ಭತ್ತದ ಕಣಜ ಕೆ.ಆರ್.ನಗರ ಕ್ಷೇತ್ರದ ಟಿಕೆಟ್‌ಗಾಗಿ ಪೈಪೋಟಿ

k.r.nagar-taluk
Published on

ಅವಿನಾಶ್ ಜೈನಹಳ್ಳಿ ಮೈಸೂರು
ಜಿದ್ದಾಜಿದ್ದಿಯ ರಾಜಕಾರಣಕ್ಕೆ ಹೆಸರುವಾಸಿಯಾಗಿರುವ ‘ಭತ್ತದ ಕಣಜ’ ಕೆ.ಆರ್.ನಗರದಲ್ಲಿ ಆರು ತಿಂಗಳಿಗೂ ಮುನ್ನವೇ 2023ರ ವಿಧಾನಸಭೆ ಚುನಾವಣೆಯ ಕಾವು ಏರತೊಡಗಿದೆ. ಪ್ರಮುಖ ಪಕ್ಷಗಳ ಟಿಕೆಟ್ ಆಕಾಂಕ್ಷಿಗಳು ಈಗಾಗಲೇ ಕ್ಷೇತ್ರದಲ್ಲಿ ಮತಬೇಟೆ ಆರಂಭಿಸಿದ್ದು, ಊರೂರು ತಿರುಗಿ ಪ್ರಚಾರ ನಡೆಸುತ್ತಿದ್ದಾರೆ.
ಜೆಡಿಎಸ್‌ನಿಂದ ಶಾಸಕ ಸಾ.ರಾ.ಮಹೇಶ್ ಮತ್ತೊಮ್ಮೆ ಸ್ಪರ್ಧಿಸುವುದು ಖಚಿತವಾಗಿದೆ. ಆದರೆ ಕಾಂಗ್ರೆಸ್‌ನಿಂದ ಇಬ್ಬರು ಟಿಕೆಟ್ ಆಕಾಂಕ್ಷಿಗಳಿದ್ದರೂ ತಾಲೂಕಿನ ಪ್ರಭಾವಿ ಮುಖಂಡ ದೊಡ್ಡಸ್ವಾಮಿಗೌಡರ ಮಗ, ಜಿಲ್ಲಾ ಪಂಚಾಯಿತಿ ವಿರೋಧ ಪಕ್ಷದ ಮಾಜಿ ನಾಯಕ ಡಿ.ರವಿಶಂಕರ್ ಮುನ್ನೆಲೆಯಲ್ಲಿದ್ದಾರೆ. ಈ ಬಾರಿಯೂ ಕಾಂಗ್ರೆಸ್ ಟಿಕೆಟ್ ಪಡೆದು ಚುನಾವಣೆಗೆ ಸ್ಪರ್ಧಿಸಿ ಹೇಗಾದರೂ ಮಾಡಿ ವಿಧಾನಸಭೆ ಪ್ರವೇಶಿಸಬೇಕು ಎಂಬ ಪಣ ತೊಟ್ಟಿದ್ದಾರೆ. ಅಲ್ಲದೆ, ಈ ನಿಟ್ಟಿನಲ್ಲಿ ನಿರಂತರವಾಗಿ ಕ್ಷೇತ್ರದಲ್ಲಿ ಪಕ್ಷ ಕಟ್ಟುತ್ತಿದ್ದು, ಕಾರ್ಯಕರ್ತರ ಜತೆ ಸಂಪರ್ಕದಲ್ಲಿದ್ದಾರೆ.
2018ರಲ್ಲೂ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಮಾಜಿ ಶಾಸಕ ದಿ.ಮಂಚನಹಳ್ಳಿ ಮಹದೇವ್ ಅವರ ಪುತ್ರಿ, ರಾಷ್ಟ್ರೀಯ ಕಾಂಗ್ರೆಸ್ ವಕ್ತಾರೆ ಐಶ್ವರ್ಯಾ ಮಹದೇವ್ ಈ ಬಾರಿಯಾದರೂ ಟಿಕೆಟ್ ಪಡೆದುಕೊಳ್ಳಬೇಕೆಂದು ಕಸರತ್ತು ನಡೆಸುತ್ತಿದ್ದಾರೆ. ಕಾಂಗ್ರೆಸ್ ಟಿಕೆಟ್‌ಗಾಗಿ ಐಶ್ವರ್ಯಾ ಮಹದೇವ್ ಹಾಗೂ ಡಿ.ರವಿಶಂಕರ್ ಇಬ್ಬರೂ ಅರ್ಜಿ ಸಲ್ಲಿಸಿದ್ದಾರೆ.

ಇನ್ನು ಬಿಜೆಪಿಯಿಂದ ಹೊಸಹಳ್ಳಿ ವೆಂಕಟೇಶ್, ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಮಿರ್ಲೆ ಶ್ರೀನಿವಾಸ್‌ಗೌಡ, 2018ರಲ್ಲಿ ಪಕ್ಷದ ಅಭ್ಯರ್ಥಿಯಾಗಿದ್ದ ಶ್ವೇತಾ ಗೋಪಾಲ್ ಆಕಾಂಕ್ಷಿಗಳಾಗಿದ್ದಾರೆ.
ಕ್ಷೇತ್ರದಲ್ಲಿ ಬಿಜೆಪಿಗೆ ಹೇಳಿಕೊಳ್ಳುವಷ್ಟು ನೆಲೆ ಇಲ್ಲ. ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳು ತಮ್ಮದೇ ಆದ ಪ್ರಾಬಲ್ಯ ಹೊಂದಿವೆ. ಈ ಕ್ಷೇತ್ರದ ಇತಿಹಾಸ ಗಮನಿಸಿದರೆ, ಹಿಂದಿನಿಂದಲೂ ಕಾಂಗ್ರೆಸ್ ಮತ್ತು ಜೆಡಿಎಸ್ ಅಭ್ಯರ್ಥಿಗಳ ನಡುವೆಯೇ ಸಾಕಷ್ಟು ಪೈಪೋಟಿ ನಡೆಯುತ್ತಿದೆ. ಅದು 2023ರ ಚುನಾವಣೆಯಲ್ಲೂ ಮುಂದುವರಿಯುವ ನಿರೀಕ್ಷೆ ಇದೆ. ಹಿಂದೆಲ್ಲ ಎಚ್.ವಿಶ್ವನಾಥ್ (ಕಾಂಗ್ರೆಸ್) ಮತ್ತು ನಂಜಪ್ಪ (ಜೆಡಿಎಸ್) ನಡುವೆಯೇ ನೇರ ಹೋರಾಟ ನಡೆಯುತ್ತಿತ್ತು. ಹಾಗಾಗಿ, ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಟಿಕೆಟ್‌ಗೆ ಡಿಮ್ಯಾಂಡ್ ಹೆಚ್ಚಾಗಿದೆ. ಈ ಬಾರಿಯೂ ಜೆಡಿಎಸ್ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳ ನಡುವೆಯೇ ಪೈಪೋಟಿ ನಡೆಯುವ ಸಾಧ್ಯತೆ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಉಭಯ ಪಕ್ಷಗಳ ಆಕಾಂಕ್ಷಿಗಳು ಕ್ಷೇತ್ರದಲ್ಲಿ ಸುತ್ತಾಟ ಆರಂಭಿಸಿದ್ದಾರೆ. ಬಿಜೆಪಿ ಆಕಾಂಕ್ಷಿಗಳು ಅಷ್ಟಾಗಿ ಓಡಾಟ ನಡೆಸುತ್ತಿಲ್ಲ.

ಕಾಂಗ್ರೆಸ್ ಟಿಕೆಟ್ ರವಿಶಂಕರ್‌ಗೆ ಬಹುತೇಕ ಖಚಿತ!
ಕಾಂಗ್ರೆಸ್‌ನಿಂದ ಇಬ್ಬರು ಆಕಾಂಕ್ಷಿಗಳಿದ್ದರೂ ಡಿ.ರವಿಶಂಕರ್ ಅವರಿಗೆ ಟಿಕೆಟ್ ಖಚಿತ ಎನ್ನಲಾಗಿದೆ. ಕಾಂಗ್ರೆಸ್ ಸೇರಲು ಮುಂದಾಗಿದ್ದ ಶಾಸಕ ಜಿ.ಟಿ.ದೇವೇಗೌಡ ಅವರು ತಮಗೆ ಹಾಗೂ ತಮ್ಮ ಮಗ ಜಿ.ಡಿ.ಹರೀಶ್‌ಗೌಡ ಇಬ್ಬರಿಗೂ ಟಿಕೆಟ್ ಘೋಷಿಸಿದರೆ ಮಾತ್ರ ಪಕ್ಷ ಸೇರುವ ಬಗ್ಗೆ ತಿಳಿಸಿದ್ದರು. ತಮ್ಮ ಮಗನಿಗೆ ಹುಣಸೂರು, ಕೆ.ಆರ್.ನಗರ ಅಥವಾ ಚಾಮರಾಜ ಕ್ಷೇತ್ರಗಳ ಪೈಕಿ ಒಂದರಲ್ಲಿ ಟಿಕೆಟ್ ನೀಡುವಂತೆ ಕಾಂಗ್ರೆಸ್ ನಾಯಕರಲ್ಲಿ ಕೇಳಿಕೊಂಡಿದ್ದರು. ಹಾಗಾಗಿ, ಜಿ.ಡಿ.ಹರೀಶ್‌ಗೌಡ ಅವರಿಗೆ ಕೆ.ಆರ್.ನಗರ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಸಿಕ್ಕಿ, ಡಿ.ರವಿಶಂಕರ್ ಅವರ ಆಸೆಗೆ ಜಿ.ಡಿ.ಹರೀಶ್‌ಗೌಡ ಅಡ್ಡಿಯಾಗಲಿದ್ದಾರೆಯೇ ಎಂಬ ಅನುಮಾನ ಇಡೀ ಕ್ಷೇತ್ರದಲ್ಲಿ ಆವರಿಸಿತ್ತು. ಆದರೆ, ಬದಲಾದ ರಾಜಕೀಯ ಸನ್ನಿವೇಶದಲ್ಲಿ ಜಿ.ಟಿ.ದೇವೇಗೌಡ ಜೆಡಿಎಸ್‌ನಲ್ಲಿಯೇ ಉಳಿಯಲು ತೀರ್ಮಾನಿಸಿದ್ದಾರೆ. ಜೆಡಿಎಸ್ ನಾಯಕರು ಜಿಟಿಡಿಗೆ ಚಾಮುಂಡೇಶ್ವರಿ ಹಾಗೂ ಹರೀಶ್‌ಗೌಡಗೆ ಹುಣಸೂರು ಕ್ಷೇತ್ರದ ಟಿಕೆಟ್ ಘೋಷಿದ್ದಾರೆ. ಈ ಬೆಳೆವಣಿಗೆ ಡಿ.ರವಿಶಂಕರ್ ಅವರಿಗೆ ಇದ್ದ ಪ್ರಮುಖ ಆತಂಕವನ್ನು ದೂರ ಮಾಡಿದೆ. ಜತೆಗೆ, ಇತ್ತೀಚೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೆ.ಆರ್.ನಗರದ ಕಾರ್ಯಕ್ರಮವೊಂದರ ಭಾಷಣದಲ್ಲಿ ‘ಮುಂದಿನ ಚುನಾವಣೆಯಲ್ಲಿ ಡಿ.ರವಿಶಂಕರ್‌ಗೆ ಮತ ನೀಡಿ ಗೆಲ್ಲಿಸಿ’ ಎಂದು ಹೇಳುವ ಮೂಲಕ ಅವರಿಗೆ ಟಿಕೆಟ್ ಖಚಿತವೆಂದು ಪರೋಕ್ಷವಾಗಿ ಘೋಷಿಸಿದ್ದಾರೆ.

ಕ್ಷೇತ್ರದಲ್ಲಿ ಭರ್ಜರಿ ಸುತ್ತಾಟ:
ಶಾಸಕ ಸಾ.ರಾ.ಮಹೇಶ್ ಹಾಗೂ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಡಿ.ರವಿಶಂಕರ್ ಕ್ಷೇತ್ರದಲ್ಲಿ ನಿರಂತರವಾಗಿ ತಿರುಗಾಡುತ್ತಿದ್ದು, ಮೂರು ತಿಂಗಳ ಹಿಂದೆಯೇ ಚುನಾವಣಾ ಪ್ರಚಾರ ಆರಂಭಿಸಿದ್ದಾರೆ. ಸಾ.ರಾ.ಮಹೇಶ್ ವಾರದಲ್ಲಿ ಎರಡರಿಂದ ಮೂರು ದಿನ ಕ್ಷೇತ್ರಕ್ಕೆ ಭೇಟಿ ನೀಡಿ, ನಾನಾ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದರು. ಪ್ರತಿ ಸೋಮವಾರ ಮೈಸೂರಿನಲ್ಲಿರುವ ತಮ್ಮ ಕಚೇರಿಯಲ್ಲಿ ಕ್ಷೇತ್ರದ ಜನರ ಕಷ್ಟ-ಸುಖ ಕೇಳುತ್ತಿದ್ದರು. ಆದರೆ, ಮೂರು ತಿಂಗಳಿನಿಂದ ಕ್ಷೇತ್ರದಲ್ಲಿಯೇ ಬೀಡು ಬಿಟ್ಟಿರುವ ಶಾಸಕರು ಪ್ರತಿ ಹಳ್ಳಿಯಲ್ಲೂ ಸುತ್ತಾಡುತ್ತಿದ್ದಾರೆ. ಕ್ಷೇತ್ರದಲ್ಲಿ ನಡೆಯುತ್ತಿರುವ ಎಲ್ಲ ಕಾರ್ಯಕ್ರಮಗಳು, ಸಾವು-ನೋವು, ಮದುವೆ ಸಮಾರಂಭಗಳಲ್ಲಿ ಭಾಗಿಯಾಗುತ್ತಿದ್ದಾರೆ.
ಇತ್ತ ಡಿ.ರವಿಶಂಕರ್ ಕ್ಷೇತ್ರದಲ್ಲಿ ತಮ್ಮದೇ ಆದ ಶಕ್ತಿ ಹೊಂದಿದ್ದಾರೆ. ಕಾರ್ಯಕರ್ತರ ಜತೆ ಉತ್ತಮ ಒಡನಾಟ ಇಟ್ಟುಕೊಂಡಿದ್ದಾರೆ. ಮತಬೇಟೆಗಾಗಿ ಜನಾಶೀರ್ವಾದ ಯಾತ್ರೆ ನಡೆಸುತ್ತಿದ್ದಾರೆ. ಪ್ರತಿದಿನ ಕ್ಷೇತ್ರದ ಒಂದೊಂದು ಗ್ರಾಮಕ್ಕೆ ಹೋಗಿ ಮತದಾರರನ್ನು ಭೇಟಿಯಾಗುವ ಮೂಲಕ ಪ್ರಚಾರ ಮಾಡುತ್ತಿದ್ದಾರೆ. ಜತೆಗೆ, ಸಾವು-ನೋವುಗಳಲ್ಲೂ ಭಾಗಿಯಾಗುತ್ತಿದ್ದಾರೆ. 2013ರ ಚುನಾವಣೆಯಲ್ಲಿ ಡಿ.ರವಿಶಂಕರ್ ತಂದೆ ದೊಡ್ಡಸ್ವಾಮಿಗೌಡ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಸೋಲು ಕಂಡಿದ್ದರು. 2018ರ ಚುನಾವಣೆಯಲ್ಲಿ ಡಿ.ರವಿಶಂಕರ್ ಕಾಂಗ್ರೆಸ್ ಅಭ್ಯರ್ಥಿಯಾಗಿ ಸಾ.ರಾ.ಮಹೇಶ್‌ಗೆ ಪೈಪೋಟಿ ನೀಡಿದ್ದರು. ಆಗ ಶಾಸಕ ಸಾ.ರಾ.ಮಹೇಶ್ 1,779 ಮತಗಳ ಅಂತರದಿಂದ ಪ್ರಾಯಾಸದ ಗೆಲುವು ಸಾಧಿಸಿದ್ದರು. ಅಂತೆಯೆ, ಈ ಬಾರಿ ಶತಾಯ ಗತಾಯ ಶಾಸಕರಾಗಲು ಡಿ.ರವಿಶಂಕರ್ ಮುಂದಾಗಿದ್ದರೆ, ಗೆಲುವಿನ ಓಟ ಮುಂದುವರಿಸಲು ಸಾ.ರಾ.ಮಹೇಶ್ ಯತ್ನಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net