

ಮಂಡ್ಯ: ರಾಜ್ಯ ಕ್ರಿಕೆಟ್‌ನಲ್ಲಿ ಭರವಸೆಯ ಪ್ರತಿಭೆಯಾಗಿರುವ ಮಂಡ್ಯದ ಕೃತಿಕ್‌ಕೃಷ್ಣ ಕರ್ನಾಟಕ ರಣಜಿ ತಂಡಕ್ಕೆ ಆಯ್ಕೆಯಾಗಿದ್ದಾರೆ. ಇದರೊಂದಿಗೆ ಹಲವು ವರ್ಷದ ಕಠಿಣ ಪರಿಶ್ರಮಕ್ಕೆ ಫಲ ಸಿಕ್ಕಂತಾಗಿದೆ.
ಭಾರತ ಹಾಗೂ ಕರ್ನಾಟಕ ಕ್ರಿಕೆಟ್ ತಂಡವನ್ನು ಪ್ರತಿನಿಧಿಸಿ ಗಮನಾರ್ಹ ಸಾಧನೆ ಮಾಡುತ್ತಿರುವ ಕೃತಿಕ್, ಎಡಗೈ ಶೈಲಿಯ ಬ್ಯಾಟಿಂಗ್ ಹಾಗೂ ಕೀಪರ್ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಣೆ ಮಾಡುತ್ತಿದ್ದಾರೆ. ಈಗಾಗಲೇ ಸಿಕ್ಕಿರುವ ಅವಕಾಶವನ್ನು ಸದುಪಯೋಗಪಡಿಸಿಕೊಂಡಿದ್ದು, ಇದೀಗ ರಣಜಿ ತಂಡಕ್ಕೆ ಪದಾರ್ಪಣೆ ಮಾಡಲಿದ್ದಾರೆ.
ಬಾಲ್ಯದಿಂದಲೇ ತರಬೇತಿ: ಕ್ರಿಕೆಟ್ ಬಗ್ಗೆ ಆಸಕ್ತಿ ಹೊಂದಿದ್ದ ಹಿನ್ನೆಲೆಯಲ್ಲಿ ಪಾಲಕರು ಕೃತಿಕ್ ಅವರನ್ನು ಮೂರನೇ ತರಗತಿ ವ್ಯಾಸಂಗ ಮಾಡುತ್ತಿದ್ದಾಗಲೇ ಪ್ರತಿಷ್ಠಿತ ಪಿಇಟಿ ಶಿಕ್ಷಣ ಸಂಸ್ಥೆಯಲ್ಲಿ ತರಬೇತಿ ಕೊಡಿಸಲು ಪ್ರಾರಂಭಿಸಿದರು. ಅಂದಿನಿಂದ ನಿರಂತರವಾಗಿ ಅಭ್ಯಾಸ ನಡೆಯುತ್ತಿದೆ. ಆರನೇ ತರಗತಿ ವ್ಯಾಸಂಗ ಮಾಡುತ್ತಿದ್ದಾಗ ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಲಾ ಹಂತದ ಟೂರ್ನಿಯಲ್ಲಿ ಭಾಗವಹಿಸಿದ್ದರು. ಅಲ್ಲಿಂದ ಶಾಲೆ, ಜಿಲ್ಲಾ, ಡಿವಿಷನ್ ಮಟ್ಟದಲ್ಲಿ ಹಲವು ಟೂರ್ನಿ ಆಡಿದ್ದಾರೆ. ಅಂತೆಯೇ, ಎರಡು ಬಾರಿ ಅಂಡರ್ 14 ಮತ್ತು ಎರಡು ಬಾರಿ ಅಂಡರ 16 ಟೂರ್ನಿಯಲ್ಲಿ ಭಾಗವಹಿಸಿದ್ದಾರೆ.
ಇನ್ನು ಚಾಲೆಂಜರ್ ಟ್ರೋಫಿಗೂ ಮುನ್ನ ಸೂರತ್‌ನಲ್ಲಿ ನಡೆದಿದ್ದ ವಿನೋದ್ ಮಂಕಡ್ ಟೂರ್ನಿಯಲ್ಲಿ ಕರ್ನಾಟಕದ ಪರ ಅಜೇಯ 75 ರನ್ ಗಳಿಸುವುದರ ಜತೆಗೆ ನಾಲ್ಕು ಕ್ಯಾಚ್ ಪಡೆದು ಪಂದ್ಯ ಗೆಲ್ಲಿಸಿಕೊಟ್ಟಿದರು. ಇದು ಆಯ್ಕೆಗಾರರನ್ನು ಸೆಳೆದಿತ್ತು. ಜತೆಗೆ ಕಿರಣ್ ಮೋರೆ ಅವರು ನಡೆಸಿದ 10 ಯುವ ವಿಕೆಟ್ ಕೀಪರ್ ಆಯ್ಕೆಯಲ್ಲಿ ಕೃತಿಕ್ ಸ್ಥಾನ ಪಡೆದಿದ್ದರು. ಈ ಎಲ್ಲವನ್ನು ಗಮನಿಸಿದ ಆಯ್ಕೆಗಾರರು ಚಾಲೆಂಜರ್ ಟ್ರೋಫಿಗೆ ಅವಕಾಶ ನೀಡಿದ್ದರು. ಇದಲ್ಲದೆ ಹೈದರಾಬಾದ್‌ನಲ್ಲಿ ನಡೆದಿದ್ದ ಅಂಡರ್ 19 ಚಾಲೆಂಜರ್ ಟ್ರೋಫಿ ಟೂರ್ನಿಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದರು.
ಸಿ.ಕೆ.ನಾಯ್ಡು ಟ್ರೋಪಿಯಲ್ಲಿ ಸಾಧನೆ
2024ರಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ 23 ವಯೋಮಿತಿಯ ಸಿ.ಕೆ. ನಾಯ್ಡು ಟ್ರೋಪಿಯನ್ನು ಮೊಟ್ಟಮೊದಲ ಬಾರಿಗೆ ಕರ್ನಾಟಕ ತಂಡ ತನ್ನದಾಗಿಸಿಕೊಂಡ ಸಾಧನೆ ಮಾಡಿತ್ತು. ಈ ತಂಡದಲಿ ಕೃತಿಕ್‌ಕೃಷ್ಣ ಪ್ರಮುಖ ಆಟಗಾರನಾಗಿ ಮಿಂಚಿದ್ದರು. ಫೈನಲ್ ಪಂದ್ಯದಲ್ಲಿ ಉತ್ತರ ಪ್ರದೇಶದ ವಿರುದ್ಧ ಉತ್ತಮ ಬ್ಯಾಟಿಂಗ್ ಜತೆಗೆ ಕೀಪಿಂಗ್‌ನಲ್ಲಿಯೂ ಗಮನ ಸೆಳೆದರು. ಈ ವೇಳೆ 86 ರನ್ ಗಳಿಸಿ ತಂಡದ ಗೆಲುವಿಗೆ ಕಾಣಿಕೆ ನೀಡಿದರು. ಮಾತ್ರವಲ್ಲದೆ ಎರಡು ಕ್ಯಾಚ್ ಹಾಗೂ ಒಂದು ಸ್ಟಂಪಿಂಗ್ ಮಾಡಿ ಆಯ್ಕೆದಾರರ ಗಮನಸೆಳೆದಿದ್ದಾರೆ. ಒಟ್ಟಾರೆ ಟೂರ್ನಿಯಲ್ಲಿ 33 ಕ್ಯಾಚ್ ಹಾಗೂ 3 ಸ್ಟಂಪಿಂಗ್ ಮಾಡಿದ್ದರು. ಇನ್ನು ಇತ್ತೀಚೆಗೆ ನಡೆದಿದ್ದ ಕೆ.ತಿಮ್ಮಪ್ಪಯ್ಯ ಟೂರ್ನಿಯಲ್ಲಿ ಕೃತಿಕ್ ಮಿಂಚಿದ್ದರು. ಒಟ್ಟು ಐದು ಪಂದ್ಯದಲ್ಲಿ 349 ರನ್ ಗಳಿಸಿ ಆಯ್ಕೆಯಾದರರ ಗಮನಸೆಳೆದಿದ್ದರು.
ರಣಜಿ ತಂಡದಲ್ಲಿ ಸ್ಥಾನ
ಈಗಾಗಲೇ ಹಲವು ಮಹತ್ವದ ಟೂರ್ನಿಯಲ್ಲಿ ಮಿಂಚಿರುವ ಕೃತಿಕ್, ಇದೀಗ 2025ರ ರಣಜಿ ತಂಡದಲ್ಲಿ ವಿಕೆಟ್ ಕೀಪರ್ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ. ಅ.15ರಿಂದ 18ರವರೆಗೆ ಸೌರಾಷ್ಟ್ರದ ವಿರುದ್ಧ ನಡೆಯಲಿರುವ ಪಂದ್ಯಕ್ಕೆ 15 ಜನರ ತಂಡದ ಸದಸ್ಯರಾಗಿದ್ದು, ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯುವ ವಿಶ್ವಾಸವಿದೆ.
ಇನ್ನು ಕೃತಿಕ್ ಕೃಷ್ಣ ಅವರು 2023-24ರ ಕರ್ನಾಟಕ ರಣಜಿ ತಂಡದ ಸಂಭಾವ್ಯ ಆಟಗಾರರಲ್ಲಿ ಸ್ಥಾನ ಪಡೆದಿದ್ದರು. ಇದಲ್ಲದೆ ಕರ್ನಾಟಕ ಪ್ರೀಮಿಯರ್ ಲೀಗ್‌ನಲ್ಲಿಯೂ ಗಮನಸೆಳೆಯುತ್ತಿದ್ದಾರೆ. ಅಂತೆಯೇ 2022-23ರಲ್ಲಿ ಅಂಡರ್ 25 ರಾಜ್ಯ ‘ಎ’ ಒನ್ ಡೇ ಟ್ರೋಪಿ, 2023-24 ಅಂಡರ್ 23 ರಾಜ್ಯ ‘ಎ’ ಒನ್ ಡೇ ಟ್ರೋಪಿ ಸೇರಿದಂತೆ ಮಹತ್ವದ ಟೂರ್ನಿಯಲ್ಲಿ ಭಾಗವಹಿಸಿದ್ದಾರೆ. ಮೈಸೂರಿನ ಆರ್‌ಬಿಎನ್‌ಸಿಸಿ ಕ್ಲಬ್ ಹಾಗೂ ಬೆಂಗಳೂರಿನ ವಲ್ಚರ್ ಕ್ಲಬ್‌ನಲ್ಲಿ ತರಬೇತಿ ಪಡೆದಿದ್ದಾರೆ.
ಕುಟುಂಬದವರ ಬೆಂಬಲ
ಕುಟುಂಬದವರ ಬೆಂಬಲದಿಂದಲೇ ಕೃತಿಕ್‌ಕೃಷ್ಣ ಕ್ರಿಕೆಟ್‌ನಲ್ಲಿ ಸಾಧನೆ ಮಾಡುತ್ತಿದ್ದಾರೆ. ತಾತಾ ಎಸ್.ರಘುನಂದನ್ ಹಾಗೂ ತಂದೆ ಕೃಷ್ಣಶೆಟ್ಟಿ ಹಾಗೂ ತಾಯಿ ಕೃಪಾ ಅವರು ಮಗನ ಭವಿಷ್ಯಕ್ಕೆ ತಮ್ಮ ಜೀವನವನ್ನು ಮುಡಿಪ್ಪಿಟ್ಟಿದ್ದಾರೆ. ಮೂಲತಃ ತಾಲೂಕಿನ ಗೋಪಾಲಪುರ ಗ್ರಾಮದ ಈ ದಂಪತಿ ಪ್ರಸ್ತುತ ನಗರದ ಬಂದೀಗೌಡ ಬಡಾವಣೆಯಲ್ಲಿ ವಾಸವಿದ್ದಾರೆ. ಸಹೋದರ ಕೃಷಿಕ್ ಕೃಷ್ಣ ಕೂಡ ಕ್ರಿಕೆಟ್ ತರಬೇತಿ ಪಡೆಯುತ್ತಿದ್ದು, ಅಣ್ಣನ ಹಾದಿಯಲ್ಲಿಯೇ ಸಾಗುತ್ತಿದ್ದಾನೆ. ಕೃಷ್ಣಶೆಟ್ಟಿ ಮತ್ತು ಕೃಪಾ ದಂಪತಿಯ ಪರಿಶ್ರಮಕ್ಕೆ ಇದೀಗ ಫಲ ಸಿಕ್ಕಂತಾಗಿದೆ.
ಕರ್ನಾಟಕ ರಣಜಿ ತಂಡಕ್ಕೆ ಕೃತಿಕ್ ಆಯ್ಕೆಯಾಗಿರುವುದು ಸಂತೋಷದ ವಿಷಯ. ಇದಕ್ಕಾಗಿ ಹಲವು ವರ್ಷ ಕಠಿಣ ಪರಿಶ್ರಮ ಹಾಕಿದ್ದಾನೆ. ಅದಕ್ಕೆ ತಕ್ಕ ಪ್ರತಿಫಲ ಸಿಕ್ಕಿದೆ. ಕೃಷ್ಣ ಶೆಟ್ಟಿ ಕೃತಿಕ್ ತಂದೆ