

ಹೇಮನಾಥ್ ಪಡುಬಿದ್ರಿ
ಮೂಲಸೌಕರ್ಯಗಳಿಲ್ಲದೆ ಮನೆ ಶಿಥಿಲವಾಗಿದ್ದರೂ ಸ್ಥಳಾಂತರಕ್ಕೊಪ್ಪದೆ ಹುಟ್ಟಿ ಬೆಳೆದ ಮಣ್ಣಲ್ಲಿಯೇ ಸಾಯುವೆನೆಂದು ಹಠ ಸಾಧಿಸಿ ಬದುಕು ಸಾಗಿಸುತ್ತಿದ್ದ 82 ವರ್ಷದ ನಂದಿಕೂರಿನ ಕೃಷ್ಣಯ್ಯ ಆಚಾರ್ಯರು ಕಾಪು ತಹಸೀಲ್ದಾರ್ ಪ್ರತಿಭಾರವರ ಮನವೊಲಿಕೆಗೆ ಮಣಿದು ಕೊನೆಗೂ ವೃದ್ಧಾಶ್ರಮ ಸೇರುವಂತಾಗಿದೆ.
ಖಾಸಗಿ ಭೂ ಒಡೆತನದ ಒಂದು ಸೆಂಟ್ಸ್ ಜಮೀನಿನ ಶಿಥಿಲ ಮನೆಯಲ್ಲಿ ಕೆಲ ವರ್ಷಗಳಿಂದ ಒಂಟಿ ಬದುಕು ಸಾಗಿಸುತ್ತಿದ್ದ ಕೃಷ್ಣಯ್ಯರಿಗೆ ಮದುವೆಯಿಲ್ಲ. ಹೆಂಡತಿ, ಮಕ್ಕಳು ಯಾರೂ ಇಲ್ಲ. ಇದ್ದ ಒಬ್ಬ ತಂಗಿಯೂ ಕೆಲ ವರ್ಷದ ಹಿಂದೆ ತೀರಿ ಹೋಗಿದ್ದರು. ಸರ್ಕಾರದಿಂದ ಬರುತ್ತಿದ್ದ ವೃದ್ಧಾಪ್ಯವೇತನವೇ ಜೀವಿತಕ್ಕೆ ಆಸರೆಯಾಗಿತ್ತು. ಆದರೂ ಊರಿನವರು ಮಾಡುತ್ತಿದ್ದ ಅಷ್ಟು, ಇಷ್ಟು ಸಹಾಯ ಹಾಗೂ ಗ್ರಾಪಂ ಜನಪ್ರತಿನಿಧಿಗಳು ಕೆಲವೊಮ್ಮೆ ನೀಡುವ ನೆರವು ಬದುಕು ಸಾಗಿಸಲು ದಾರಿಯಾಗಿತ್ತು.
ಬಿಡದ ಮನೆ ಮಣ್ಣಿನ ನಂಟು: ಖಾಸಗಿ ಭೂಮಾಲೀಕರಿಗೆ ಸೇರಿದ ಒಂದು ಸೆಂಟ್ಸ್ನಲ್ಲಿ ಹಿರಿಯರು ಕಟ್ಟಿದ್ದ ಮಣ್ಣಿನ ಗೋಡೆಯ ಮನೆಯಲ್ಲಿಯೇ ಹುಟ್ಟಿ ಬೆಳೆದ ಕೃಷ್ಣಯ್ಯರಿಗೆ ಶಿಥಿಲವಾದರೂ ಮನೆ ಬಿಟ್ಟು ಬರಲಾಗದಷ್ಟು ಮಣ್ಣಿನ ನಂಟು ಹೊಂದಿದ್ದರು. ಸ್ಥಳೀಯರು ಹಾಗೂ ಗ್ರಾಮಾಡಳಿತ ಭೂಮಾಲೀಕರಲ್ಲಿ ಸೂರು ಕಲ್ಪಿಸಲು ಪ್ರಯತ್ನ ಮಾಡಿದ್ದರು. ಅದಕ್ಕೊಪ್ಪದ ಅವರು ಗೋಡೆ ಕುಸಿದ ಮುರುಕಲು ಮನೆಯಲ್ಲಿ ಗಾಳಿ ಮಳೆ, ಬಿಸಿಲ ಹೊಡೆತದ ನಡುವೆಯೂ ಬದುಕು ಸಾಗಿಸಿಕೊಂಡು ಬರುತ್ತಿದ್ದರು.
ಅಧಿಕಾರಿಗಳಿಂದ ಮನವೊಲಿಕೆ: ಕೃಷ್ಣಯ್ಯರನ್ನು ಸ್ಥಳಾಂತರಿಸಲು ಮನವೊಲಿಸುವಲ್ಲಿ ಪಲಿಮಾರು ಗ್ರಾಮಾಡಳಿತ ಸೇರಿ ಸ್ಥಳೀಯರು ಹಲವು ವರ್ಷಗಳಿಂದ ಪ್ರಯತ್ನ ನಡೆಸಿದ್ದರು. ಕುಸಿಯುವ ಭೀತಿಯಲ್ಲಿರುವ ಮನೆಯಲ್ಲಿ ಬದುಕುತ್ತಿರುವ ಅವರ ಬಗ್ಗೆ ಮಾಹಿತಿ ಪಡೆದ ತಹಸೀಲ್ದಾರ್ ಪ್ರತಿಭಾ, ಮನೆಗೆ ತೆರಳಿ ಮನವೊಲಿಸಲು ಸಾಕಷ್ಟು ಪ್ರಯತ್ನಿಸಿದರು. ಅಜ್ಜಾ, ಮನೆ ತುಂಬಾ ಶಿಥಿಲವಾಗಿದೆ, ಮಣ್ಣಿನ ಗೋಡೆ ಈ ಮಳೆಗೆ ಬಿದ್ದು ಹೋಗುತ್ತೆ, ನಿಮ್ ಮೈ ಮೇಲೆ ಬಿದ್ದು ನಿಮಗೆ ಪೆಟ್ಟಾಗುತ್ತೆ, ಪ್ರಾಣ ಹಾನಿಯೂ ಆಗಬಹುದು, ಆದ್ದರಿಂದ ಇಲ್ಲಿಂದ ಹೊರಡಿ ಎಂದು ಪರಿಪರಿಯಾಗಿ ಬೇಡಿದರೂ ಕೃಷ್ಣಯ್ಯನವರು ಮನಸ್ಸು ಮಾಡಲಿಲ್ಲ. ಗ್ರಾಪಂ ಅಧ್ಯಕ್ಷೆ ಸೌಮ್ಯಲತಾ ಶೆಟ್ಟಿ, ಸದಸ್ಯ ಸತೀಶ್ ದೇವಾಡಿಗ, ಗ್ರಾಮಸ್ಥರಾದ ಸುರೇಶ್, ಸತೀಶ್, ಕಂದಾಯ ನಿರೀಕ್ಷಕ ಇಜ್ಜಾರ್ ಸಾಬಿರ್, ಗ್ರಾಮ ಆಡಳಿತಾಧಿಕಾರಿ ಸುನೀಲ್ ಹಾಗೂ ಪೊಲೀಸ್ ಸಹಕಾರದಿಂದ ಅವರನ್ನು ಮನೆಯಿಂದ ಕರೆತಂದು ಉದ್ಯಾವರದ ವೃದ್ಧಾಶ್ರಮಕ್ಕೆ ಸೇರಿಸುಲ್ಲಿ ಯಶಸ್ವಿಯಾದರು.
ಹಿರಿಯರ ಕಾಲದಿಂದಲೂ ಇಲ್ಲಿಯೇ ವಾಸವಾಗಿದ್ದ ಅವರ ಮನೆ ಜಮೀನು ಖಾಸಗಿ ಭೂ ಒಡೆತನಕ್ಕೆ ಸೇರಿತ್ತು. ಅವರಿಗೆ ಆಸರೆ ಒದಗಿಸುವ ಪ್ರಯತ್ನ ನಡೆದಿತ್ತಾದರೂ ಅದಕ್ಕೊಪ್ಪಿರಲಿಲ್ಲ. ಪ್ರತಿ ಮಳೆಗಾಲದಲ್ಲಿಯೂ ಕಾಡಿ ಬೇಡಿ ಟಾರ್ಪಾಲು ಪಡೆದುಕೊಂಡು ಬರುತ್ತಿದ್ದ ಅವರ ಮನೆಗೆ ಯಾವುದೇ ಮೂಲಸೌಕರ್ಯಗಳಿಲ್ಲ. ಜನಪ್ರತಿನಿಧಿಗಳ ಪ್ರಯತ್ನದಿಂದ ಪಡಿತರ ಚೀಟಿ ಬಿಟ್ಟರೆ ಬೇರಾವುದೇ ಸೌಲಭ್ಯ ಕಲ್ಪಿಸಲು ಸಾಧ್ಯವೂ ಆಗಿಲ್ಲ. -ಸತೀಶ್ ದೇವಾಡಿಗ, ನಂದಿಕೂರು ಸದಸ್ಯರು ಪಲಿಮಾರು ಗ್ರಾಪಂ
-ಸತೀಶ್ ದೇವಾಡಿಗ, ನಂದಿಕೂರು ಸದಸ್ಯರು ಪಲಿಮಾರು ಗ್ರಾಪಂ
ಅವರು ವಾಸಿಸುತ್ತಾ ಇದ್ದ ಆ ಮಣ್ಣಿನ ಮನೆ ಬಹಳ ಶಿಥಿಲವಾಗಿತ್ತು. ಒಂದು ಭಾಗದ ಮಣ್ಣಿನ ಗೋಡೆ ಭಾಗಶಃ ಹಾನಿಗೊಳಗಾಗಿತ್ತು. ಮಣ್ಣಿನ ಗೋಡೆಗಳ ಆ ಮನೆ ಈ ರಣಮಳೆಗೆ ಖಂಡಿತ ಬೀಳುತ್ತೆ ಅನ್ನುವಂತಿತ್ತು. ಕೃಷ್ಣಯ್ಯರಿಗೆ ಮನೆ ಬಗ್ಗೆ ಇದ್ದ ಸೆಂಟಿಮೆಂಟ್. ಎಷ್ಟೇ ಹಳೆಯದಾದರೂ ಬೀಳುವಂತಿದ್ದರೂ ಅದನ್ನು ಬಿಟ್ಟು ಬೇರೆ ಕಡೆಗೆ ಹೋಗಲು ಮನಸ್ಸು ಒಪ್ತಿರಲಿಲ್ಲ. ಮಳೆ ನಡುವೆ ಸಮಸ್ಯೆ ಗಂಭೀರತೆ ಮನಗಂಡು ಖುದ್ದಾಗಿ ಮನೆಗೆ ತೆರಳಿ ಅವರನ್ನು ಮನವೊಲಿಸಿ ಸ್ಥಳಾಂತರಸಿ ವೃದ್ಧಾಶ್ರಮ ಸೇರಿಸಿ ಬದುಕಿನ ಇಳಿಸಂಜೆಯ ದಿನಗಳನ್ನು ಸಹ್ಯಗೊಳಿಸಿದ ಧನ್ಯತಾ ಭಾವ ನಮಗಾಗಿದೆ. -ಪ್ರತಿಭಾ ಆರ್. ತಹಸೀಲ್ದಾರ್ ಕಾಪು ತಾಲೂಕು
-ಪ್ರತಿಭಾ ಆರ್. ತಹಸೀಲ್ದಾರ್ ಕಾಪು ತಾಲೂಕು