

ಚಿಕ್ಕೋಡಿ: ಮಹಾರಾಷ್ಟ್ರದ ಸಹ್ಯಾದ್ರಿ ಘಟ್ಟಪ್ರದೇಶದಲ್ಲಿ ಹಾಗೂ ಚಿಕ್ಕೋಡಿ ಉಪವಿಭಾಗದ ನದಿ ತೀರದಲ್ಲಿ ಮಳೆಯ ಅಬ್ಬರ ತಗ್ಗಿದೆ. ಆದರೆ ವಿವಿಧ ಜಲಾಶಯಗಳಿಂದ ಹರಿದು ಬರುತ್ತಿರುವ ಗಡಿ ಭಾಗದ ಕೃಷ್ಣಾ ದೂಧಗಂಗಾ, ವೇದಗಂಗಾ ಮತ್ತು ಪಂಚಗಂಗಾ ನದಿಗಳು ಉಕ್ಕಿ ಹರಿಯುತ್ತಿವೆ.
ಕೃಷ್ಣಾ ಹಾಗೂ ಉಪನದಿಗಳಿಂದ ಚಿಕ್ಕೋಡಿ ತಾಲೂಕಿನ ಕಲ್ಲೋಳ ಹತ್ತಿರ ಕೃಷ್ಣಾ ನದಿಗೆ 1.93 ಲಕ್ಷ ಕ್ಯೂಸೆಕ್ ನೀರು ಹರಿದು ಬರಲಾರಂಭಿಸಿದೆ. ರಾಜಾಪುರ ಬ್ಯಾರೇಜ್‌ನಿಂದ 1.52 ಲಕ್ಷ ಕ್ಯೂಸೆಕ್, ದೂಧಗಂಗಾ ಹಾಗೂ ವೇದಗಂಗಾ ನದಿಗಳಿಂದ 31 ಸಾವಿರ ಕ್ಯೂಸೆಕ್ ನೀರು ಹರಿದು ಬರಲಾರಂಭಿಸಿದೆ.
ಹಿಪ್ಪರಗಿ ಬ್ಯಾರೇಜ್‌ನ 22 ಗೇಟ್ ತೆರೆಯುವ ಮೂಲಕ 1, 85000 ಕ್ಯೂಸೆಕ್ ಹಾಗೂ ಆಲಮಟ್ಟಿ ಜಲಾಶಯದಿಂದ 2.50 ಲಕ್ಷ ಕ್ಯೂಸೆಕ್ ನೀರು ಹೊರಹರಿಸಲಾಗುತ್ತಿದೆ. ನಿಪ್ಪಾಣಿ, ಚಿಕ್ಕೋಡಿ, ರಾಯಬಾಗ, ಕಾಗವಾಡ ವ್ಯಾಪ್ತಿಯಲ್ಲಿ 8 ಕೆಳಹಂತದ ಸೇತುವೆಗಳು ಜಲಾವೃತವಾಗಿವೆ. ನದಿತೀರದಲ್ಲಿ ಜನ ಜಾನುವಾರು ತೆರಳದಂತೆ ಸೂಚಿಸಲಾಗಿದ್ದು, ಜಿಲ್ಲಾಡಳಿತ ಪ್ರವಾಹ ಸ್ಥಿತಿ ಎದುರಿಸಲು ಸನ್ನದ್ಧವಾಗಿದೆ.
ಗ್ರಾಮೀಣ ಭಾಗದಲ್ಲಿ ನೋಡಲ್ ಅಧಿಕಾರಿಗಳ ನೇಮಕ ಮಾಡಿದ್ದು, ಎನ್‌ಡಿಆರ್‌ಎಫ್ ಸಿಬ್ಬಂದಿ ಮತ್ತು ಬೋಟ್‌ಗಳು ಜನ ಜಾನುವಾರು ರಕ್ಷಣೆಗಾಗಿ ಸಿದ್ಧವಾಗಿವೆ. ನದಿ ತೀರದ ಜನರಿಗೆ ಸುರಕ್ಷಿತ ಸ್ಥಳಕ್ಕೆ ತೆರಳಲು ಸೂಚಿಸಲಾಗಿದ್ದು, ನದಿ ತೀರದ ಗ್ರಾಮಗಳಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.
ಕೃಷ್ಣಾ ಹಾಗೂ ಉಪನದಿಗಳಿಗೆ ನೀರಿನ ಪ್ರಮಾಣ ಹೆಚ್ಚಾಗುತ್ತಿರುವ ಪರಿಣಾಮ ನದಿ ತೀರದ ಗ್ರಾಮಗಳಿಗೆ ಅಧಿಕಾರಿಗಳು ದೌಡಾಯಿಸಿ ಸರ್ಕಾರ ಗುರುತಿಸುವ ಸುರಕ್ಷಿತ ಸ್ಥಳಕ್ಕೆ ಹೋಗುವಂತೆ ಜನರಿಗೆ ಮನವಿ ಮಾಡುತ್ತಿದ್ದಾರೆ. ಕೃಷ್ಣಾ ನದಿಯ ಹರಿವಿನ ಪ್ರಮಾಣ ಸಂಜೆ ವೇಳೆಗೆ 2 ಲಕ್ಷ ಕ್ಯೂಸೆಕ್ ದಾಟಬಹುದು. ಹೀಗಾಗಿ ನದಿ ತೀರದ ತೋಟಪಟ್ಟಿ ಜನರು ಮತ್ತು ತಗ್ಗು ಪ್ರದೇಶದ ಜನರು ಸ್ಥಳಾಂತರವಾಗಬೇಕು ಎಂದು ಚಿಕ್ಕೋಡಿ ಉಪವಿಭಾಗಾಧಿಕಾರಿ ರವೀಂದ್ರ ಕರಲಿಂಗನವರ ಮನವಿ ಮಾಡಿದ್ದಾರೆ.
ಚಿಕ್ಕೋಡಿ ತಾಲೂಕಿನ ಇಂಗಳಿ ಗ್ರಾಮದ ಮಾಳಭಾಗ , ಯಡೂರವಾಡಿ ಗ್ರಾಮದ ಧೋಣಿತೋಟ ಮುಂತಾದ ಪ್ರದೇಶಗಳಿಗೆ ನೀರು ನುಗ್ಗುತ್ತಿದ್ದು, ಅಲ್ಲಿಯ ಜನರನ್ನು ಸ್ಥಳಾಂತರಿಸಲು ತಾಲೂಕಾಡಳಿತ ಸಿದ್ಧತೆ ನಡೆಸಿದೆ. | ಸುಭಾಷ ಸಂಪಗಾವಿ ತಹಸೀಲ್ದಾರ್, ಚಿಕ್ಕೋಡಿ