

ಉಡುಪಿ: ಜಾಗತೀಕರಣದ ಪ್ರಭಾವದಿಂದಾಗಿ ಪಾರಂಪರಿಕ ಕರಕುಶಲತೆ ಣಿಸುತ್ತಿದೆ. ಮಕ್ಕಳನ್ನು ವೈದ್ಯರು ಅಥವಾ ಇಂಜಿನಿಯರ್ಗಳಾಗಿಸುವ ಪ್ರವೃತ್ತಿ ಬೆಳೆಯುತ್ತಿದೆ. ಎಲ್ಲಾ ಸಮಾಜ ಒಂದೇಕಡೆಗೆ ನುಗ್ಗಿದರೆ ಅಸಮತೋಲನ ಉಂಟಾಗಿ ಸಮಾಜದ ಬಣ್ಣಗೆಡುತ್ತಿದೆ. ಹೀಗಾಗಿ ಆಧುನಿಕ ಶಿಕ್ಷಣದ ಜೊತೆಗೆ ಮನೆತನದ ವೃತ್ತಿ ಹಾಗೂ ವಂಶ ಪರಂಪರೆಯ ಕೌಶಲವನ್ನು ಮಕ್ಕಳಿಗೆ ಕಲಿಸಬೇಕು ಎಂದು ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಹೇಳಿದರು.
ಗೀತಾ ಮಂದಿರದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ 7 ದಿನ ನಡೆಯುವ ಶ್ರೀಕೃಷ್ಣ ಸಪ್ತೋತ್ಸವ ಹಾಗೂ ಸಂಜೀವಿನಿ ಸಂಗಳ ಸದಸ್ಯರಿಂದ ತಯಾರಿಸಲ್ಪಟ್ಟ ಕರಕುಶಲ ವಸ್ತುಗಳ ಪ್ರದರ್ಶನ ಹಾಗೂ ಮಾರಾಟ ಮೇಳಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಯಾವುದೇ ವಿಷಯದಲ್ಲಿ ಕೌಶಲ್ಯ ಪಡೆಯಬೇಕು ಎಂಬುದು ಕೃಷ್ಣನ ಸಂದೇಶ. ಇದರ ಪ್ರತಿಕವಾಗಿ ಕರಕೌಶಲ ವಸ್ತುಗಳ ಪ್ರದರ್ಶನವನ್ನು ಆಯೋಜಿಸಲಾಗಿದೆ. ಇದರೊಂದಿಗೆ ಸಮಾಜದಲ್ಲಿ ಏಕತೆ, ಸೌಹಾರ್ದತೆ ಬೆಳೆಸುವ ನಿಟ್ಟಿನಲ್ಲಿ ಸಮಾಜ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು. ಕಿರಿಯ ಶ್ರೀ ಸುಶ್ರೀಂದ್ರ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿದರು.
ಶಾಸಕ ಯಶ್ಪಾಲ್ ಸುವರ್ಣ ಮಾತನಾಡಿ, ಮಠದ ಪರಿಸರದಲ್ಲಿ ಕರಕುಶಲ ವಸ್ತುಗಳ ಪ್ರದರ್ಶನ ಆಯೋಜನೆ ಮಾಡುವುದಿಂದ ಕಲಾವಿದರ ಪ್ರತಿಭೆ ಅನಾವರಣಕ್ಕೆ ಅವಕಾಶ ಸಿಗುತ್ತದೆ. ಬದುಕು ಕಟ್ಟಿಕೊಳ್ಳುವ ವೃತ್ತಿಗೆ ಗೌರವ ನೀಡಿದಂತಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಕಟಪಾಡಿ ಕಾಳಿಕಾಂಬಾ ದೇವಸ್ಥಾನದ ಧರ್ಮದರ್ಶಿ ಮುರಹರಿ ಆಚಾರ್ಯ ಅವರಿಗೆ ಕೃಷ್ಣಾನುಗ್ರಹ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಮಾಜಿ ಶಾಸಕ ರಪತಿ ಭಟ್, ಜಿಲ್ಲಾಧಿಕಾರಿ ವಿದ್ಯಾಕುಮಾರಿ, ಉದ್ಯಮಿ ಹರಿಪ್ರಸಾದ್ ರೈ, ಭುವನೇಂದ್ರ ಕಿದಿಯೂರು, ಸುರೇಂದ್ರ ಕಲ್ಯಾಣಪುರ, ಪ್ರದಿಪ್ ಕಲ್ಕೂರ, ಪ್ರೇಮ್ ಮಿನೇಜಸ್ ಮೊದಲಾದವರು ಉಪಸ್ಥಿತರಿದ್ದರು. ರಮೇಶ್ ಭಟ್ ಕಾರ್ಯಕ್ರಮ ನಿರೂಪಿಸಿದರು.