ಕೃಷ್ಣರಾಜ ಕ್ಷೇತ್ರ ಗುಡಿಸಲು ಮುಕ್ತ ಕ್ಷೇತ್ರ : ಎಸ್.ಎ. ರಾಮದಾಸ್ ಘೋಷಣೆ

mla s.a. ramdas
Published on

ಮೈಸೂರು: ಬಡವರ್ಗದ ಪ್ರತಿಯೊಬ್ಬರಿಗೂ ಸೂರು ದೊರೆಯಬೇಕೆಂಬ ಸಂಕಲ್ಪದೊಂದಿಗೆ ಕೃಷ್ಣರಾಜ ಕ್ಷೇತ್ರವನ್ನು ಗುಡಿಸಲು ಮುಕ್ತ ಕ್ಷೇತ್ರವಾಗಿ ಅಭಿವೃದ್ಧಿ ಪಡಿಸಲಾಗಿದೆ ಎಂದು ಶಾಸಕ ಎಸ್.ಎ. ರಾಮದಾಸ್ ಹೇಳಿದರು.

ವಿದ್ಯಾರಣ್ಯಪುರಂನಲ್ಲಿರುವ ಕೆ.ಆರ್. ಕ್ಷೇತ್ರದ ಶಾಸಕರ ಕಚೇರಿಯಲ್ಲಿ ಶನಿವಾರ ಹಮ್ಮಿಕೊಂಡ ಕೇಂದ್ರ ಹಾಗೂ ರಾಜ್ಯ ಸರ್ಕಾರದ ‘ಪರಿಶಿಷ್ಟ ಜಾತಿ’ ಫಲಾನುಭವಿಗಳೊಂ ದಿಗೆ ಸಂವಾದದಲ್ಲಿ ಮಾತನಾಡಿದ ಅವರು, ಕೃಷ್ಣರಾಜ ಕ್ಷೇತ್ರವನ್ನು ಗುಡಿಸಲು ಮುಕ್ತ ಕ್ಷೇತ್ರವನ್ನಾಗಿ ರೂಪಿಸುವ ಸಂಕಲ್ಪವನ್ನು ಮಾಜಿ ಪ್ರಧಾನಿ ವಾಜಪೇಯಿ ಅವರ ಕಾಲದಲ್ಲಿ ತೊಡಲಾಯಿತು. ಆ ಸಂದರ್ಭ ಕೇಂದ್ರದಿಂದ ಸಾಕಷ್ಟು ಅನುದಾನ ದೊರೆಯಿತು. ಆದರೆ, ನಂತರ ಬಂದ ಸರ್ಕಾರದಿಂದ ಒಂದು ರೂ. ಅನುದಾನ ಸಹ ದೊರೆಯಲಿಲ್ಲ. ಇದೀಗ ನರೇಂದ್ರ ಮೋದಿ ಸರ್ಕಾರ ಬಂದ ನಂತರ ಬಡ ವರ್ಗದವರಿಗೆ ಮನೆ ನಿರ್ಮಾಣಕ್ಕೆ 5 ಲಕ್ಷ ರೂ. ದೊರೆಯುತ್ತಿದ್ದು, ಈ ಹಣದಲ್ಲಿ ಮನೆ ನಿರ್ಮಾಣ ಕಾಮಗಾರಿ ಕೈಗೊಂಡು ಪೂರ್ಣಗೊಳಿಸಿದ್ದೇವೆ ಎಂದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ಕ್ಷೇತ್ರದ ಜನರ ಮನೆ ಬಾಗಿಲಿಗೆ ತಲುಪಿಸುವ ಕಾರ್ಯವನ್ನು ಮಾಡಿದ್ದೇವೆ. ಬೀದಿಬದಿ ವ್ಯಾಪಾರಿಗಳಿಂದ ಹಿಡಿದು ಪ್ರತಿಯೊಬ್ಬರಿಗೂ ವಿವಿಧ ಸವಲತ್ತುಗಳನ್ನು ಒಂದೇ ಸೂರಿನಡಿ ದೊರೆಯುವಂತೆ ಮಾಡಲಾಗಿದೆ ಎಂದು ಹೇಳಿದರು.

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಹುಟ್ಟಿನಿಂದ ಸಾವಿನವರೆಗೆ ಎಲ್ಲ ರೀತಿಯ ಯೋಜನೆಗಳನ್ನು ರೂಪಿಸಿ ಅದನ್ನು ಫಲಾನುಭವಿಗಳಿಗೆ ನೇರವಾಗಿ ತಲುಪಿಸುವ ಕಾರ್ಯವನ್ನು ಯಶಸ್ವಿಯಾಗಿ ಮಾಡಿದೆ. ದೇಶದಲ್ಲಿ ಪ್ರತಿಯೊಬ್ಬರಿಗೂ ಕೇಂದ್ರ ಸರ್ಕಾರದ ಒಂದಲ್ಲಾ ಒಂದು ಯೋಜನೆಯ ಸೌಲಭ್ಯಗಳು ದೊರೆತ್ತಿದೆ ಎಂದು ಹೇಳಿದರು.

ದೇಶದ ಕಟ್ಟಕಡೆಯ ವ್ಯಕ್ತಿಗೂ ಬದುಕುವ ಹಕ್ಕು ಇದೆ. ಆ ಕಟ್ಟಕಡೆಯ ವ್ಯಕ್ತಿಗೆ ಬದುಕು ರೂಪಿಸಿಕೊಡಬೇಕಾಗಿರುವುದು ಸರ್ಕಾರದ ಕರ್ತವ್ಯವಾಗಿದ್ದು, ಕೆ.ಆರ್. ಕ್ಷೇತ್ರದಲ್ಲಿ ಕಟ್ಟ ಕಡೆಯ ವ್ಯಕ್ತಿಗೂ ಸರ್ಕಾರದ ಯೋಜನೆ ತಲುಪುವಂತೆ ಶಾಸಕ ರಾಮದಾಸ್ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಪೌರ ಕಾರ್ಮಿಕರನ್ನು ಕಾಯಂಗೊಳಿಸಲಾಯಿತು. 11,900 ಜನರನ್ನು ಕಾಯಂಗೊಳಿಸ ಲಾಗಿದ್ದು, ಇನ್ನುಳಿದ 42 ಸಾವಿರ ಪೌರ ಕಾರ್ಮಿಕರನ್ನು ಪ್ರಸಕ್ತ ವರ್ಷದಲ್ಲೇ ಕಾಯಂಗೊಳಿಸಲಾಗುವುದು. ಅಲ್ಲದೆ ವೇತನವನ್ನು 12 ಸಾವಿರ ರೂ. ಹೆಚ್ಚಳ ಮಾಡಲಾಗಿದೆ ಎಂದರು.

ಸಂವಾದದಲ್ಲಿ ಮೇಯರ್ ಶಿವಕುಮಾರ್, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ್ ತೆಂಗಿನಕಾಯಿ, ಬಿಜೆಪಿ ನಗರಾಧ್ಯಕ್ಷ ಶ್ರೀವತ್ಸ, ಮೇಯರ್ ಶಿವಕುಮಾರ್, ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರ ಮಾಜಿ ಅಧ್ಯಕ್ಷ ಹೇಮಂತ್ ಕುಮಾರ್ ಗೌಡ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net