

ಉಡುಪಿ: ಕೃಷ್ಣಾಪುರ ಮಠದ ಪರ್ಯಾಯ ಪೂರ್ವಭಾವಿ 3ನೇ ಕಾರ್ಯಕ್ರಮ ಕಟ್ಟಿಗೆ ಮುಹೂರ್ತ ಭಾನುವಾರ ಬೆಳಗ್ಗೆ 8.45ಕ್ಕೆ ಕೃಷ್ಣ ಮಠದಲ್ಲಿ ನೆರವೇರಿತು.
ಮಠದ ಪಟ್ಟದ ದೇವರಾದ ಕಾಳೀಯಮರ್ದನ ಕೃಷ್ಣ ಹಾಗೂ ನರಸಿಂಹ ದೇವರ ಸನ್ನಿಧಿಯಲ್ಲಿ ವಿಶೇಷ ಪೂಜೆ, ಪ್ರಾರ್ಥನೆ, ನವಗ್ರಹ ಪೂಜೆ ಸಲ್ಲಿಸಿ ಕಟ್ಟಿಗೆಗಳನ್ನು ತಲೆಹೊರೆಯಲ್ಲಿ ಹೊತ್ತುಕೊಂಡು ಚಂದ್ರೇಶ್ವರ, ಅನಂತೇಶ್ವರ, ಮಧ್ವಾಚಾರ್ಯರು. ಕೃಷ್ಣ ದೇವರ ದರ್ಶನ ಪಡೆದು ನಂತರ ಮಧ್ವ ಸರೋವರದ ಈಶಾನ್ಯ ಭಾಗದ ಕಟ್ಟೆಯಲ್ಲಿರಿಸಿ ಪೂಜೆ ಸಲ್ಲಿಸಲಾಯಿತು. ಕೆ.ಶ್ರೀನಿವಾಸ ಉಪಾಧ್ಯಾಯ ಧಾರ್ಮಿಕ ವಿಧಿವಿಧಾನ ನೇತೃತ್ವ ವಹಿಸಿದ್ದರು.
ಕಾಷ್ಠ ಮುಹೂರ್ತ ವ್ಯಾಪ್ತೋಪಾಸನೆಗೆ ಪೂರಕ
ಈ ಸಂದರ್ಭದಲ್ಲಿ ಆಶೀರ್ವಚನ ನೀಡಿದ ಕೃಷ್ಣಾಪುರ ಶ್ರೀ ವಿದ್ಯಾಸಾಗರತೀರ್ಥ ಸ್ವಾಮೀಜಿ, ಕಾಷ್ಠ ಮುಹೂರ್ತ ಪರ್ಯಾಯ ಕಾಲದ ವ್ಯಾಪ್ತೋಪಾಸನೆಗೆ ಪೂರಕ ಅಂಶ. ಕೃಷ್ಣ ಮಠದಲ್ಲಿ ಶ್ರೀ ವಾದಿರಾಜರು ಹಾಕಿಕೊಟ್ಟ ಪೂಜಾಕ್ರಮವೇ ವಿಶಿಷ್ಟವಾಗಿದ್ದು, ದೇವರನ್ನು ಗರ್ಭಗೃಹ ಮಾತ್ರವಲ್ಲದೆ ಪ್ರತೀ ಅಧಿಷ್ಠಾನಗಳಲ್ಲೂ ಆರಾಧಿಸಲಾಗುತ್ತದೆ. ಹಿಂದಿನ ಕಾಲದಲ್ಲಿ ಮಳೆಗಾಲದಲ್ಲಿ ಜನರಿಗೆ ಯಾವುದೇ ಉದ್ಯೋಗ ಇರಲಿಲ್ಲ. ಅಂಥವರ ಅನುಕೂಲಕ್ಕಾಗಿ ಪರ್ಯಾಯಕ್ಕೆ ಅನೇಕ ತಿಂಗಳು ಪೂರ್ವದಲ್ಲೇ ಕಟ್ಟಿಗೆ ರಥ ನಿರ್ಮಾಣ ಮಾಡಲಾಗುತ್ತದೆ. 1 ಕಟ್ಟು ಕಟ್ಟಿಗೆಗೆ 1 ಸೇರು ಅಕ್ಕಿ ನೀಡುವ ಪದ್ಧತಿ ಚಾಲ್ತಿಯಲ್ಲಿತ್ತು ಎಂದು ಹೇಳಿದರು.
ಕಟೀಲು ದೇವಳ ಅರ್ಚಕರಾದ ಅನಂತಪದ್ಮನಾಭ ಆಸ್ರಣ್ಣ, ಹರಿನಾರಾಯಣದಾಸ ಆಸ್ರಣ್ಣ ಮತ್ತು ಕಮಲಾದೇವಿಪ್ರಸಾದ ಆಸ್ರಣ್ಣ, ಧರ್ಮದರ್ಶಿ ಹರಿಕೃಷ್ಣ ಪುನರೂರು, ಮೂಡುಬಿದಿರೆ ಉದ್ಯಮಿ ಕೆ. ಶ್ರೀಪತಿ ಭಟ್, ದ.ಕ. ಕಸಾಪ ಅಧ್ಯಕ್ಷ ಪ್ರದೀಪಕುಮಾರ್ ಕಲ್ಕೂರ, ದ.ಕ. ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಕೆ.ಭುವನಾಭಿರಾಮ ಉಡುಪ, ಭಾಸ್ಕರ ರಾವ್ ಕಿದಿಯೂರು, ಶಿರೂರು ಮಠದ ದಿವಾನ ಉದಯಕುಮಾರ್ ಸರಳತ್ತಾಯ, ಕೃಷ್ಣ ಆಚಾರ್ಯ, ಹರಿದಾಸ ಉಪಾಧ್ಯಾಯ ಮೊದಲಾದವರಿದ್ದರು. ವಿದ್ವಾಂಸ ಬನ್ನಂಜೆ ಗೋಪಾಲಕೃಷ್ಣ ಉಪಾಧ್ಯಾಯ ಕಾರ್ಯಕ್ರಮ ನಿರೂಪಿಸಿದರು.