ಕೃಷ್ಣರಾಜ ಒಡೆಯರ್ ಕೊಡುಗೆ ಅಪಾರ: ಸುಬ್ರಾಯ ಸಂಪಾಜೆ

nalvadi krishnaraja
Published on

ಮಡಿಕೇರಿ: ಕನ್ನಡ ನಾಡಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕೊಡುಗೆ ಅಪಾರವಾಗಿದೆ. ಶಿಕ್ಷಣ, ಉದ್ಯೋಗ, ಆರೋಗ್ಯ, ನೀರಾವರಿ, ಕೈಗಾರಿಕೆ, ವಿದ್ಯುತ್, ಆರ್ಥಿಕ, ಹೀಗೆ ಹಲವು ಕ್ಷೇತ್ರಗಳ ಅಭಿವೃದ್ಧಿಗೆ ಚಾಲನೆ ನೀಡಿದ್ದರು ಎಂದು ಸಾಹಿತಿ ಹಾಗೂ ಆಕಾಶವಾಣಿ ನಿವೃತ್ತ ಉದ್ಘೋಷಕರಾದ ಸುಬ್ರಾಯ ಸಂಪಾಜೆ ಸ್ಮರಿಸಿದರು.

ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಸರ್ಕಾರಿ ಪದವಿ ಪೂರ್ವ ಕಾಲೇಜು ಮತ್ತು ಸರ್ಕಾರಿ ಪ್ರೌಢ ಶಾಲೆ ಇವರ ಸಂಯುಕ್ತ ಆಶ್ರಯದಲ್ಲಿ ನಗರದ ಸರ್ಕಾರಿ ಪ್ರೌಢಶಾಲಾ ಸಭಾಂಗಣದಲ್ಲಿ ಬುಧವಾರ ನಡೆದ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪಕ ರಾಜಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ೧೪೧ ನೇ ಜನ್ಮದಿನೋತ್ಸವ ಹಾಗೂ ವಿಜಯ ವಿಷ್ಣು ಭಟ್ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿ, ಸ್ವಾತಂತ್ರ್ಯ ಪೂರ್ವದಲ್ಲಿ ಭಾರತದ ಶ್ರೇಷ್ಠ ರಾಜರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆಡಳಿತ ಮೇಲ್ಪಂಕ್ತಿಯಿಂದ ಕೂಡಿತ್ತು. ಆಡಳಿತದಲ್ಲಿ ಜನರು ಪಾಲ್ಗೊಳ್ಳುವಂತೆ ಮಾಡಿದ್ದರು ಎಂದರು.

ಕೊಡಗು ಜಿಲ್ಲೆ ಸೇನಾ ಕ್ಷೇತ್ರ ಹಾಗೂ ಕ್ರೀಡಾ ಪರಂಪರೆಗೆ ಹೆಸರಾಗಿದೆ. ಸೈನಿಕ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಜಿಲ್ಲೆಯವರು ತಮ್ಮದೇ ಆದ ಛಾಪು ಮೂಡಿಸಿದ್ದು, ಆ ನಿಟ್ಟಿನಲ್ಲಿ ಈ ಬಗ್ಗೆಯೂ ಸಹ ಅಧ್ಯಯನ ಮಾಡುವಂತಾಗಬೇಕು. ಅಲ್ಲದೇ, ಕೊಡಗಿನ ಸಾಂಸ್ಕೃತಿಕ ಹಾಗೂ ಪಾರಂಪರಿಕ ಶ್ರೀಮಂತಿಕೆ ಹೊಂದಿರುವ ಬುಡಕಟ್ಟು ಜನಾಂಗಗಳ ಬಗ್ಗೆ ವಿಸ್ತತವಾದ ಅಧ್ಯಯನ ನಡೆಯುವಂತಾಗಬೇಕು ಎಂದು ತಿಳಿಸಿದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜಾನಪದ ಮತ್ತು ಸಾಮಾಜಿಕ ಅಧ್ಯಯನ ಸಾಕಷ್ಟು ನಡೆದಿವೆ. ಅದೇ ರೀತಿ ಕೊಡಗು ಜಿಲ್ಲೆಯಲ್ಲಿಯೂ ಜಾನಪದ ಮತ್ತು ಸಾಮಾಜಿಕ ಅಧ್ಯಯನಕ್ಕೆ ಹೆಚ್ಚಿನ ಒತ್ತು ನೀಡುವಂತಾಗಬೇಕು. ಕೊಡಗು ಜಿಲ್ಲೆಯಲ್ಲಿ ಗಮಕ ಕ್ಷೇತ್ರವನ್ನು ಉಳಿಸಿ ಬೆಳೆಸುವಂತಾಗಬೇಕು. ಹಿಂದೆ ಗೋಪಾಲಕೃಷ್ಣ ಅವರು ಗಮಕ ಕ್ಷೇತ್ರದಲ್ಲಿ ಹೆಸರು ಮಾಡಿದ್ದರು. ಮುಂದಿನ ದಿನಗಳಲ್ಲಿ ಗಮಕ ಸಂಗೀತ ಕ್ಷೇತ್ರವನ್ನು ಉಳಿಸುವಂತಾಗಬೇಕು. ಆ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯಬೇಕು ಎಂದು ಸಲಹೆ ನೀಡಿದರು.

ವಿಜಯ ವಿಷ್ಣುಭಟ್ ದತ್ತಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಸ್ಮಿತಾ ಅಮೃತರಾಜ್, ಸಾಹಿತ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಲೋಕ ದರ್ಶನ ಮಾಡಲು ಸಹಕಾರಿಯಾಗಲಿದೆ. ಆ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತಾಗಬೇಕು. ಕನ್ನಡ ಸಾಹಿತ್ಯ ಪರಿಷತ್ತು ಬರಹಗಾರರಿಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದೆ. ಆ ನಿಟ್ಟಿನಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ ಎಲ್ಲರಿಗೂ ಅವಕಾಶಗಳು ದೊರೆಯುವಂತಾಗಬೇಕು ಎಂದರು.

ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ಗೌರವ ಕಾರ್ಯದರ್ಶಿ ಎಸ್.ಐ.ಮುನೀರ್ ಅಹ್ಮದ್ ಮಾತನಾಡಿ, ಮೈಸೂರು ರಾಜ್ಯ ಅಭಿವೃದ್ಧಿಗೆ ಹೆಚ್ಚಿನ ಕೊಡುಗೆ ನೀಡಿದ್ದಾರೆ. ಮೈಸೂರು ಸಂಸ್ಥಾನವನ್ನು ಮಾದರಿ ರಾಜ್ಯವನ್ನಾಗಿ ಮಾಡಿದ್ದರು. ಹಿಂದುಳಿದ ವರ್ಗಗಳಿಗೆ ಮೀಸಲಾತಿಯನ್ನು ಜಾರಿಗೊಳಿಸಿದರು. ಮೈಸೂರನ್ನು ಆಧುನಿಕ ರಾಜ್ಯವನ್ನಾಗಿ ಮಾಡಿದ್ದರು ಎಂದು ವಿವರಿಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಸಾಹಿತಿ ನಾಗೇಶ್ ಕಾಲೂರು ಮಾತನಾಡಿ, ಕನ್ನಡ ಭಾಷೆಗೆ ತನ್ನದೇ ಆದ ಇತಿಹಾಸವಿದೆ. ಅವರವರ ಭಾಷೆಯನ್ನು ಪ್ರೀತಿಸಬೇಕು. ಗೌರವಿಸಬೇಕು. ಹಾಗೂ ಇತರ ಭಾಷೆಗಳನ್ನು ಸಹ ಗೌರವಿಸಬೇಕು. ಯಾರೂ ಸಹ ಸಣ್ಣತನ ಪ್ರದರ್ಶಿಸಬಾರದು ಎಂದು ಸಲಹೆ ನೀಡಿದ ಅವರು, ಅವರವರ ಮಾತೃ ಭಾಷೆ ಅವರಿಗೆ ಹೃದಯ ಶ್ರೀಮಂತಿಕೆ ಭಾಷೆಯಾಗಿದೆ. ಆ ನಿಟ್ಟಿನಲ್ಲಿ ಮತ್ತೊಂದು ಭಾಷೆಯನ್ನು ಗೌರವಿಸಬೇಕು ಎಂದರು.

ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷ ಎಂ.ಪಿ.ಕೇಶವ ಕಾಮತ್ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ೪೦ ದತ್ತಿ ಪ್ರಶಸ್ತಿ ಸ್ಥಾಪಿಸಲಾಗಿದೆ. ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಕೆಲಸ ಮಾಡುವವರನ್ನು ಗೌರವಿಸುತ್ತಾ ಬರಲಾಗಿದೆ. ಪ್ರಸಕ್ತ ವರ್ಷದಿಂದ ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಕಾರ್ಯಕ್ರಮಗಳನ್ನು ಆರಂಭಿಸಲಾಗಿದೆ ಎಂದರು.

ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್ ಮಾತನಾಡಿ, ಬೂಕರ್ ಪ್ರಶಸ್ತಿ ವಿಜೇತರಾದ ಮಡಿಕೇರಿಯ ದೀಪಾಭಾಸ್ತಿ ಅವರಿಗೆ ಜೂ.೯ ಅಥವಾ ೧೦ ರಂದು ಸನ್ಮಾನ ಕಾರ್ಯಕ್ರಮ ಏರ್ಪಡಿಸಲು ಉದ್ದೇಶಿಸಲಾಗಿದೆ ಎಂದರು.

ಕೊಡಗು ಜಿಲ್ಲಾ ಮಹಿಳಾ ಬರಹಗಾರರ ಸಂಘದಿಂದ ಸುಬ್ರಾಯ ಸಂಪಾಜೆ ಅವರನ್ನು ಸನ್ಮಾನಿಸಲಾಯಿತು. ಕೊಡಗು ಜಿಲ್ಲಾ ಮಹಿಳಾ ಬರಹಗಾರರ ಸಂಘದ ಅಧ್ಯಕ್ಷೆ ಪುದಿಯ ನೆರವನ ರೇವತಿ ರಮೇಶ್, ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕದ ಅಧ್ಯಕ್ಷೆ ಕಡ್ಲೇರ ತುಳಸಿ ಮೋಹನ್, ಕಸಾಪ ಕಾರ್ಯಕಾರಿ ಸಮಿತಿ ಸದಸ್ಯರಾದ ಬಾರಿಯಂಡ ಜೋಯಪ್ಪ, ಕಾವೇರಿ ಪ್ರಕಾಶ್, ಬೈತಡ್ಕ ಜಾನಕಿ, ಕಟ್ರತನ ಲಲಿತ ಅಯ್ಯಣ್ಣ, ಲೋಕನಾಥ ಅಮೆಚೂರು, ಪ್ರೇಮ ರಾಘವಯ್ಯ, ಸುನಿತಾ ಲೋಕೇಶ್, ಸುಂದರಿ ಮಾಚಯ್ಯ, ಸಹನಾ ಕಾಂತಬೈಲು, ಗೀತಾ, ನೀತು, ಕನ್ನಡ ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ, ಶಿಕ್ಷಣ ಇಲಾಖೆಯ ಕೃಷ್ಣಪ್ಪ, ಇತರರು ಇದ್ದರು. ವಿನೋದ್ ಮೂಡಗದ್ದೆ ನಿರೂಪಿಸಿದರೆ, ಕಡ್ಲೇರ ತುಳಸಿ ಮೋಹನ್ ಸ್ವಾಗತಿಸಿ, ವಾಸು ರೈ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net