ಧರ್ಮ ಸಂಸ್ಥಾಪನೆ ಕೃಷ್ಣಾವತಾರದ ಮೂಲ ಉದ್ದೇಶ

IMG-20240828-WA0013
Published on

ಉಡುಪಿ: ಸಜ್ಜನರ ರಕ್ಷಣೆ, ದುಷ್ಟರಿಗೆ ಶಿಕ್ಷೆ, ಧರ್ಮ ಸಂಸ್ಥಾಪನೆ ಕೃಷ್ಣಾವತಾರದ ಮೂಲ ಉದ್ದೇಶ. ಶ್ರೀಕೃಷ್ಣ ಮನುಷ್ಯ ಎಂಬುದಾಗಿ ತಿಳಿದುಕೊಳ್ಳಬಾರದು. ಹುಟ್ಟಿದ ಮೊದಲ ಹೆಜ್ಜೆಯಿಂದಲೂ ದೇವರು ಎಂಬುದನ್ನು ಸಾಬೀತು ಪಡಿಸಿದ್ದಾನೆ. ಪಡೆದದ್ದನ್ನು ವಾಪಾಸು ಕೊಡವುದು ಧರ್ಮದ ಮೂಲ ತತ್ವ. ಉಪಕಾರ ಸ್ಮರಣೆ ಜಗತ್ತಿನ ಆಧಾರ ಸ್ತಂಭ. ಹೀಗಾಗಿ ಸಜ್ಜನರ ಉದ್ಧಾರಕ್ಕೆ ಅವತಾರವೆತ್ತಿದ ಕೃಷ್ಣನಿಗೆ ಭಕ್ತಿ ಶ್ರದ್ಧೆಯ ಮೂಲಕ ಕೃತಜ್ಞತೆ ಸಲ್ಲಿಸಬೇಕು ಎಂದು ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಹೇಳಿದರು.


ರಾಜಾಂಗಣದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ವಿವಿಧ ಸ್ಪರ್ಧೆಗಳ ಬಹುಮಾನ ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.


ಶ್ರೀಕೃಷ್ಣ ಗೀತೆಯ ಕೊನೆಯಲ್ಲಿ ಹೇಳುವುದನ್ನು ಹೇಳಿದ್ದೇನೆ ಇನ್ನು ನಿನ್ನ ವಿವೇಚನೆ ಪ್ರಕಾರ ನಡೆದುಕೊಳ್ಳು ಎಂಬುದಾಗಿ ಅರ್ಜುನನಿಗೆ ಹೇಳುತ್ತಾನೆ. ಇಂಥ ವಿಶಾಲ ದೃಷ್ಟಿಕೋನ ಭಗವದ್ಗೀತೆ ಬಿಟ್ಟರೆ ಬೇರೆ ಯಾವುದೇ ಧರ್ಮ ಗ್ರಂಥಗಳಲ್ಲಿಲ್ಲ. ಗೀತೆ ವೈಚಾರಿಕ ಸ್ವಾತಂತ್ರ ನೀಡಿದೆ. ವಿಮರ್ಶ ಶಕ್ತಿ ಬೆಳೆಸುವುದು ಕೃಷ್ಣನ ಸಂದೇಶ ಎಂದರು.

ಮಿಲಿಟರಿಯಿಂದ ಭಯೋತ್ಪಾದನೆ ನಿಗ್ರಹ ಅಸಾಧ್ಯ. ಹೀಗಾಗಿ ಸಜ್ಜನರ ಸಂಟನೆ ಆಗಬೇಕು. ಶೇ.99ರಷ್ಟು ಸಜ್ಜನರು ಒಟ್ಟಾಗದೇ ಇರುವುದರಿಂದ ದುರ್ಜನರ ಆಟಾಟೋಪ ನಡೆಯುತ್ತಿದೆ. ಸಜ್ಜನರು ನಿಷ್ಕ್ರಿಯರಾಗಿರುವುದು ಇದಕ್ಕೆಲ್ಲಾ ಕಾರಣ ಎಂದರು.

ಹಿರಿಯ ಸಾಹಿತಿ ಪದ್ಮಭೂಷಣ ಡಾ. ಎಸ್​ ಎಲ್​ ಭೈರಪ್ಪ ಮಾತನಾಡಿ, ಕಥೆ-ಕಾದಂಬರಿಗಳಲ್ಲಿ ಸುತ್ತಮುತ್ತ ಇದ್ದದ್ದನ್ನು ಬರೆಯುತ್ತಾರೆ. ಇದರೊಂದಿಗೆ ಸಾಮಾಜಿಕ ಚಿಂತನೆಯೂ ಅಗತ್ಯ. ಪ್ರತಿ ಕಾದಂಬರಿಯಲ್ಲಿ ಜೀವನದ ಮೌಲ್ಯವನ್ನು ಪರಿಚಯಿಸಬೇಕು. ಅಧ್ಯಾತ್ಮದ ಅಧ್ಯಯನದಿಂದ ಉತ್ತಮ ಪಾತ್ರಗಳನ್ನು ಸೃಷ್ಟಿಸಬಹುದು. ಇದರಿಂದ ಬರವಣಿಗೆಗೆ ತೂಕ ಬರುತ್ತದೆ ಎಂದರು.

ಸ್ವಾತಂತ್ರ ಹೋರಾಟ ಸಂದರ್ಭದಲ್ಲಿ ಮಹಾತ್ಮಾಗಾಂಧಿಯವರು ಅಹಿಂಸೆಯನ್ನು ಪ್ರತಿಪಾದಿಸಿದರು. ಸ್ವಾತಂತ್ರ ಬಂದ ಬಳಿಕ ಪ್ರಥಮ ಪ್ರಧಾನಿ ಅದನ್ನೇ ಮುಂದುವರಿಸಿದರು. ಇದರಿಂದ ಮಿಲಿಟರಿಗೆ ದುಡ್ಡು ಕೊಡುತ್ತಿರಲಿಲ್ಲ. ಪರಿಣಾಮ ಚೀನಾ ನಮ್ಮ ಮೇಲೆ ಆಕ್ರಮಣ ಮಾಡಿತು. ನಾವು ಸೋಲುವಂತಾಯಿತು. ಮಹಾಭಾರತದಲ್ಲಿ ಅರ್ಜುನ ಹೇಳಿದ್ದು ಅಹಿಂಸೆ. ಕೃಷ್ಣ ಅನ್ಯಾಯದ ವಿರುದ್ಧ ಹೋರಾಡುವಂತೆ ಕರೆ ನೀಡಿದ್ದಾನೆ. ಪುರಾಣಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳಬೇಕು. ನಮ್ಮ ಕಾಲಕ್ಕೆ ತಕ್ಕಂತೆ ಅನ್ವಯಿಸಬೇಕು. ಕೃಷ್ಣ ತುಂಬಾ ವಾಸ್ತವವಾದಿ. ಇಡೀ ಭಾರತವನ್ನು ಸಂಚರಿಸಿ ಅಖಂಡ ಭಾರತ ಕಲ್ಪನೆ ಕೊಟ್ಟಿದ್ದಾನೆ ಎಂದರು.

ಸಾಹಿತಿ ಪ್ರಧಾನ ಗುರುದತ್​ ಭೈರಪ್ಪ, ಧರ್ಮಸ್ಥಳದ ಡಾ. ಡಿ. ಹರ್ಷೇಂದ್ರ ಕುಮಾರ್​, ಕುಂಜಿತ್ತಾಯ ವಂಶಸ್ಥರಾದ ಶೋಭಾ ಉಪಾಧ್ಯಾಯ, ಶ್ರೀನಿವಾಸ ಉಪಾಧ್ಯಾಯ, ಗುಜರಾತ್​ ಹಿರಿಯ ಪೊಲೀಸ್​ ಅಧಿಕಾರಿ ನರಸಿಂಹ ಕೋಮಲ್​, ದೆಹಲಿ ಉದ್ಯಮಿ ಅಮಿತ್​ ಕುಮಾರ್​, ಉದ್ಯಮಿ ಶರಣ್​ ಶೆಟ್ಟಿ ಉಪಸ್ಥಿತರಿದ್ದರು. ಗೋಪಾಲಾಚಾರ್ಯ ಕಾರ್ಯಕ್ರಮ ನಿರೂಪಿಸಿದರು. ಸಭೆಯಲ್ಲಿ ಕೃಷ್ಣ ಮಾಸೋತ್ಸವ ಅಂಗವಾಗಿ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.


ಬಹುಮಾನ ವಿಜೇತರು
ಬೆಣ್ಣೆ ಕೃಷ್ಣ ಸ್ಪರ್ಧೆ: ರುದ್ರಾಂಶ್​ ಪೈ (ಪ್ರ), ಶಿತ್​ ಶೆಟ್ಟಿ (ದ್ವಿ), ನಿಯಾನ್​ ಆರ್​. ಶೆಟ್ಟಿ (ತೃ), ಮುದ್ದುಕೃಷ್ಣ ಸ್ಪರ್ಧೆ: ಅಭಿಜ್ಞಾನ (ಪ್ರ) , ವಿಧಾತ್ರಿ (ದ್ವಿ), ಸಿಂಚನ ರಾವ್​(ತೃ), ಬಾಲಕೃಷ್ಣ ಸ್ಪರ್ಧೆ: ಧಿಯಾಂಶಿ (ಪ್ರ) , ಧೃತಿ ಆಚಾರ್ಯ (ದ್ವಿ), ಕಾರುಣ್ಯ ಇಂದ್ರಾಳಿ (ತೃ), ಕಿಶೋರಕೃಷ್ಣ ಸ್ಪರ್ಧೆ: ಆರಾಧ್ಯ ಭಟ್​ (ಪ್ರ), ಅನ್ವಿ ನಾಯಕ್​ (ದ್ವಿ), ಶಿವನ್ಯಾ (ತೃ)
ಹುಲಿವೇಷ ಸ್ಪರ್ಧೆ: ಇಷ್ಟಮಹಾಲಿಂಗೇಶ್ವರ ಬಳಗ ಬೈಲೂರು (ಪ್ರ), ವಿಷ್ಣುಸೇವಾ ಬಳಗ ಅಲೆವೂರು (ದ್ವಿ) , ಕಪ್ಪೆಟ್ಟು ಪ್ರೆಂಡ್ಸ್​ ಮತ್ತು ಬಳಗ (ತೃ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net