

ಉಡುಪಿ: ಭಾರತೀಯ ಸಂಪ್ರದಾಯ ಮತ್ತು ಆಚರಣೆಗಳ ಹಿಂದೆ ಅಪೂರ್ವ ತತ್ವ ಅಡಗಿದ್ದು, ಕೇವಲ ಮನರಂಜನೆಗೆ ಸೀಮಿತವಾಗದೇ ಭಗವಂತನ ಸ್ಮರಣೆಗೂ ಪ್ರಾಧಾನ್ಯತೆ ನೀಡಲಾಗಿದೆ ಎಂದು ಪರ್ಯಾಯ ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರತೀರ್ಥ ಸ್ವಾಮೀಜಿ ಹೇಳಿದರು.
ಭಾನುವಾರ ಕೃಷ್ಣಮಠದಲ್ಲಿ ಕೃಷ್ಣಾಷ್ಟಮಿ-ವಿಟ್ಲಪಿಂಡಿ ಮಹೋತ್ಸವ ಅಂಗವಾಗಿ ಅಷ್ಟದಿನೋತ್ಸವ ಸಾಂಸ್ಕೃತಿಕ-ಧಾರ್ಮಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಕೃಷ್ಣ ಜನ್ಮಾಷ್ಟಮಿ ಸಂದರ್ಭದಲ್ಲಿ ಶ್ರವಣ, ಮನನ, ಧ್ಯಾನ, ಭಗವಂತನ ಸ್ಮರಣೆಯೊಂದಿಗೆ ಮನರಂಜನೆ ನಡೆಯಬೇಕು. ಆ ಮೂಲಕ ದೈವೀಕ ವಾತಾವರಣ ನಿರ್ಮಾಣವಾಗಬೇಕು ಎಂದರು.
ಲಡ್ಡು ಎಸೆದು ಸಂಭ್ರಮಾಚರಣೆ
ವಿಟ್ಲಪಿಂಡಿ ಉತ್ಸವ ಸಂದರ್ಭದಲ್ಲಿ ಉಂಡೆ, ಚಕ್ಕುಲಿ ಇತ್ಯಾದಿಗಳನ್ನು ರಥದಿಂದ ಭಕ್ತರೆಡೆಗೆ ಎಸೆಯಲಾಗುತ್ತಿದೆ. ಅದರ ಬದಲಿಗೆ ಕೈಯ್ಯಲ್ಲಿ ಕೊಡಬಹುದಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ. ವಾಸ್ತವವಾಗಿ ಈ ಪದ್ಧತಿ ಪ್ರಸಾದ ವಿತರಣೆಯಲ್ಲ. ಕೇವಲ ಸಂಭ್ರಮಾಚರಣೆ. ಕೃಷ್ಣನ ಜನನದಿಂದ ಸಂತಸಗೊಂಡ ಮಥುರೆ ನಿವಾಸಿಗಳು ಹಾಲು ಮೊಸರು ಇತ್ಯಾದಿಗಳನ್ನು ಪರಸ್ಪರ ಎರಚಿಕೊಂಡು ಸಂಭ್ರಮಸಿದ ಧ್ಯೋತಕವಾಗಿ ಉಡುಪಿಯಲ್ಲಿ ಉಂಡೆ ಚಕ್ಕುಲಿ ಎಸೆಯಲಾಗುತ್ತಿದೆ. ಈ ಕ್ರಮ ಹಿಂದಿನಿಂದ ಆಚರಿಸಲಾಗುತ್ತಿದ್ದು, ಅದು ಹೊಸತಾಗಿ ಆರಂಭಿಸಿಲ್ಲ ಎಂದು ಶ್ರೀಗಳು ಹೇಳಿದರು. ಪರ್ಯಾಯ ಮಠದ ದಿವಾನರಾದ ವರದರಾಜ ಭಟ್, ಗೋಪಾಲಕೃಷ್ಣ ಉಪಾಧ್ಯಾಯ, ಪರ್ಯಾಯ ಸ್ವಾಗತ ಸಮಿತಿ ಕಾರ್ಯದರ್ಶಿ ವಿಷ್ಣುಪ್ರಸಾದ್ ಪಾಡಿಗಾರ್ ಉಪಸ್ಥಿತರಿದ್ದರು.