

ಮುಂಡಗೋಡ: ಈ ಹಿಂದೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಕೃಷ್ಣ ಹಿರೇಹಳ್ಳಿ ಅವರನ್ನೇ ಮತ್ತೇ ಬ್ಲಾಕ್ ಅಧ್ಯಕ್ಷರನ್ನಾಗಿ ಮುಂದುವರಿಸಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಆದೇಶ ಹೊರಡಿಸಿದ್ದಾರೆ.
ತಾಲೂಕು ಬ್ಲಾಕ್ ಕಾಂಗ್ರೆಸ್ನಲ್ಲಿ ಭಾರಿ ಬದಲಾವಣೆಯಾಗಿದ್ದು, ಕಳೆದ ವಿಧಾನಸಭೆ ಚುನಾವಣೆ ಸಮಿಪದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಕೃಷ್ಣ ಹಿರೇಹಳ್ಳಿ ಅವರನ್ನು ಏಕಾಏಕಿ ತೆಗೆದು ಮಂಜುನಾಥ ಪಾಟೀಲ ಅವರನ್ನು ನೇಮಕ ಮಾಡಿದ್ದರು ಇದರಿಂದ ತಾಲೂಕು ಕಾಂಗ್ರೆಸ್ನಲ್ಲಿ ಭಿನ್ನಮತ ಎದುರಾಗಿತ್ತು. ಕೆಲ ತಿಂಗಳಲ್ಲಿಯೇ ಅವರನ್ನೂ ಬದಲಾಯಿಸಿ ಜ್ಞಾನದೇವ ಗುಡಿಯಾಳ ಅವರಿಗೆ ಬ್ಲಾಕ್ ಕಾಂಗ್ರೆಸ್ ಹೊಣೆ ವಹಿಸಲಾಗಿತ್ತು. ಇದು ಸಹ ತಾಲೂಕು ಕಾಂಗ್ರೆಸ್ನಲ್ಲಿ ಆಕ್ರೋಶ ಭುಗಿಲೇಳಲು ಕಾರಣವಾಗಿತ್ತು. ಅಂದಿನಿಂದ ಜ್ಞಾನದೇವ ಗುಡಿಯಾಳ ಅವರನ್ನು ಬದಲಾವಣೆ ಮಾಡಬೇಕೆಂದು ಬಹಿರಂಗವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ, ಹಿರಿಯ ನಾಯಕ ಆರ್.ವಿ. ದೇಶಪಾಂಡೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಮುಂಡಗೋಡಕ್ಕೆ ಭೇಟಿ ನೀಡಿದಾಗ ಮುಖಂಡರು, ಕಾರ್ಯಕರ್ತರು ಆಗ್ರಹಿಸಿದ್ದರು.
ಕೃಷ್ಣ ಹಿರೇಹಳ್ಳ ಅವರನ್ನು ಬ್ಲಾಕ್ ಅಧ್ಯಕ್ಷರನ್ನಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ ಸೆ. 20ರಂದೇ ಆದೇಶ ಹೊರಡಿಸಿದ್ದಾರೆ. ಆದರೆ, ಒಂದು ವಾರದ ನಂತರ ಬಹಿರಂಗವಾಗಿದೆ. ಒಟ್ಟಿನಲ್ಲಿ ತಾಲೂಕಿನ ಕಾಂಗ್ರೆಸ್ ಹೊಸ ರಾಜಕೀಯಕ್ಕೆ ನಾಂದಿಹಾಡಿದೆ.