

ಮಂಡ್ಯ: ಶ್ರೀ ಕೃಷ್ಣ ಮತ್ತು ಅರ್ಜುನರ ನಡುವಿನ ಸ್ನೇಹ ಹಾಗೂ ಸೌಹಾರ್ಧತೆಯ ಬಾಂಧವ್ಯ ಅಮೋಘ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಶೇಖ್ ತನ್ವೀರ್ ಆಸಿಫ್ ಅಭಿಪ್ರಾಯಪಟ್ಟರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೆಲಸವನ್ನು ನಿಷ್ಠೆ, ನಿಷ್ಪಕ್ಷಪಾತ, ಶ್ರದ್ಧೆಯಿಂದ ಮಾಡಿದರೆ ಗುರಿ ಮುಟ್ಟಲು ಸಾಧ್ಯವೆಂದು ಶ್ರೀಕೃಷ್ಣ ಭಗವದ್ಗೀತೆಯಲ್ಲಿ ಹೇಳಿದ್ದಾರೆ. ಅವರು ನೀಡಿದ ಹಲವು ಉಪದೇಶವನ್ನು ಭಗವದ್ಗೀತೆ ಎಂಬ ಮಹಾನ್ ಪುಸ್ತಕದಲ್ಲಿ ನಾವು ತಿಳಿಯಬಹುದಾಗಿದೆ ಎಂದರು.
ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಮಾತನಾಡಿ, ಧರ್ಮವನ್ನು ರಕ್ಷಣೆ ಮಾಡುವ ಸಂದರ್ಭದಲ್ಲಿ ಕೃಷ್ಣನು ಅರ್ಜುನನ ಸಾರಥಿಯಾಗುತ್ತಾರೆ. ಯುದ್ಧ ಭೂಮಿಯಲ್ಲಿ ನ್ಯಾಯಕ್ಕೆ ಜಯ ಕಾಣಲು ಯಾವುದೇ ರಕ್ತ ಸಂಬಂಧಕ್ಕೆ ಒಳಗಾಗದೆ ಧರ್ಮದ ಪಾಲನೆಯನ್ನು ಮಾಡಬೇಕು ಎಂದು ಅರ್ಜುನನಿಗೆ ಉಪದೇಶ ಮಾಡಿದರು. ಧರ್ಮವನ್ನು ರಕ್ಷಣೆ ಮಾಡಿದರೆ ಧರ್ಮವು ಅವರನ್ನು ರಕ್ಷಿಸುತ್ತದೆ ಎಂಬ ಸಂದೇಶವನ್ನು ನೀಡಿದ್ದಾರೆ ಎಂದರು.
ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಡಾ.ಸಿದ್ದಲಿಂಗೇಶ್, ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿ ಹಾಜರಿದ್ದರು.