ರಾಧೆಯಿಂದ ಕೃಷ್ಣನ ವ್ಯಕ್ತಿತ್ವ ಅನಾವರಣ

HYR KRISHNA 16 (1)
Published on

ಹಿರಿಯೂರು: ಕೃಷ್ಣನ ಜೀವನ ಮತ್ತು ದರ್ಶನ ನಮ್ಮ ಪಾಲಿಗೆ ಪ್ರತಿದಿನ ಹಬ್ಬವಾಗಿದ್ದು, ನಮ್ಮ ಸಂಸೃತಿಗೆ ರಸಶಕ್ತಿ ತುಂಬಿದ್ದು ಕೃಷ್ಣತತ್ವ ಎಂದು ಮಾಜಿ ಶಾಸಕಿ ಕೆ.ಪೂರ್ಣಿಮಾ ಹೇಳಿದರು.

ತಾಲೂಕು ಯಾದವ ಸಂಘ ವೇದಾವತಿ ನಗರದ ಶ್ರೀಕೃಷ್ಣ ದೇಗುಲದ ಬಳಿ ಶನಿವಾರ ಹಮ್ಮಿಕೊಂಡಿದ್ದ ಶ್ರೀಕೃಷ್ಣ ಜಯಂತ್ಯುತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.

ರಾಧಾ ಕೃಷ್ಣ ಪ್ರೀತಿಯ ಸಂಕೇತವಾದರೂ, ರಾಧೆಯು ಕೃಷ್ಣನ ವ್ಯಕ್ತಿತ್ವವನ್ನು ಜಗತ್ತಿಗೆ ತೋರಿಸಿಕೊಟ್ಟಿದ್ದಾಳೆ. ಕೃಷ್ಣನ ಜೀವನ, ಆದರ್ಶ ನಮ್ಮೆಲ್ಲರಿಗೂ ದಾರಿ ದೀಪವಾಗಿದ್ದು, ಭಗವದ್ಗೀತೆಯ ಸಂದೇಶಕ್ಕೆ ಭಾರತವಲ್ಲದೆ ಇಡೀ ವಿಶ್ವವೇ ತಲೆಬಾಗಿದೆ ಎಂದರು.

ಇಂದಿನ ಯುವ ಸಮೂಹ ಮೊಬೈಲ್ ಹುಚ್ಚಿಗೆ ಕಡಿವಾಣ ಹಾಕಿ, ಗೀತೆ ಓದುವ ಕಡೆ ಗಮನ ಹರಿಸಿದರೆ ಮನಸ್ಸಿಗೆ ಶಾಂತಿ ನೆಮ್ಮದಿ ಜತೆಗೆ ಧರ್ಮ-ಅಧರ್ಮ ಬಗ್ಗೆಯೂ ತಿಳಿಯಬಹುದು ಎಂದು ಹೇಳಿದರು.

ರಾಜ್ಯ ಯಾದವ ಸಂಘದ ಅಧ್ಯಕ್ಷ ಡಿ.ಟಿ.ಶ್ರೀನಿವಾಸ್ ಮಾತನಾಡಿ, ಭೂಲೋಕದಲ್ಲಿ ಅಧರ್ಮ ನೆಲೆಸಿದಾಗ ಅದನ್ನು ಹೊಡೆದೋಡಿಸಲು ಶ್ರಮಿಸಿದ ಶ್ರೇಷ್ಠ ಪುರುಷ ಶ್ರೀಕೃಷ್ಣ. ಆತ ಸರ್ವ ಸಮುದಾಯದ ಆರಾಧ್ಯ ದೈವ ಎಂದರು.

ಕುರುಕ್ಷೇತ್ರ ಯುದ್ಧ ನಿಲ್ಲಿಸಲು ತನ್ನಿಂದಾದ ಎಲ್ಲ ಪ್ರಯತ್ನ ಮಾಡಿದ ಶ್ರೀಕೃಷ್ಣ ಯುದ್ಧ ಎಂಬುದು ದುಷ್ಟ ಜನರ ಅಂತ್ಯಕ್ಕಿರುವ ಕೊನೆ ಆಯ್ಕೆ ಎಂಬುದನ್ನು ತೋರಿಸಿಕೊಟ್ಟ ಜಗದ್ಗುರು ಎಂದು ಹೇಳಿದರು.

ಮಕ್ಕಳು ರಾಧೆ-ಕೃಷ್ಣ ಗೋಕುಲ ಕೃಷ್ಣ ಗೋಪಿಕಾ ಸ್ತ್ರೀ ಸೇರಿ ವಿವಿಧ ವೇಷಭೂಷಣಗಳಲ್ಲಿ ಕಂಗೊಳಿಸಿದರು.

ಶ್ರೀಕೃಷ್ಣ ದೇಗುಲದ ಬಳಿ ಉತ್ಸವ ಮೂರ್ತಿಗೆ ಶಾಸಕರು ವಿಶೇಷ ಪೂಜೆ ಸಲ್ಲಿಸಿ, ಮೆರವಣಿಗೆಗೆ ಚಾಲನೆ ನೀಡಿದರು. ರಾಜ ಬೀದಿಯಲ್ಲಿ ಕೋಲಾಟ, ಡೊಳ್ಳು, ವೀರಗಾಸೆ ಕುಣಿತ ನೋಡುಗರ ಮನಸೂರೆಗೊಂಡವು. ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.

ಗ್ರಾಪಂ ಅಧ್ಯಕ್ಷೆ ಸಣ್ಣಮ್ಮ, ಉಪಾಧ್ಯಕ್ಷೆ ವಿಜಯಲಕ್ಷ್ಮೀ, ತಾಲೂಕು ಯಾದವ ಸಂಘದ ಅಧ್ಯಕ್ಷ ಆರ್.ರಂಗಸ್ವಾಮಿ, ನಗರಸಭೆ ಮಾಜಿ ಅಧ್ಯಕ್ಷೆ ಶಿವರಂಜನಿ, ಮುಖಂಡರಾದ ಕಿರಣ್, ದಿನೇಶ್, ಉಗ್ರಮೂರ್ತಿ, ತಿಮ್ಮಯ್ಯ, ಕರಿಯಪ್ಪ, ಕೃಷ್ಣಮೂರ್ತಿ, ಬಿಜೆಪಿ ಮಂಡಲ ಅಧ್ಯಕ್ಷ ವಿಶ್ವನಾಥ್, ರಾಘವೇಂದ್ರ, ರಘುರಾಮ್, ನಿರಂಜನಮೂರ್ತಿ, ಚಿತ್ತಪ್ಪ, ಎಂ.ಶಿವಣ್ಣ, ಶಿವು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net