

ಚಿಕ್ಕೋಡಿ ಗ್ರಾಮೀಣ: ಸಮೀಪದ ಕಲ್ಲೋಳ ಗ್ರಾಮದ ಕೃಷ್ಣಾ ನದಿ ತೀರದಲ್ಲಿ ಅವರಾತ್ರಿ ಅಮಾವಾಸ್ಯೆ ದಿನವಾದ ಬುಧವಾರ ವಿಶಾಳಿ ತೀರ್ಥ ಯಾತ್ರೆ ವಿಜೃಂಭಣೆಯಿಂದ ಜರುಗಿತು. ಸಹಸ್ರಾರು ಭಕ್ತರು ಕೃಷ್ಣಾ ತೀರದಲ್ಲಿ ಪುಣ್ಯಸ್ನಾನ ಮಾಡಿದರು.
ಯಕ್ಸಂಬಾ, ಕಲ್ಲೋಳ, ಚಿಕ್ಕೋಡಿ, ಹತ್ತರವಾಟ, ಕರೋಶಿ, ಹಂಜ್ಯಾನವಾಡಿ, ನಿಪ್ಪಾಣಿ, ಹುಕ್ಕೇರಿ ಹಾಗೂ ಸಂಕೇಶ್ವರ ಸೇರಿ ವಿವಿಧ ಗ್ರಾಮಗಳಿಂದ ನೂರಕ್ಕೂ ಹೆಚ್ಚು ದೇವರ ಪಲ್ಲಕ್ಕಿಗಳು ಅಮಾವಾಸ್ಯೆಯ ಮುನ್ನಾದಿನ ಕೃಷ್ಣಾ ನದಿ ದಡಕ್ಕೆ ಆಗಮಿಸಿದ್ದವು.
ಪಲ್ಲಕ್ಕಿಗಳ ಜತೆಗೆ ಬಂದ ಭಕ್ತರು ಕೃಷ್ಣೆ ದಡದಲ್ಲಿ ಸ್ನಾನ ಮಾಡಿ, ಪಲ್ಲಕ್ಕಿ ಉತ್ಸವದೊಂದಿಗೆ ಪ್ರದಕ್ಷಣೆ ಹಾಕುವ ದೃಶ್ಯವನ್ನು ನೆರೆದಿದ್ದ ಭಕ್ತಗಣ ಕಣ್ತುಂಬಿಕೊಂಡಿತು.
ಪ್ರದಕ್ಷಣೆ, ದಂಡವತ್ತು , ಉರುಳು ಸೇವೆ , ಪಲ್ಲಕ್ಕಿ ಸೇವೆ, ಬುತ್ತಿಪೂಜೆ , ಅಕ್ಕಿಪೂಜೆ, ಎಲಿ ಪೂಜೆ ಸೇರಿ ವಿವಿಧ ಭಕ್ತಿಸೇವೆ ಸಲ್ಲಿಸಿ ಭಕ್ತರು ಪಲ್ಲಕ್ಕಿಗಳ ದರ್ಶನ ಪಡೆದು ಕೃತಾರ್ಥರಾದರು. ರೈತಾಪಿ ಜನರು ಕೃಷ್ಣೆಗೆ ಪೂಜೆ ಸಲ್ಲಿಸಿದರು. ಯಕ್ಸಂಬಾದ ವಿವಿಧ ದೇವರ ಪಲ್ಲಕ್ಕಿಗಳಿಗೆ ನೈವೇದ್ಯ ಹಾಗೂ ಮಹಾಪೂಜೆ ನೆರವೇರಿತು. ಭಂಡಾರದ ಓಕುಳಿ ಭಕ್ತರ ಆಕರ್ಷಣೆಯಾಗಿತ್ತು.