಿ ಹಣ ಕೊಟ್ಟ ಸಿಬ್ಬಂದಿಯೇ ಆರೋಪಿಸಿದ್ದಾರೆ. ನೇಮಕಗೊಂಡ ಸಿಬ್ಬಂದಿಯಿಂದ ಮತ್ತೆ ಕಿರುಕುಳ ನೀಡಿ ಹಣ ಪಡೆದಿದ್ದು, ಇದರಿಂದ ರೋಸಿ ಹೋದ ಸಿಬ್ಬಂದಿ ಕೆಆರ್‌ಎಸ್ ಪಕ್ಷಕ್ಕೆ ನ್ಯಾಯ ಒದಗಿಸಿಕೊಡುವಂತೆ ಮನವಿ ಮಾಡಿದ್ದಾರೆ.

ಹೀಗಾಗಿ ಜಿಲ್ಲಾಡಳಿತ ವಿಶೇಷ ತನಿಖಾ ತಂಡ ರಚಿಸಿ ಸಮಗ್ರ ತನಿಖೆ ನಡೆಸಬೇಕು. ಅಧಿಕಾರಿ ಮೇಲೆ ಕ್ರಮ ಕೈಗೊಂಡು ನೊಂದವರಿಗೆ ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿದರು.

ರಾಜ್ಯ ಸಂಘಟನಾ ಕಾರ್ಯದರ್ಶಿ ಶಿವಾನಂದ ಯಡಹಳ್ಳಿ, ಪದಾಧಿಕಾರಿಗಳಾದ ದೀಪಾ ಮನೂರ, ವಿಕ್ರಮ ವಾಘಮೋರೆ, ಲಕ್ಷ್ಮಣ ಚಡಚಣ, ಚಂದ್ರಕಾಂತ ನಗರೇ, ಹಮಿದ ಇನಾಮದಾರ, ಪ್ರವೀಣ ಕನಸೇ, ದುರ್ಗಪ್ಪ ಬೂದಿಹಾಳ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net