೧೦ರಂದು ಕೃಷ್ಣಾ ಶುಗರ್ಸ್ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ

2ATHANI1
Published on

ಅಥಣಿ: ಕೃಷ್ಣಾ ಸಹಕಾರ ಸಕ್ಕರೆ ಕಾರ್ಖಾನೆ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ನ.೧೦ರಂದು ನಡೆಯಲಿದೆ. ಕಾರ್ಖಾನೆಗೆ ೧೫ ಜನರ ಸಲಹಾ ಸಮಿತಿ ರಚನೆಯಾಗಲಿದೆ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.

ಸ್ಥಳೀಯ ಕೃಷ್ಣಾ ಸಹಕಾರ ಸಕ್ಕರೆ ಕಾರ್ಖಾನೆಯ ಪ್ರಸಕ್ತ ಸಾಲಿನ ಕಬ್ಬು ನುರಿಸುವ ಹಂಗಾಮಿಗೆ ಭಾನುವಾರ ಚಾಲನೆ ನೀಡಿ ಮಾತನಾಡಿದರು. ಪ್ರಸಕ್ತ ವರ್ಷದ ಕಬ್ಬು ನುರಿಸುವ ಹಂಗಾಮಿನಲ್ಲಿ ಸುಮಾರು ೮ಲಕ್ಷ ಟನ್ ಕಬ್ಬು ನುರಿಸುವ ಗುರಿ ಹೊಂದಿದ್ದು, ರೈತರು ಹೆಚ್ಚಿನ ಗುಣಮಟ್ಟದ ಕಬ್ಬು ಕಾರ್ಖಾನೆಗೆ ಕಳುಹಿಸಿದರೆ ಎಲ್ಲ ಕಾರ್ಖಾನಗಳಿಗಿಂತ ಹೆಚ್ಚಿನ ದರ ನೀಡಲು ಸಹಕಾರಿಯಾಗುತ್ತದೆ. ರೈತರ ಮನವೊಲಿಸಿ ಕಾರ್ಖಾನೆಯ ಪ್ರತಿ ನಿರ್ದೇಶಕರು ೫೦ ಸಾವಿರ ಟನ್ ಕಬ್ಬು ಕಾರ್ಖಾನೆಗೆ ತರಿಸಬೇಕು ಎಂದರು.

ಕಾರ್ಖಾನೆ ಸುತ್ತಮುತ್ತಲಿನ ೨೦ ಕಿ.ಮೀ. ಅಂತರದ ಎಲ್ಲ ಕಬ್ಬು ಬಂದರೆ ಹಲವು ಖರ್ಚುಗಳು ಉಳಿಯಲಿವೆ. ಸರ್ಕಾರ ದಕ್ಷಿಣ ಭಾಗದ ಗೇಟ್‌ಕೇನ್ ಸೌಲಭ್ಯವನ್ನು ನಮಗೂ ನೀಡಬೇಕಿದ್ದು, ಮುಖ್ಯಮಂತ್ರಿಯೊಂದಿಗೆ ಚರ್ಚಿಸುವೆ. ಕಬ್ಬಿನ ದರ ಕುರಿತು ಇನ್ನೆರಡು ದಿನಗಳಲ್ಲಿ ಚರ್ಚಿಸಿ ಸೂಕ್ತ ನಿರ್ಣಯ ಕೈಗೊಳ್ಳಲಾಗುವುದು. ಖಾಸಗಿ ಕಾರ್ಖಾನೆಗಳಲ್ಲಿ ತೂಕದಲ್ಲಾಗುವ ಮೋಸದ ಕುರಿತು ಸಿಎಂ ಸಮ್ಮುಖದಲ್ಲಿ ಸಭೆ ನಡೆಸಲಾಗುವುದು. ಸಹಕಾರ ರಂಗದ ಕೃಷ್ಣಾ ಸಹಕಾರ ಸಕ್ಕರೆ ಕಾರ್ಖಾನೆ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದ್ದು, ಮಾದರಿ ಸಕ್ಕರೆ ಕಾರ್ಖಾನೆಯನ್ನಾಗಿಸೋಣ ಎಂದರು.

ಈಚೆಗೆ ರಾಜ್ಯಾದ್ಯಂತ ಸದ್ದು ಮಾಡಿದ ಡಿಸಿಸಿ ಬ್ಯಾಂಕ್ ಚುನಾವಣೆ ಪರಿಣಾಮವಾಗಿ ಠೇವಣಿ ಇಟ್ಟಿರುವರು ಸುಮಾರು ೯೭೦ ಕೋಟಿ ರೂ. ಠೇವಣಿ ಹಿಂಪಡೆದಿದ್ದು, ಜನರಲ್ಲಿ ಸಹಕಾರ ರಂಗದ ಬ್ಯಾಂಕುಗಳ ಮೇಲಿನ ವಿಶ್ವಾಸ ಕಡಿಮೆಯಾಗುತ್ತಿದೆ ಎಂದರು.

ಕಾರ್ಖಾನೆ ನಿರ್ದೇಶಕ ಪರಪ್ಪ ಸವದಿ ಮಾತನಾಡಿ, ಚುನಾವಣೆಯಲ್ಲಿ ಆಯ್ಕೆ ಮಾಡಿ ರೈತರು ನನಗೆ ಸೇವೆ ಮಾಡುವ ಅವಕಾಶ ನೀಡಿದ್ದು, ಅವರ ನಿರೀಕ್ಷೆ ಮುಟ್ಟುವ ಜತೆಗೆ ಕಾರ್ಖಾನೆಗೆ ಪ್ರಗತಿಗೆ ಶ್ರಮಿಸಲಾಗುವುದು ಎಂದರು.

ಸಾನ್ನಿಧ್ಯವಹಿಸಿದ್ದ ಇಂಚಲದ ಡಾ.ಶಿವಾನಂದ ಭಾರತಿ ಸ್ವಾಮೀಜಿ ಮಾತನಾಡಿ, ಕೃಷ್ಣಾ ಕಾರ್ಖಾನೆ ಮತ್ತೆ ಪ್ರಗತಿಪಥದಲ್ಲಿ ಸಾಗಿ ರೈತರಿಗೆ ಅನುಕೂಲ ಮಾಡಿಕೊಡಲಿ ಎಂದು ಆಶಿಸಿದರು.

ಮುಖಂಡರಾದ ರಾಜು ನಾಡಗೌಡ, ಸುರೇಶ ಮಾಯನ್ನವರ, ಶಾಮರಾವ ಪೂಜಾರಿ, ಅನಂತ ಬಸರಿಕೋಡಿ ಮಾತನಾಡಿದರು.

ಮುಖಂಡರಾದ ಶ್ರೀಶೈಲ ನಾರಗೊಂಡ, ಎ.ಸಿ.ಪಾಟೀಲ, ಶೇಖರ ನೇಮಗೌಡ, ಶಿವು ಗುಡ್ಡಾಪೂರ, ವ್ಯವಸ್ಥಾಪಕ ನಿರ್ದೇಶಕ ಜಿ.ಎಂ.ಪಾಟೀಲ, ಎಲ್ಲ ನಿರ್ದೇಶಕರು, ರೈತರು, ಸಿಬ್ಬಂದಿ, ಕಾರ್ಮಿಕರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net