

ಮಂಡ್ಯ: ಶ್ರೀ ಕೃಷ್ಣ ಜನ್ಮಾಷ್ಠಮಿ ಹಾಗೂ ಕಡೇ ಶ್ರಾವಣ ಶನಿವಾರದ ಅಂಗವಾಗಿ ಜಿಲ್ಲೆಯ ವಿಷ್ಣು ದೇವಾಲಯಗಳಲ್ಲಿ ವಿಶೇಷ ಪೂಜಾ ಕಾರ್ಯಗಳು ಸಂಭ್ರಮದಿಂದ ನೆಡೆದವು.
ತಾಲೂಕಿನ ಸಾತನೂರು ಕಂಬದ ನರಸಿಂಹಸ್ವಾಮಿ ದೇವಾಲಯದಲ್ಲಿ ಕಡೇ ಶ್ರಾವಣ ಶನಿವಾರದ ಅಂಗವಾಗಿ ಬೆಳಗ್ಗೆಯಿಂದಲೇ ವಿಶೇಷ ಪೂಜೆಗಳನ್ನು ಏರ್ಪಡಿಸಲಾಗಿತ್ತು. ನರಸಿಂಹಸ್ವಾಮಿ ವಿಗ್ರಹಕ್ಕೆ ಹಲವು ಹೂವುಗಳಿಂದ ವಿಶೇಷ ಅಲಂಕಾರ ಮಾಡಲಾಗಿತ್ತು. ದೇವಾಲಯದ ಒಳಾವರಣವನ್ನು ಸಹ ವಿವಿಧ ಪುಷ್ಪಗಳಿಂದ ಅಲಂಕರಿಸಲಾಗಿತ್ತು. ದೇವಾಲಯದ ವತಿಯಿಂದ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಜತೆಗೆ ಭಕ್ತಾದಿಗಳು ಸಹ ಬೆಟ್ಟದ ಕೆಳಗೆ ಅನ್ನಪ್ರಸಾದವನ್ನು ನೀಡುತ್ತಿದ್ದುದು ಕಂಡುಬಂತು. ಭಕ್ತರು ಜಾತ್ರೆಯ ರೀತಿಯಲ್ಲಿ ದೇವಾಲಯಕ್ಕೆ ಹರಿದು ಬರುತ್ತಿದ್ದರು.
ನಗರದ ಲಕ್ಷ್ಮಿ ಜನಾರ್ಧನಸ್ವಾಮಿ ದೇವಾಲಯ, ಶ್ರೀನಿವಾಸ ದೇವಾಲಯ, ಹೊಸಹಳ್ಳಿ ಬಡಾವಣೆಯ ಶ್ರೀನಿವಾಸ ದೇವಾಲಯ, ಬೋವಿ ಕಾಲನಿಯ ಲಕ್ಷ್ಮೀ ವೆಂಕಟೇಶ್ವರಸ್ವಾಮಿ ದೇವಾಲಯ, ನಗರದ ಮೈಸೂರು-ಬೆಂಗಳೂರು ಹೆದ್ದಾರಿ ಕಲ್ಲಹಳ್ಳಿಯ ಆಂಜನೇಯ ದೇವಸ್ಥಾನಕ್ಕೆ ಬೆಳಗ್ಗೆಯಿಂದಲೇ ಭಕ್ತರ ದಂಡು ಆಗಮಿಸಿ ವಿಶೇಷ ಪೂಜೆ ಸಲ್ಲಿಸಿ, ಪುನೀತರಾದರು.