

ಉಡುಪಿ: ಕೃಷ್ಣಮಠದಲ್ಲಿ ಸೆ.14 ಶ್ರೀಕೃಷ್ಣ ಜನ್ಮಾಷ್ಟಮಿ ಮತ್ತು 15ರಂದು ಕೃಷ್ಣ ಲೀಲೋತ್ಸವಕ್ಕೆ (ವಿಟ್ಲಪಿಂಡಿ) ಭರದ ಸಿದ್ಧತೆ ನಡೆಯುತ್ತಿದ್ದು, ಮೊಸರು ಕುಡಿಕೆ ಉತ್ಸವಕ್ಕೆ ರಥಬೀದಿಯಲ್ಲಿ ತ್ರಿಕೋನಾಕೃತಿಯ ಗುರ್ಜಿಗಳನ್ನು ಅಳವಡಿಸಲಾಗುತ್ತಿದೆ.
ರಥಬೀದಿಯ ಸುತ್ತಲೂ 13 ಮರದ ತ್ರಿಕೋನಾಕೃತಿಯ ಗುರ್ಜಿಗಳನ್ನು ನಿರ್ಮಿಸಲಾಗಿದೆ. ವಿಟ್ಲಪಿಂಡಿ ರಥೋತ್ಸವ ಸಂದರ್ಭದಲ್ಲಿ ಶ್ರೀಕೃಷ್ಣಮಠದಲ್ಲಿ ಗೋವುಗಳನ್ನು ನೋಡಿಕೊಳ್ಳುವ ಗೋವಳರು ಮೊಸರು ಕುಡಿಕೆ ಒಡೆಯುವ ಕಾಯಕ ನಿರ್ವಹಿಸುತ್ತಾರೆ. ಕಾರ್ಮಿಕರು ಕಳೆದ ಮೂರ್ನಾಲ್ಕು ದಿನಗಳಿಂದ ರಥಬೀದಿ ಸುತ್ತಲೂ ಗುರ್ಜಿ ಅಳವಡಿಸುವ ಕೆಲಸದಲ್ಲಿ ನಿರತರಾಗಿದ್ದಾರೆ.
ಮಂಟಪ ಗುರ್ಜಿಗಳು
ವ್ಯಾಸರಾಜ ಮಠದ ಮುಂಭಾಗ, ಕೃಷ್ಣ ಮಠದ ಮುಂಭಾಗ ಮತ್ತು ಕನಕ ಗೋಪುರದ ಮುಂಭಾಗ ಎರಡು ದಿಕ್ಕಿನಲ್ಲಿ ಬೃಹತ್ ಮಂಟಪದ ಗುರ್ಜಿ ನಿರ್ಮಿಸಲಾಗಿದೆ. ಉಳಿದಂತೆ ಅಷ್ಟಮಠಕ್ಕೆ ಸಂಬಂಧಿಸಿದ 8, ಅನಂತೇಶ್ವರ ಮತ್ತು ಚಂದ್ರಮೌಳೀಶ್ವರ ದೇವಸ್ಥಾನದ 2 ಗುರ್ಜಿಗಳು, 3 ಮಂಟಪ ಗುರ್ಜಿಗಳು ಸೇರಿ ಒಟ್ಟು 13 ಗುರ್ಜಿಗಳನ್ನು ರಚಿಸಲಾಗುತ್ತಿದೆ. ಪ್ರತಿ ಗುರ್ಜಿಗಳಲ್ಲಿ ತಲಾ ಮೂರು ಕುಡಿಕೆ ಇರಿಸಲಾಗುತ್ತಿದ್ದು, ಕುಡಿಕೆಗಳಲ್ಲಿ ಮೊಸರು, ಅರಳಿನ ಹುಡಿ, ಅರಿಶಿಣ & ಕುಂಕುಮದ ನೀರು ತುಂಬಿಸಲಾಗುತ್ತದೆ. ದೊಡ್ಡ ಮಡಕೆಗಳಲ್ಲಿ ಅರಳಿನ ಹುಡಿ ಮತ್ತು ತೆಂಗಿನ ಕಾಯಿ ಇಡಲಾಗುತ್ತದೆ. ದೊಡ್ಡ ಮಡಿಕೆಗಳನ್ನು ಒಳಗೊಂಡ ಒಟ್ಟು 47 ಮಣ್ಣಿನ ಕುಡಿಕೆಗಳಿಗೆ ಕಲಾ-ತ್ಮ-ಕ-ವಾಗಿ ಬಣ್ಣ ಬಳಿಯಲಾಗುತ್ತದೆ.
ಸೆ.14ರಂದು ಬೆಳಗ್ಗೆ 9.30ರಿಂದ ರಾಜಾಂಗಣ, ಮಧ್ವಮಂಟಪ, ಅನ್ನಬ್ರಹ್ಮ ಮೊದಲಾದಕಡೆಗಳಲ್ಲಿ ವಿವಿಧ ವಯೋಮಿತಿಯ ಮಕ್ಕಳ ಕೃಷ್ಣವೇಷ ಸ್ಪರ್ಧೆ ಆಯೋಜಿಸಲಾಗಿದೆ. ಸಾಯಂಕಾಲ 5 ಗಂಟೆಗೆ ರಾಜಾಂಗಣದಲ್ಲಿ ಜಿಲ್ಲಾಡಳಿತ ವತಿಯಿಂದ ಶ್ರೀಕೃಷ್ಣ ಜಯಂತಿ ಕಾರ್ಯಕ್ರಮ ನಡೆಯಲಿದೆ. 6 ಗಂಟೆಗೆ ಕೃಷ್ಣಾವತಾರ ಉಪನ್ಯಾಸ, 7ಗಂಟೆಗೆ ಶ್ರೀಕೃಷ್ಣ ಪುತ್ರ ವಿವಾಹೋತ್ಸವ ಯಕ್ಷಗಾನ, 11 ಗಂಟೆಗೆ ಪರ್ಯಾಯ ಶ್ರೀಪಾದರಿಂದ ವಿಶೇಷ ಪೂಜೆ, 12.11ಕ್ಕೆ ಶ್ರೀಕೃಷ್ಣನಿಗೆ ಅ್ಯರ್ ಪ್ರದಾನ ನೆರವೇರಲಿದೆ. 15ರಂದು 3 ಗಂಟೆಗೆ ಶ್ರೀಕೃಷ್ಣ ಲೀಲೋತ್ಸವ ಆರಂಭವಾಗಲಿದೆ.