

ಮಂಗಳೂರು : ಜೀವನದಲ್ಲಿ ಎದುರಾಗುವ ಸೋಲು ಹಾಗೂ ಕಷ್ಟಗಳನ್ನು ಸ್ವೀಕರಿಸುವ ಎದೆಗಾರಿಕೆ ನಮ್ಮಲ್ಲಿ ಇದ್ದಾಗ ಯಶಸ್ಸು ಗಳಿಸಲು ಸಾಧ್ಯವಾಗುತ್ತದೆ ಎಂದು ಮಾಜಿ ಸಚಿವ,ಲ್ಯಾಂಡ್ಲಿಂಕ್ಸ್ ಸಂಸ್ಥೆಯ ಸಿಇಒ ಕೃಷ್ಣ ಜೆ. ಪಾಲೆಮಾರ್ ಹೇಳಿದರು.
ಮಂಗಳೂರು ಪ್ರೆಸ್ ಕ್ಲಬ್ ವತಿಯಿಂದ ಬುಧವಾರ ನಗರದ ಪತ್ರಿಕಾ ಭವನದಲ್ಲಿ ಗೌರವ ಅತಿಥಿ ಸನ್ಮಾನ ಸ್ವೀಕರಿಸಿದ ಅವರು ತಮ್ಮ ಬದುಕಿನ ಹಾದಿಯನ್ನು ತೆರೆದಿಟ್ಟರು.
ಉದ್ದಿಮೆಯಲ್ಲಿ ಮೂರು ಬಾರಿ ಸಂಪೂರ್ಣವಾಗಿ ಸೋತಿದ್ದೆ. ಹಾಗೆಂದು ಊರು ಬಿಟ್ಟಿಲ್ಲ. ಮುಂದೆ ಇದರಿಂದ ಹೊರಬರಲಿದ್ದೇನೆ ಎನ್ನುವ ಆತ್ಮವಿಶ್ವಾಸದೊಂದಿಗೆ ಸವಾಲನ್ನು ಸ್ವೀಕರಿಸಿದೆ. ಸಂಕಷ್ಟಗಳಿಂದ ಪಾರಾದೆ. ಈಗ ತಾವು ಬಯಸಿದ ಅಂಕಗಳು ದೊರಕಿಲ್ಲ ಎಂಬ ಕಾರಣಕ್ಕೆ ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗುವುದನ್ನು ನಾವು ಕಾಣುತ್ತಿದ್ದೇವೆ. ಜೀವನದಲ್ಲಿ ಎದುರಾಗುವ ಕಷ್ಟಗಳನ್ನು ಆತ್ಮಸ್ಥೈರ್ಯದಿಂದ ಎದುರಿಸುವ ಮನೋಸ್ಥೈರ್ಯವನ್ನು ಬೆಳೆಸಿಕೊಳ್ಳಬೇಕು ಎಂದು ಅವರು ಹೇಳಿದರು.
ಶಾಲೆಗೆ ಹೋಗುತ್ತಿದ್ದ ಸಂದರ್ಭ ಮೋರ್ಗನ್ಸ್ಗೇಟ್ನ ಗೇರುಬೀಜ ಕಾರ್ಖಾನೆಯೊಂದರಲ್ಲಿ ಬಾಲ ಕಾರ್ಮಿಕನಾಗಿ ದುಡಿಯುತ್ತಿದ್ದ ನಾನು ಮುಂದೊಂದು ದಿನ ಅದೇ ಜಾಗವನ್ನು ಖರೀದಿಸುವಷ್ಟು ಶಕ್ತನಾಗುತ್ತೇನೆಂಬ ಕನಸು ಕಂಡಿರಲಿಲ್ಲ. ದುಡಿಮೆ , ವ್ಯವಹಾರದಲ್ಲಿ ಪ್ರಾಮಾಣಿಕತೆ ಹಾಗೂ ಬದ್ಧತೆಯನ್ನು ಮೈಗೂಡಿಸಿಕೊಂಡ ಕಾರಣ ಈ ಹಂತದ ಯಶಸ್ಸು ಸಾಧ್ಯವಾಗಿದೆ. ದುಡಿಮೆಯ ಲಾಭಾಂಶದಲ್ಲಿ ಸಮಾಜಕ್ಕೂ ದೊರಕಬೇಕೆಂಬ ನಿಟ್ಟಿನಲ್ಲಿ ಈವರೆಗೂ ವ್ಯವಹಾರ ನಡೆಸಿಕೊಂಡು ಬಂದಿದ್ದೇನೆ ಎಂದು ಪಾಲೆಮಾರ್ ಹೇಳಿದರು.
ಅನಿವಾರ್ಯ ಕಾರಣದಿಂದ ರಾಜಕೀಯ ಪ್ರವೇಶಿಸಿದೆ. ಶಾಸಕನಾಗುವ ಅವಕಾಶ ದೊರೆಯಿತು. ಬಂದರು ಇಲಾಖೆ, ಪರಿಸರ ಇಲಾಖೆಯ ಸಚಿವನಾಗಿಯೂ ಉತ್ತಮವಾಗಿ ಕಾರ್ಯ ನಿರ್ವಹಿಸಿದ ತೃಪ್ತಿ ಇದೆ. ಸಚಿವನಾಗಿದ್ದ ಅವಧಿಯಲ್ಲಿ ಮೆರಿಟೈಮ್ ಬೋರ್ಡ್ ಸ್ಥಾಪನೆ ಮಾಡಿದ ತೃಪ್ತಿ, 40 ಮೈಕ್ರೋನ್ಗಿಂತ ಕಡಿಮೆ ಪ್ಲಾಸ್ಟಿಕ್ ಬಳಕೆ ನಿಷೇಧ ಮಾಡಿದ ಬಗ್ಗೆ ಹೆಮ್ಮೆ ಇದೆ ಎಂದರು.
ಕಲಾವಿದ ಕದ್ರಿ ನವನೀತ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು. ಮಂಗಳೂರು ಪ್ರೆಸ್ಕ್ಲಬ್ ಅಧ್ಯಕ್ಷ ಪಿ.ಬಿ. ಹರೀಶ್ ರೈ ಅಧ್ಯಕ್ಷತೆ ವಹಿಸಿದ್ದರು. ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ರಾಮಕೃಷ್ಣ ಆರ್. ಪ್ರೆಸ್ಕ್ಲಬ್ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ ಉಪಸ್ಥಿತರಿದ್ದರು. ಅತ್ಮಭೂಷಣ್ ಭಟ್ ಕಾರ್ಯಕ್ರಮ ನಿರೂಪಿಸಿದರು.