ಸಾಹಿತ್ಯ ಬೆಳವಣಿಗೆಗೆ ಕೃಷ್ಣರಾಜ ಒಡೆಯರ್ ಕೊಡುಗೆ ಅಪಾರ: ಟಿ.ಪಿ.ರಮೇಶ್

kasapa
Published on

ಮಡಿಕೇರಿ: ಕನ್ನಡ ನಾಡು, ನುಡಿ, ಸಂಸ್ಕೃತಿ ರಕ್ಷಣೆಗಾಗಿ ೧೯೧೫ರಲ್ಲಿ ಆಗಿನ ಮೈಸೂರು ಸಂಸ್ಥಾನದ ಅರಸರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಕೊಡುಗೆ ಅಪಾರ ಎಂದು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್ ಬಣ್ಣಿಸಿದರು.


ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಮಡಿಕೇರಿ ನಗರದ ಕ.ಸಾ.ಪ.ಕಛೇರಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.


ನಾಲ್ವಡಿ ಕೃಷ್ಣರಾಜ ಒಡೆಯರ್‌ರವರ ವಿಶೇಷ ಕಾಳಜಿ ವಹಿಸಿ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾಗಿ ಪರಿಷತ್ ಸಂಸ್ಥಾಪನೆ ಗೊಳ್ಳಲು ಪ್ರಮುಖ ಕಾರಣರಾಗಿದ್ದರು. ಆಗಿನಿಂದ ಇಂದಿನವರೆಗೂ ಹಲವು ಮಹನೀಯರು ಕನ್ನಡ ಕಟ್ಟುವ ಕಾರ್ಯದಲ್ಲಿ ತೊಡಗಿ ಕನ್ನಡ ನಾಡು, ನುಡಿ ಬೆಳವಣಿಗೆಗೆ ನೆರವಾಗಿದ್ದಾರೆ. ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ, ಪರಂಪರೆಯ ರಕ್ಷಣೆಗಾಗಿ ದುಡಿದವರನ್ನು ಸ್ಮರಿಸುವ ಮೂಲಕ ಎಲ್ಲರೂ ಕನ್ನಡಕ್ಕಾಗಿ ಕೈ ಎತ್ತಿ ನಾಡು-ನುಡಿಯ ರಕ್ಷಣೆಗೆ ಕಂಕಣಬದ್ಧರಾಗಿರಬೇಕು ಎಂದರು.


ಕನ್ನಡ ನಾಡಿನಲ್ಲಿ ಕೈಗಾರಿಕೆ, ವಿದ್ಯೆ, ಕೃಷಿಗೆ ಆದ್ಯತೆ ನೀಡಿದ್ದ ಅವರು, ಮೈಸೂರು ಸಂಸ್ಥಾನದಲ್ಲಿ ಬೃಹತ್ ಕೈಗಾರಿಕೆ ಸ್ಥಾಪನೆ ಮಾಡಬೇಕು ಎಂದು ಭದ್ರಾವತಿಯ ಕಾಗದದ ಕಾರ್ಖಾನೆ, ಶಿವನಸಮುದ್ರ ಜಲ ವಿದ್ಯುತ್ ಘಟಕ ಸ್ಥಾಪಿಸಿದರು. ರಾಜ್ಯದಲ್ಲಿ ಒಂದು ವಿಶ್ವವಿದ್ಯಾಲಯ ಸ್ಥಾಪನೆ ಮಾಡಬೇಕೆಂಬ ಆಶಯದ ಫಲವಾಗಿ ಮೈಸೂರು ವಿಶ್ವವಿದ್ಯಾಲಯ ಆರಂಭ ಮಾಡಿದರು ಎಂದು ರಮೇಶ್ ಹೇಳಿದರು.


ಕೊಡಗು ಜಿಲ್ಲೆಯಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿ ಹುಟ್ಟಿಕೊಂಡ ಹಲವಾರು ಸಂಸ್ಥೆಗಳು ಕನ್ನಡ ಭಾಷೆ, ಸಾಹಿತ್ಯ, ಪರಂಪರೆಗೆ ಶ್ರಮಿಸಿವೆ. ತರುವಾಯ ದಿ.ಡಿ.ಜೆ.ಪದ್ಮನಾಭ ಅವರ ನೇತೃತ್ವದಲ್ಲಿ ಕೊಡಗಿನಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಸ್ತಿತ್ವಕ್ಕೆ ಬಂದು ೫೪ ವರ್ಷಗಳು ಸಂದಿವೆ. ಅಂದಿನಿಂದ ಜಿಲ್ಲೆಯಲ್ಲಿ ಪರಿಷತ್ತಿನ ವತಿಯಿಂದ ವೈವಿಧ್ಯಮಯ ಕಾರ್ಯಕ್ರಮಗಳು, ತಾಲೂಕು, ಜಿಲ್ಲಾ ಸಮ್ಮೇಳನಗಳು ಸೇರಿದಂತೆ ಜಿಲ್ಲೆಯಲ್ಲಿ ಈ ತನಕ ಮೂರು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳನ್ನು ಸಂಘಟಿಸಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಟಿ.ಪಿ.ರಮೇಶ್ ತಿಳಿಸಿದರು.


ಕನ್ನಡದ ಕೆಲಸಕ್ಕಾಗಿ ಎಲ್ಲರೂ ಟೊಂಕ ಕಟ್ಟಿ ಕನ್ನಡದ ಅಸ್ಮಿತೆ ಹಾಗೂ ಬೆಳವಣಿಗೆಗೆ ಶ್ರಮಿಸಬೇಕು. ಜಿಲ್ಲೆಯಲ್ಲಿ ವಿದ್ಯಾರ್ಥಿ ಸಮುದಾಯ ಹಾಗೂ ಯುವ ಜನಾಂಗದಲ್ಲಿ ಸಾಹಿತ್ಯದ ಅಭಿರುಚಿ ಬೆಳೆಸುವಲ್ಲಿ ಜಿಲ್ಲಾ ್ಕನ್ನಡ ಸಾಹಿತ್ಯ ಪರಿಷತ್ತು ಅವಿರತವಾಗಿ ಶ್ರಮಿಸುತ್ತಿದೆ ಎಂದರು.


ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಕೊಡಗು ಜಿಲ್ಲಾ ಸಮಿತಿಯ ಅಧ್ಯಕ್ಷ ಟಿ.ಜಿ.ಪ್ರೇಮಕುಮಾರ್ ಮಾತನಾಡಿ, ಕನ್ನಡ ಭಾಷೆ, ಸಾಹಿತ್ಯ, ಕಲೆ, ಸಂಸ್ಕತಿ, ಪರಂಪರೆಯನ್ನು ರಕ್ಷಿಸಲು ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾಗಿ ೧೯೧೫ರಂದು ಕನಾಟಕ ಸಾಹಿತ್ಯ ಪರಿಷತ್ ಸ್ಥಾಪನೆಯಾಗಲು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕೊಡುಗೆ ಅಪಾರವಾದುದು. ಒಡೆಯರ್ ಅವರ ಪ್ರಯತ್ನಕ್ಕೆ ಅಂದಿನ ಮೈಸೂರು ಸಂಸ್ಥಾನದ ದಿವಾನರಾಗಿದ್ದ ಸರ್ ಎಂ.ವಿಶ್ವೇಶ್ವರಯ್ಯ ಹಾಗೂ ಮಿರ್ಜಾ ಇಸ್ಮಾಯಿಲ್ ಅವರ ಕಾರ್ಯ ಕೂಡ ಗಣನೀಯವಾದುದು ಎಂದರು.


ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕೆ.ಆರ್.ನಗರ ತಾಲೂಕಿನ ಡೋರನಹಳ್ಳಿ ಸಂತ ಅಂತೋಣಿ ಪ್ರೌಢಶಾಲೆಯ ಕನ್ನಡ ಅಧ್ಯಾಪಕ
ವಿಲ್ಫ್ರೆಡ್ ಕ್ರಾಸ್ತಾ, ಮೈಸೂರು ಸಂಸ್ಥಾನದ ಮೂಲಕ ಕನ್ನಡ ನಾಡಿನ ಹತ್ತು ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕನ್ನಡ ಸೇವೆಯು ಅನುಕರಣೀಯವಾದುದು. ಕನ್ನಡ ನಾಡಿಗೆ ಒಡೆಯರರ ಅವರ ಕೊಡುಗೆ ಅಪಾರವಾದುದು. ಕನ್ನಡಿಗರಾದ ನಾವೆಲ್ಲರೂ ಜತೆಗೂಡಿ ಕನ್ನಡ ಭಾಷೆ ಬೆಳವಣಿಗೆಗೆ ಶ್ರಮಿಸಬೇಕು ಎಂದರು.


ಜಿಲ್ಲಾ ಕ.ಸಾ.ಪ. ಗೌರವ ಕಾರ್ಯದರ್ಶಿ ಎಸ್.ಐ.ಮುನಿರ್ ಅಹ್ಮದ್, ಭಾರತ್ ಸ್ಕೌಟ್ಸ್, ಗೈಡ್ಸ್‌ನ ಜಿಲ್ಲಾ ಸಂಸ್ಥೆಯ ಪ್ರಧಾನ ಆಯುಕ್ತ ಕೆ.ಟಿ.ಬೇಬಿಮ್ಯಾಥ್ಯೂ, ಜಿಲ್ಲಾ ಲೇಖಕರು ಮತ್ತು ಕಲಾವಿದರ ಸಂಘದ ಅಧ್ಯಕ್ಷ ಲೋಕನಾಥ್ ಅಮೆಚೂರ್, ಮಡಿಕೇರಿ ತಾಲೂಕು ಕ.ಸಾ.ಪ.ಅಧ್ಯಕ್ಷೆ ಕಡ್ಲೇರ ತುಳಸಿ, ಜಿಲ್ಲಾ ಕ.ಸಾ.ಪ.ಗೌರವ ಕಾರ್ಯದರ್ಶಿ ರೇವತಿ ರಮೇಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net