ಕೃಷ್ಣಾಪುರ ಮಠ ಬಾಳೆ ಮುಹೂರ್ತ ಸಂಪನ್ನ

bale muhurtha
Published on

ಉಡುಪಿ: ಉಡುಪಿ ಶ್ರೀಕೃಷ್ಣ ಮಠದ ಮುಂದಿನ ಪರ್ಯಾಯ ಪೀಠ ಏರಲಿರುವ ಕೃಷ್ಣಾಪುರ ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮೀಜಿ ಸೋಮವಾರ ಬಾಳೆ ಮುಹೂರ್ತ ನೆರವೇರಿಸಿದರು.

ರಥಬೀದಿಯೊಳಗಿರುವ ಚಂದ್ರಮೌಳೇಶ್ವರ ಹಾಗೂ ಅನಂತೇಶ್ವರ ದೇವರಿಗೆ ಪೂಜೆ ಸಲ್ಲಿಸಿದ ನಂತರ ಕೃಷ್ಣ ಮಠಕ್ಕೆ ತೆರಳಿ ಶ್ರೀಕೃಷ್ಣ ಮುಖ್ಯಪ್ರಾಣ ದೇವರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಮೆರವಣಿಗೆಯಲ್ಲಿ ತೆರಳಿ ನವಗ್ರಹ ದಾನ ಮಾಡಲಾಯಿತು.

ಬೆಳಗ್ಗೆ 8.32ಕ್ಕೆ ಮಠದಲ್ಲಿ ಬಾಳೆಗಿಡ ನೆಡಲಾಯಿತು. ಶ್ರೀನಿವಾಸ ಉಪಾಧ್ಯಾಯ ಪೌರೋಹಿತ್ಯದಲ್ಲಿ ಧಾರ್ಮಿಕ ವಿಧಿ ನೆರವೇರಿತು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಶ್ರೀಗಳು, ಪರ್ಯಾಯ ಪೂರ್ವದಲ್ಲಿ ಮೊದಲು ಬಾಳೆ ಮುಹೂರ್ತ ನಡೆಯುತ್ತದೆ. ಬಾಳೆ ಮತ್ತು ತುಳಸಿ ದೇವರ ಸಮಾನ. ಭಕ್ತರ ಸಹಕಾರದಲ್ಲಿ ಕೃಷ್ಣನ ಅನುಗ್ರಹದಿಂದ ಎಲ್ಲವೂ ನಡೆಯಲಿ ಎಂದು ಆಶೀರ್ವಚನ ನೀಡಿದರು.

ಸಂಸದೆ ಶೋಭಾ ಕರಂದ್ಲಾಜೆ, ಶಾಸಕ ಕೆ.ರಘುಪತಿ ಭಟ್, ಕರ್ಣಾಟಕ ಬ್ಯಾಂಕ್ ಎಜಿಎಂ ಗೋಪಾಲಕೃಷ್ಣ ಸಾಮಗ, ಮೀನುಗಾರಿಕೆ ಫೆಡರೇಶನ್ ಅಧ್ಯಕ್ಷ ಯಶಪಾಲ್ ಸುವರ್ಣ, ವಕೀಲ ಪ್ರದೀಪ್ ಕುಮಾರ್, ಆದರ್ಶ ಆಸ್ಪತ್ರೆ ವೈದ್ಯಕೀಯ ನಿರ್ದೇಶಕ ಡಾ.ಜಿ.ಎಸ್ ಚಂದ್ರಶೇಖರ್ ಇದ್ದರು. ಗೋಪಾಲಕೃಷ್ಣ ಉಪಾಧ್ಯಾಯ ಪ್ರಸ್ತಾವಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net