ಕೃಷ್ಣಾ ನದಿಗೆ ಹರಿದು ಬಂತು 45 ಸಾವಿರ ಕ್ಯೂಸೆಕ್ ನೀರು

Krishna River Huvinahedagi Temple
ಕೃಷ್ಣಾ ನದಿಗೆ 45ಸಾವಿರ ಕ್ಯೂಸೆಕ್ ನೀರು ಹರಿಬಿಟ್ಟಿದ್ದರಿಂದ ಹೂವಿನಹೆಡಗಿ ಶ್ರೀ ಗಡ್ಡೆಗೂಳಿ ಬಸವೇಶ್ವರ ದೇವಸ್ಥಾನ ಸುತ್ತ ನೀರು ಆವರಿಸಿರುವುದು.
Published on

ದೇವದುರ್ಗ: ಕೃಷ್ಣಾ ನದಿ ಮೇಲ್ಭಾಗದಲ್ಲಿ ಹೆಚ್ಚು ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೃಷ್ಣಾ ನದಿಗೆ ಗುರುವಾರ ಸಂಜೆಯಿಂದ 45 ಸಾವಿರ ಕ್ಯೂಸೆಕ್ ನೀರು ಹರಿಬಿಡಲಾಗಿದೆ.

ಎರಡ್ಮೂರು ದಿನಗಳಿಂದ ಉತ್ತಮ ಮಳೆ ಸುರಿಯುತ್ತಿದೆ. ಹೀಗಾಗಿ ನಾರಾಯಣಪುರ ಜಲಾಶಯಕ್ಕೆ ಹೆಚ್ಚಿನ ಒಳಹರಿವಿದೆ. ಜತೆಗೆ ಮಹಾರಾಷ್ಟ್ರದಲ್ಲಿ ಉತ್ತಮ ಮಳೆಯಾಗುತ್ತಿರುವ ಕಾರಣ ಆಲಮಟ್ಟಿ ಜಲಾಶಯದಿಂದ ಕೃಷ್ಣಾ ನದಿಗೆ ಹೆಚ್ಚುವರಿ ನೀರು ಹರಿಸಲಾಗುತ್ತಿದೆ. ಹೀಗಾಗಿ ಮುಂಜಾಗ್ರತೆ ಕ್ರಮವಾಗಿ ಕೃಷ್ಣಾ ನದಿಗೆ ಹೆಚ್ಚಿನ ನೀರು ಹರಿ ಬಿಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೂರು ತಿಂಗಳ ಕಾಲ ನೀರಿಲ್ಲದೆ ಬಣಗುಡುತ್ತಿದ್ದ ಕೃಷ್ಣಾ ನದಿ ಸದ್ಯ ನಿಧಾನವಾಗಿ ಮೈದುಂಬಿ ಹರಿಯುತ್ತಿದೆ. ಹೆಚ್ಚುವರಿ ನೀರು ಹರಿಸಿದ್ದರಿಂದ ಹೂವಿನಹೆಡಗಿ ಶ್ರೀಗಡ್ಡೆಗೂಳಿ ಬಸವೇಶ್ವರ ದೇವಸ್ಥಾನ ಸುತ್ತ ನೀರು ಆವರಿಸಿವೆ. ವೀರಗೋಟ ಶ್ರೀಆದಿಲಿಂಗೇಶ್ವರ ದೇವಸ್ಥಾನ, ಕೊಪ್ಪರದ ಶ್ರೀಲಕ್ಷ್ಮೀ ನರಸಿಂಹ ದೇವಸ್ಥಾನ ಹಾಗೂ ಗೂಗಲ್‌ನ ಶ್ರೀ ಅಲ್ಲಮಪ್ರಭು ದೇವಸ್ಥಾನ ಸಮೀಪ ನೀರು ಬಂದಿವೆ.

ಮೋಡ: ತಾಲೂಕಿನಲ್ಲಿ ಎರಡು ದಿನಗಳಿಂದ ಮೋಡ ಮುಸುಕಿದ ವಾತಾವರಣವಿದ್ದು, ಆಗಾಗ ತುಂತುರು ಮಳೆ ಬೀಳುತ್ತಿದೆ. ಪಟ್ಟಣ, ಹೂವಿನಹೆಡಗಿ, ಜೋಳದಹೆಡಗಿ ಸೇರಿ ನದಿದಂಡೆ ಗ್ರಾಮಗಳಲ್ಲಿ ಮಳೆ ಬಿದ್ದಿದೆ. ಆದರೂ, ತಾಲೂಕಾದ್ಯಂತ ಸಮರ್ಪಕವಾಗಿ ಮಳೆ ಕರುಣೆ ತೋರಿಲ್ಲ. ಉತ್ತಮವಾಗಿ ಮಳೆ ಸುರಿದರೆ, ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net