

ಲಿಂಗಸುಗೂರು: ನಾರಾಯಣಪುರದ ಬಸವಸಾಗರ ಜಲಾಶಯದಿಂದ 30 ಕ್ರಸ್ಟ್‌ಗೇಟ್‌ಗಳ ಮೂಲಕ ಕೃಷ್ಣಾ ನದಿಗೆ 1,85,318 ಕ್ಯೂಸೆಕ್ ನೀರನ್ನು ಗುರುವಾರ ಬಿಡಲಾಗಿದ್ದು, ತಾಲೂಕಿನ ಶೀಲಹಳ್ಳಿ ಬಳಿಯ ಸೇತುವೆ ಮುಳುಗಡೆಯಾಗಿದೆ.
ಆಲಮಟ್ಟಿ ಜಲಾಶಯದಿಂದ 1.85 ಲಕ್ಷ ಕ್ಯೂಸೆಕ್ ನೀರು ಬಸವಸಾಗರ ಜಲಾಶಯಕ್ಕೆ ಹರಿದು ಬರುತ್ತಿದೆ. ಬಸವಸಾಗರ ಜಲಾಶಯದ ನೀರಿನ ಗರಿಷ್ಠ ಸಂಗ್ರಹ ಸಾಮರ್ಥ್ಯ 492.252 ಮೀ. (33.313 ಟಿಎಂಸಿ) ಇದ್ದು, ಗುರುವಾರ ನೀರಿನ ಮಟ್ಟ 491.14 ಮೀ. (28.41 ಟಿಎಂಸಿ) ಇತ್ತು. ಶೀಲಹಳ್ಳಿ ಸೇತುವೆ ಮೇಲೆ ನೀರು ತುಂಬಿ ಹರಿಯುತ್ತಿದ್ದು, ನದಿ ತೀರದ ಕಡದರಗಡ್ಡಿ, ಯರಗೋಡಿ, ಹಂಚಿನಾಳ ಗ್ರಾಮಗಳ ಸಂಕರ್ಪ ಕಡಿತಗೊಂಡಿದೆ. ಈ ಊರಿನ ಜನರು ತಾಲೂಕು ಕೇಂದ್ರಕ್ಕೆ ಜಲದುರ್ಗ ಮಾರ್ಗವಾಗಿ 45 ಕಿಮೀ. ಸುತ್ತುವರೆದು ಬರಬೇಕಿದೆ.