ಕೃಷ್ಣಾ ನದಿಗೆ 2.18 ಲಕ್ಷ ಕ್ಯೂಸೆಕ್ ನೀರು, ನಡುಗಡ್ಡೆ ಹಳ್ಳಿಗಳ ಸಂಪರ್ಕ ಕಡಿತ

11082022 lng1
Published on

ಲಿಂಗಸುಗೂರು: ನಾರಾಯಣಪುರದ ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ 25 ಕ್ರಸ್ಟ್ ಗೇಟುಗಳ ಮೂಲಕ ಗುರುವಾರ 2.18 ಲಕ್ಷ ಕ್ಯೂಸೆಕ್ ನೀರು ಬಿಡಲಾಗಿದೆ. ನದಿಯಲ್ಲಿ ಪ್ರವಾಹ ಉಂಟಾಗಿ ನಡುಗಡ್ಡೆ ಹಳ್ಳಿಗಳನ್ನು ಸಂಪರ್ಕಿಸುವ ಶೀಲಹಳ್ಳಿ ಸೇತುವೆ ಮುಳುಗಡೆಯಾಗಿ ಸಂಪರ್ಕ ಕಡಿತಗೊಂಡಿದೆ.
ಆಲಮಟ್ಟಿ ಅಣೆಕಟ್ಟೆಯಿಂದ ಬಸವಸಾಗರ ಜಲಾಶಯಕ್ಕೆ 2.15 ಲಕ್ಷ ಕ್ಯೂಸೆಕ್ ನೀರು ಹರಿದುಬರುತ್ತಿದ್ದು, 2,12,000 ಕ್ಯೂಸೆಕ್ ಮತ್ತು ಮುರುಡೇಶ್ವರ ವಿದ್ಯುತ್ ಉತ್ಪಾದನಾ ಘಟಕದ ಮೂಲಕ 6 ಸಾವಿರ ಕ್ಯೂಸೆಕ್ ನೀರು ಸೇರಿ ಒಟ್ಟು 2,18,200 ಕ್ಯೂಸೆಕ್ ನೀರು ಕೃಷ್ಣಾ ನದಿಗೆ ಹರಿಬಿಡಲಾಗುತ್ತಿದೆ. ಜಲಾಶಯದ ಗರಿಷ್ಠ ನೀರಿನ ಸಾಮರ್ಥ್ಯ 492.252 ಮೀ. (33 ಟಿಎಂಸಿ) ಇದ್ದು, ಗುರುವಾರದ ನೀರಿನ ಮಟ್ಟ 491.22 ಮೀ. (28.738 ಟಿಎಂಸಿ) ತಲುಪಿತ್ತು.
ಜಲಾಶಯದಿಂದ ಕೃಷ್ಣಾ ನದಿಗೆ ನೀರು ಬಿಟ್ಟ ಕಾರಣ ಶೀಲಹಳ್ಳಿ ಸೇತುವೆ ಮೇಲ್ಭಾಗದಲ್ಲಿ ಒಂದು ಅಡಿ ನೀರು ಹರಿಯುತ್ತಿದ್ದು, ತಾಲೂಕಿನ ನದಿ ತೀರದ ಕಡದರಗಡ್ಡಿ, ಯರಗೋಡಿ, ಹಂಚಿನಾಳ ಗ್ರಾಮಗಳ ಜನತೆ ಜಲದುರ್ಗ ಮಾರ್ಗವಾಗಿ ತಾಲೂಕು ಕೇಂದ್ರಕ್ಕೆ 45 ಕಿಮೀ ಸುತ್ತುವರಿದು ಬರುವ ಅನಿವಾರ್ಯತೆ ಎದುರಾಗಿದೆ. ನಡುಗಡ್ಡೆ ಪ್ರದೇಶದಲ್ಲಿ ವಾಸವಿರುವ ಮ್ಯಾದರಗಡ್ಡಿ, ಕರಕಲಗಡ್ಡಿ, ವೆಂಕಮ್ಮನಗಡ್ಡಿ ನಿವಾಸಿಗಳು ಬಾಹ್ಯ ಸಂಪರ್ಕ ಕಳೆದುಕೊಂಡಿದ್ದಾರೆ.
ತಾಲೂಕಿನ ಶೀಲಹಳ್ಳಿ ಸೇತುವೆ ಮುಳುಗಡೆಯಿಂದಾಗಿ ಶೀಲಹಳ್ಳಿ ಮತ್ತು ಯರಗೋಡಿ ಸೇತುವೆಗಳ ಎರಡೂ ಬದಿ ಪೊಲೀಸರು ನಿಗಾ ವಹಿಸಿದ್ದಾರೆ. ತಹಸೀಲ್ದಾರ್ ಬಲರಾಮ್ ಕಟ್ಟಿಮನಿ ನದಿ ತೀರದ ಗ್ರಾಮ ಮತ್ತು ಶೀಲಹಳ್ಳಿ ಸೇತುವೆಗೆ ಭೇಟಿ ನೀಡಿ ಪ್ರವಾಹ ಪರಿಸ್ಥಿತಿ ಪರಿಶೀಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net