ಸಂಗೊಳ್ಳಿ ರಾಯಣ್ಣ ಪ್ರತಿಮೆ ವಿರೂಪ - ಪ್ರತಿಭಟನೆ

10krp-03
Published on

ಕೆ.ಆರ್.ಪೇಟೆ : ಅಕ್ಕಿಹೆಬ್ಬಾಳು ಹೋಬಳಿಯ ಬೀಕನಹಳ್ಳಿ ಗ್ರಾಮದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆಯನ್ನು ವಿರೂಪ ಗೊಳಿಸಿರುವ ಕಿಡಿಗೇಡಿಗಳನ್ನು ಬಂಧಿಸಲು ಆಗ್ರಹಿಸಿ ಕರ್ನಾಟಕ ಪ್ರದೇಶ ಕುರುಬರ ಸಂಘದ ಘಟಕದ ನೇತೃತ್ವದಲ್ಲಿ ಶುಕ್ರವಾರ ಗ್ರಾಮದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು. ಕರ್ನಾಟಕ ಪ್ರದೇಶ ಕುರುಬರ ಸಂಘದ ನಿಕಟಪೂರ್ವ ಅಧ್ಯಕ್ಷ ಬಿ.ಸುಬ್ರಹ್ಮಣ್ಯ, ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಸುರೇಶ್ ಮತ್ತು ತಾಲೂಕು ಘಟಕದ ಅಧ್ಯಕ್ಷ ಕೆ.ಪುರುಷೋತ್ತಮ್ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ನೂರಾರು ಗ್ರಾಮಸ್ಥರು ಹಾಜರಿದ್ದರು.
ಮುಖಂಡ ಬಿ.ಸುಬ್ರಹ್ಮಣ್ಯ ಮಾತನಾಡಿ, ಪ್ರತಿಮೆಯನ್ನು ಮಂಗಳವಾರ ತಡರಾತ್ರಿ ಕಿಡಿಗೇಡಿಗಳು ವಿರೂಪ ಮಾಡಿದ್ದಾರೆ. ಕತ್ತಿ, ಕೈ, ಕಾಲು ಸೇರಿದಂತೆ ವಿವಿಧ ಭಾಗಗಳಿಗೆ ಹಾನಿಗೊಳಿಸಿದ್ದಾರೆ. ಸಂಗೊಳ್ಳಿ ರಾಯಣ್ಣನಿಗೆ ಅಪಮಾನ ಎಂದರೆ ಅದು ನಾಗರಿಕ ಸಮಾಜಕ್ಕೆ ಅಪಮಾನ ಮಾಡಿದಂತೆ ಎಂದರು.
ರಾಯಣ್ಣ ಒಂದು ಜಾತಿ ಅಥವಾ ಧರ್ಮಕ್ಕೆ ಸೀಮಿತವಾದ ವ್ಯಕ್ತಿಯಲ್ಲ. ಆತ ದೇಶದ ಸ್ವಾತಂತ್ರ್ಯ ಕ್ಕಾಗಿ ಹೋರಾಟ ನಡೆಸಿದ ವೀರ. ಆತನ ಕೆಚ್ಚು ಮತ್ತು ತ್ಯಾಗದ ಬಗ್ಗೆ ತಿಳಿಯದ ವಿಕೃತ ಮನಸ್ಸಿನ ವ್ಯಕ್ತಿಗಳು ಪ್ರತಿಮೆ ವಿರೂಪಗೊಳಿಸಿದ್ದಾರೆ ಎಂದು ದೂರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net