

ಉಡುಪಿ: ಕೃಷ್ಣ ಮಠದಲ್ಲಿ ಉತ್ಥಾನದ್ವಾದಶಿಯಿಂದ ಹುಣ್ಣಿಮೆವರೆಗೆ ( ನ.24ರಿಂದ 27ರವರೆಗೆ) 4 ದಿನ ಲಕ್ಷದಿಪೋತ್ಸವದೊಂದಿಗೆ ರಥೋತ್ಸವಗಳು ಆರಂಭಗೊಳ್ಳಲಿವೆ. ಈಗಾಗಲೇ ರಥಬೀದಿಯಲ್ಲಿ ರಥ ಕಟ್ಟುವ ಕಾರ್ಯ ಭರದಿಂದ ಸಾಗುತ್ತಿದೆ.
ಭಾಗೀರಥಿ ಜಯಂತಿಯಂದು ನಾಲ್ಕು ತಿಂಗಳ ಹಿಂದೆ ಗರ್ಭಗುಡಿ ಸೇರಿದ ಕೃಷ್ಣನ ಉತ್ಸವ ಮೂರ್ತಿ ಉತ್ಥಾನದ್ವಾದಶಿಯಂದು ರಥವನ್ನೇರಲಿದೆ. ಮಹಾಪೂಜಾ ರಥದಲ್ಲಿ ಅನಂತೇಶ್ವರ ಚಂದ್ರೇಶ್ವರ ದೇವರು ಮತ್ತು ಗರುಡ ರಥದಲ್ಲಿ ಶ್ರೀಕೃಷ್ಣ ಮತ್ತು ಮುಖ್ಯಪ್ರಾಣ ದೇವರ ಉತ್ಸವ ಮೂರ್ತಿಗಳನ್ನು ಸ್ಥಾಪಿಸಲಾಗುತ್ತದೆ.
ನ.24ರಂದು ಬೆಳಗ್ಗೆ ಮಠದ ಪ್ರಾಂಗಣದಲ್ಲಿರುವ ತುಳಸಿ ಕಟ್ಟೆಯಲ್ಲಿ ತುಳಸೀ ಪೂಜೆ ನಡೆಯಲಿದೆ. ಮಧ್ಯಾಹ್ನ ಪರ್ಯಾಯ ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮೀಜಿ ನೇತೃತ್ವದಲ್ಲಿ ವಿವಿಧ ಮಠಾಧೀಶರು ಹಣತೆ ಮುಹೂರ್ತ ನೆರವೇರಿಸಲಿದ್ದಾರೆ. ನಂತರ ಸಾಯಂಕಾಲ ಮಧ್ವಸರೋವರದ ಮಧ್ಯದಲ್ಲಿರುವ ಮಂಟಪದಲ್ಲಿ ಕ್ಷೀರಾಬ್ಧಿ ಪೂಜೆ ನಡೆಯಲಿದೆ. ಅಷ್ಟ ಮಠಾಧೀಶರು ತಮ್ಮ ಪಟ್ಟದದೇವರಿಗೆ ಅರ್ಗ್ಯ ಪ್ರದಾನ ಮಾಡಲಿದ್ದಾರೆ. ರಾತ್ರಿ 7 ಗಂಟೆಗೆ ಮಠದಲ್ಲಿ ಉತ್ಸವ ಮುಹೂರ್ತ ಧಾರ್ಮಿಕ ವಿಧಿ ನಡೆಯಲಿದ್ದು, ನವಗ್ರಹ ಪೂಜೆ, ನವಗ್ರಹ ದಾನದ ನಂತರ ರಥೋತ್ಸವಕ್ಕೆ ಅಧಿಕೃತ ಚಾಲನೆ ದೊರೆಯಲಿದೆ. ಜ.14ರಂದು ಮಕರ ಸಂಕ್ರಾಂತಿಯಿಂದ ಬ್ರಹ್ಮರಥೋತ್ಸವ ಪ್ರಾರಂಭವಾಗಲಿದೆ.
ದಿನಕ್ಕೆ 75 ಲೀ ಎಳ್ಳೆಣ್ಣೆ
ದೀಪೋತ್ಸವಕ್ಕಾಗಿ ರಥಬೀದಿಯ ಸುತ್ತ ಮರದ ಸಲಾಕೆಗಳನ್ನು ಅಳವಡಿಸಲಾಗಿದ್ದು, ಇದರಲ್ಲಿ ಸುಮಾರು 13 ಸಾವಿರ ಹಣತೆಗಳನ್ನು ಇಡಲಾಗುತ್ತದೆ. ಪ್ರತಿ ದಿನ 25 ಸಾವಿರ ಬತ್ತಿ ಹಾಗೂ 75 ಲೀ ಎಳ್ಳೆಣ್ಣೆಯಲ್ಲಿ ದೀಪ ಬೆಳಗಲಾಗುತ್ತದೆ.
23ಕ್ಕೆ ಪಶ್ಚಿಮ ಜಾಗರಪೂಜೆ
ಕೃಷ್ಣ ಮಠದಲ್ಲಿ ಬೆಳಗ್ಗೆ 5 ಗಂಟೆಗೆ ಅಶ್ವಯುಜ ಮಾಸದ ಶುಕ್ಲ ಏಕಾದಶಿಯಿಂದ ಕಾರ್ತಿಕ ಮಾಸದ ಶುಕ್ಲ ಏಕಾದಶಿಯವರೆಗೆ 1 ತಿಂಗಳ ಪರ್ಯಂತ ಸೂರ್ಯವಾದ್ಯ ಸಹಿತ ವಿವಿಧ ಬಗೆಯ ವಾದ್ಯಗಳನ್ನು ನುಡಿಸಿ ದೀಪಗಳನ್ನು ಬೆಳಗಿಸುವ ಪಶ್ಚಿಮ ಜಾಗರಪೂಜೆ ನಡೆಯುತ್ತಿದ್ದು, ನ.23ರಂದು ದೇವಪ್ರಬೋಧಿನೀ ಏಕಾದಶಿ ದಿನ ಸಂಪನ್ನಗೊಳ್ಳಲಿದೆ. ಇದರೊಂದಿಗೆ ಚಾತುರ್ಮಾಸ್ಯ ವ್ರತ ಮುಕ್ತಾಯವಾಗಲಿದೆ.