

ಮಡಿಕೇರಿ:
ಶ್ರೀಕೃಷ್ಣನ ಬಗ್ಗೆ ಪ್ರತಿಯೊಬ್ಬರಲ್ಲಿಯೂ ಹೆಚ್ಚಿನ ಗೌರವ ಮತ್ತು ಭಕ್ತಿ ಇದೆ. ಶ್ರೀಕೃಷ್ಣನ ವೇಷದಲ್ಲಿ ಮಕ್ಕಳನ್ನು ಕಾಣುತ್ತೇವೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಎನ್. ವೀಣಾ ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಗಾಂಧಿ ಭವನದಲ್ಲಿ ಏರ್ಪಡಿಸಿದ್ದ ‘ಶ್ರೀಕೃಷ್ಣ ಜನ್ಮಾಷ್ಠಮಿ’ ಕಾರ್ಯಕ್ರಮದಲ್ಲಿ ಶ್ರೀಕೃಷ್ಣ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಮಾತನಾಡಿದರು.
ಶ್ರೀಕೃಷ್ಣನನ್ನು ಮಹಾಭಾರತದಲ್ಲಿ ಸಾರಥಿಯಾಗಿ ನೋಡುತ್ತೇವೆ. ಮಹಾಭಾರತದಲ್ಲಿ ಶ್ರೀಕೃಷ್ಣನ ಒಳ್ಳೆ ಸಂದೇಶ ತಿಳಿಯುತ್ತೇವೆ. ಯಾವುದೇ ಫಲಾಪೇಕ್ಷೆ ಇಲ್ಲದೆ ಕೆಲಸವನ್ನು ಶ್ರದ್ಧೆಯಿಂದ ನಿರ್ವಹಿಸಿ ಬದುಕನ್ನು ಉತ್ತಮ ಪಡಿಸಿಕೊಳ್ಳಬೇಕು ಎಂಬ ಸಂದೇಶವನ್ನು ಶ್ರೀಕೃಷ್ಣ ಸಾರಿದ್ದಾರೆ ಎಂದರು.
ಹೆಬ್ಬಾಲೆ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಅಧ್ಯಾಪಕ ಎನ್. ವೆಂಕಟ ನಾಯಕ್ ಮಾತನಾಡಿ ಭಗವಾನ್ ಶ್ರೀಕೃಷ್ಣನನ್ನು ವ್ಯಕ್ತಿಯಾಗಿ ನೋಡಬೇಕಿದೆ. ಮಹಾಭಾರತದಲ್ಲಿ ಚತುರನಾಗಿ, ಮಹಾಜ್ಞಾನಿಯಾಗಿ ನೋಡುತ್ತೇವೆ. ಗೋಕುಲದಲ್ಲಿ ಆಟವಾಡಿಕೊಂಡು ಬೆಳೆದ ಶ್ರೀಕೃಷ್ಣ ಅವರ ಸಂದೇಶಗಳನ್ನು ತಿಳಿದುಕೊಳ್ಳಬೇಕು. ಶ್ರೀಕೃಷ್ಣನಿಂದ ತಾಳ್ಮೆ ಕಲಿಯುವಂತಾಗಬೇಕು ಎಂದರು.
ಕೊಡಗು ಗೌಳಿ ಸಮಾಜದ ಅಧ್ಯಕ್ಷ ಜಿ.ವಿ. ರವಿಕುಮಾರ್ ಮಾತನಾಡಿ ಜೀವನದಲ್ಲಿ ಮಾನವೀಯ ಮೌಲ್ಯ ಮತ್ತು ಆಧ್ಯಾತ್ಮಿಕತೆಯನ್ನು ಅಳವಡಿಸಿಕೊಳ್ಳಬೇಕು. ಸಮಾಜದಲ್ಲಿ ದ್ವೇಷ, ಅಸೂಯೆ, ಅಸಹನೆ, ಅಸಹಿಷ್ಣುತೆ ಇರಬಾರದು. ಒಳ್ಳೆಯದನ್ನು ರೂಡಿಸಿಕೊಳ್ಳಬೇಕು ಎಂದರು.
ಕೊಡಗು ಗೌಳಿ ಸಮಾಜದ ಜಿ.ಸಿ. ಜಗದೀಶ್, ಜಿ.ಆರ್.ರಾಜು, ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಂಶುಪಾಲ ಜವರಪ್ಪ, ಮಣಜೂರು ಮಂಜುನಾಥ್ ಇದ್ದರು.