ಶ್ರೀ ಕಾವೇರಿ ವಿದ್ಯಾರ್ಥಿ ಸಂಘದ ಉದ್ಘಾಟನೆ

krishnegowda
Published on

ಕುಶಾಲನಗರ:

ಯುವಕರಲ್ಲಿ ಬುದ್ಧಿ ಶಕ್ತಿ ಮತ್ತು ಕೌಶಲ್ಯ ಇದ್ದರೆ ಮಾತ್ರ ಈ ಪ್ರಪಂಚದಲ್ಲಿ ಬೆಲೆ ಹೊರತೂ, ಹಣ ಆಸ್ತಿ ಅಂತಸ್ತಿಗೆ ಅಲ್ಲ ಎಂದು ವಾಗ್ಮೀ ಪ್ರೊ. ಕೃಷ್ಣೇಗೌಡ ಹೇಳಿದರು. ಹೆಬ್ಬಾಲೆ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಮಂಗಳವಾರ ಏರ್ಪಡಿಸಿದ್ದ ಶ್ರೀ ಕಾವೇರಿ ವಿದ್ಯಾರ್ಥಿ ಸಂಘದ ಉದ್ಘಾಟನಾ ಸಮಾರಂಭ ಮತ್ತು ವಿದ್ಯಾರ್ಥಿಗಳಿಗಾಗಿ ವ್ಯಕ್ತಿತ್ವ ವಿಕಸನ ಕಾರ್ಯಕ್ರಮದಲ್ಲಿ ಮಾತನಾಡಿದರು.

ನೂರು ವರ್ಷಗಳ ಹಿಂದೆ ಆಸ್ತಿ, ಶಕ್ತಿ, ಜಾತಿ, ಧರ್ಮಗಳ ಹಿನ್ನೆಲೆಯಲ್ಲಿ ವ್ಯಕ್ತಿಗಳಿಗೆ ಗೌರವ ಸಿಗುತ್ತಿತ್ತು. ಬದಲಾವಣೆಯಾದ ಈ ಯುಗದಲ್ಲಿ ಯುವಕರಿಗೆ ಬುದ್ಧಿ ಶಕ್ತಿ ಮತ್ತು ಕೌಶಲ್ಯವು ಇದ್ದರೆ ಈ ಸಾಮಾಜಿಕ ವ್ಯವಸ್ಥೆಯಲ್ಲಿ ಅಂತಸ್ತು, ಸಾಮಾಜಿಕ ಗೌರವ ತಾನಾಗಿಯೇ ಹುಡುಕಿಕೊಂಡು ಬರುತ್ತವೆ. ವಿದ್ಯಾರ್ಥಿಗಳು ಚಲಾವಣೆಯಲ್ಲಿರುವ ನಾಣ್ಯಗಳಾಗಬೇಕೇ ಹೊರತು ತುಕ್ಕು ಹಿಡಿಯುವ ನಾಣ್ಯಗಳ ಆಗಬಾರದು. ನಮ್ಮಿಂದ ನಾಲ್ಕು ಜನಕ್ಕೆ ಒಳ್ಳೆಯದಾಗಿದ್ದರೆ ಅದೇ ಈ ಸಮಾಜಕ್ಕೆ ಕೊಡುವ ಕೊಡುಗೆ.

ಬುದ್ಧಿವಂತ ಮತ್ತು ಕೌಶಲ್ಯದಿಂದ ಕೂಡಿರುವ ಯುವಕರು ಅದನ್ನೇ ಸರಕನ್ನಾಗಿ ಮಾರಾಟ ಮಾಡುತ್ತಾರೆ. ವಿದ್ಯಾರ್ಥಿಗಳು ತಮ್ಮ ಬುದ್ಧಿಶಕ್ತಿಯಿಂದ ಈ ದೇಶವನ್ನು ಕಟ್ಟಿ ಬೆಳೆಸಬೇಕು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಹೆಚ್.ವಿ. ಶಿವಪ್ಪ ಮಾತನಾಡಿ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಒಳ್ಳೆಯ ನುಡಿ ಆಚಾರ ವಿಚಾರಗಳನ್ನು ಕಲಿತು ಉತ್ತಮ ಪ್ರಜೆಗಳಾಗಿ ಹೊರಹೊಮ್ಮಬೇಕು ಎಂದರು.

ಆಡಳಿತ ಮಂಡಳಿ ಉಪಾಧ್ಯಕ್ಷ ಹೆಚ್.ಕೆ. ಪ್ರಸನ್ನ, ಕಾರ್ಯದರ್ಶಿ ಎಚ್.ಎಸ್. ರಾಜಶೇಖರ್, ಮುಖ್ಯ ಶಿಕ್ಷಕ ಬಸವರಾಜಶೆಟ್ಟಿ, ನಿವೃತ್ತ ಸೈನಿಕ ಹೆಚ್ ಎನ್ ಪುಟ್ಟೇಗೌಡ, ಉಪನ್ಯಾಸಕ ಎಂ.ಎನ್. ವೆಂಕಟನಾಯಕ್, ಎಂ. ಕೆ. ವಿಜಯಕುಮಾರ್, ಡಿ. ಕವಿತಾ, ಸಿ.ಡಿ. ಲೋಕೇಶ್, ಎ.ಆರ್. ಯೋಗೀಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net