

ಕೊಪ್ಪಳ: ಅಕಾಲಿಕ ಮಳೆಯಿಂದ ಈ ವರ್ಷ ಮಾವು ಬೆಳೆ 45 ರಿಂದ 60 ದಿನಗಳ ವಿಳಂಬದ ನಂತರ ಹೂ ಕಟ್ಟಿದೆ. ಇದರಿಂದ ಇಳುವರಿ ಮೇಲೆ ದುಷ್ಪರಿಣಾಮ ಆಗಲಿದ್ದು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಲು ತೋಟಗಾರಿಕೆ ಉಪನಿರ್ದೇಶಕ ಕೃಷ್ಣ ಉಕ್ಕುಂದ ತಿಳಿಸಿದ್ದಾರೆ.
ಶುಷ್ಕ ವಾತಾವರಣ ಹಾಗೂ ಹೆಚ್ಚಿನ ತಾಪಮಾನದಿಂದ ಕೀಟ, ರೋಗಗಳ ಬಾಧೆ ಹೆಚ್ಚಾಗುತ್ತಿದೆ. ಹೀಚು, ಕಾಯಿ ಉದುರುತ್ತಿವೆ. ಜಿಗಿ ಹುಳುವಿನ ಬಾಧೆ ಜತೆಗೆ ಅಂಗಮಾರಿ ರೋಗ ಕಾಣಿಸಿಕೊಂಡಿದ್ದು, ಹತೋಟಿಗಾಗಿ ಲ್ಯಾಂಬ್ಡಾ ಸಿಮಾಲೋಥ್ರೀನ್ ಶೇ.5.1 ಮೀ. ಅಥವಾ ಬೇವಿನ ಕಷಾಯವನ್ನು 2 ಮಿ.ಲೀ. ಅಥವಾ ಅಸಿಫೇಟ್ 75 ಎಸ್.ಪಿ 2 ಗ್ರಾಂ. ಅಲ್ಲದೇ ಬಿಪ್ರೊಫೆಜಿನ್-25 ಎಸ್.ಸಿ. 1 ಮಿ.ಲೀ. ಜತೆಗೆ ಶಿಲೀಂಧ್ರನಾಶಕಗಳಾದ ಥಯೋಫಿನೈಟ್ ಮಿಥೈಲ್ 1 ಗ್ರಾಂ ಅಥವಾ ಟಿಬುಕೋನಾಜೋಲ್ 1ಮಿ.ಲೀ., 1 ಲೀ ನೀರಿಗೆ ಬೆರೆಸಿ ಸಿಂಪಡಿಸಬೇಕು. ಬುಡದಿಂದ 2.5 ರಿಂದ 3 ಅಡಿ ವರೆಗೂ ಸಿಒಸಿ+ ಕ್ಲೋರೋ ಬೆರೆಸಿದ ದ್ರಾವಣ ಲೇಪಿಸಬೇಕು.
ಹನಿ ನೀರಾವರಿ ಮೂಲಕ ನೀರು ಕೊಡಬೇಕು. ಸಾಧ್ಯವಾದಲ್ಲಿ ಮಡಿ ಮಾಡಿ ಒಣಹುಲ್ಲು ಕಸಕಡ್ಡಿ ಹೊದಿಕೆ ಮಾಡಿ. ಹೊಲವನ್ನು ಕಸಮುಕ್ತವಾಗಿಡಬೇಕು ಎಂದು ತಿಳಿಸಿದ್ದಾರೆ. ಸಾವಯವ ಪದ್ಧತಿಯಲ್ಲಿ ಬೇಸಾಯ ಮಾಡುವವರು ಕೀಟ/ರೋಗಗಳ ಬಾಧೆಗೆ ಅಂಟು ಕಾರ್ಡ್‌ಗಳ ಬಳಕೆ ಅಲ್ಲದೇ ಮೋಹಕ ಬಲೆಗಳನ್ನು ಅಳವಡಿಸಬೇಕು. ಗೋಕೃಪಾಮೃತ ಮತ್ತು ಜೀವಾಮೃತದ ಜತೆಗೆ ನಿಡಶೇಸಿ ತೋಟಗಾರಿಕೆ ಕ್ಷೇತ್ರದಲ್ಲಿ ದೊರೆಯುವ ಎರೆಜಲವನ್ನು ತಜ್ಞರ ಸಲಹೆಯಂತೆ ಬಳಸಬೇಕು. ಒಣಗಿದ, ರೋಗಗ್ರಸ್ಥ ರೆಂಬೆ ಕೊಂಬೆಗಳನ್ನು ತೆಗೆದು ಹಾಕಿ ನೀರಿನಲ್ಲಿ ಕರಗುವ ಗೊಬ್ಬರಗಳನ್ನು ನಿಯಮಿತವಾಗಿ ಸಿಂಪಡಿಸಬೇಕು.
ಹೆಚ್ಚಿನ ಮಾಹಿತಿಗಾಗಿ ತೋಟಗಾರಿಕೆ ಉಪನಿರ್ದೇಶಕರ ಕಚೇರಿ ಕೊಪ್ಪಳ ದೂ.ಸಂ: 08539-230530, ವಿಷಯ ತಜ್ಞರು, ಹಾರ್ಟಿಕ್ಲಿನಿಕ್ ಕೊಪ್ಪಳ ಮೊ.ಸಂ: 9482672039 ಮತ್ತು ಆಯಾ ತಾಲೂಕು ಕಚೇರಿಗಳನ್ನು ಸಂಪರ್ಕಿಸುವಂತೆ ತಿಳಿಸಿದ್ದಾರೆ.