ಬಾಕಿ ಕಮಿಷನ್ ಬಿಡುಗಡೆಗೆ ರಾಜ್ಯ ಪಡಿತರ ವಿತರಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಕೃಷ್ಣ ಡಿ.ನಾಯ್ಕ ಆಗ್ರಹ

Published on

ಮೈಸೂರು: ಪಡಿತರ ವಿತರಕರಿಗೆ ಒಂದು ವರ್ಷದಿಂದ ಕಮಿಷನ್ ಬಾಕಿ ಉಳಿಸಿಕೊಂಡಿದ್ದು, ತಕ್ಷಣವೇ ಬಾಕಿ ಬಿಡುಗಡೆಗೊಳಿಸಬೇಕು ಎಂದು ರಾಜ್ಯ ಪಡಿತರ ವಿತರಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಕೃಷ್ಣ ಡಿ.ನಾಯ್ಕ ಸರ್ಕಾರವನ್ನು ಒತ್ತಾಯಿಸಿದರು.

2024ರ ಮಾರ್ಚ್ ತಿಂಗಳಿಂದ ಕಮಿಷನ್ ಬಾಕಿ ಬಿಡುಗಡೆಗೊಳಿಸಿಲ್ಲ. ಇದರಿಂದ ಪಡಿತರ ವಿತರಕರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೆಂಗಳೂರು ನಗರದ ಪಡಿತರ ವಿತರಕರಿಗೆ 2022-23ರ ಮಾರ್ಚ್ ತಿಂಗಳ ಕಮಿಷನ್ ಬಾಕಿ ಪಾವತಿ ಆಗಿಲ್ಲ ಎಂದು ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಐದು ವರ್ಷಗಳಿಂದ ಇಲಾಖೆಯ ಆದೇಶದಂತೆ ಕೆಲಸ ನಿರ್ವಹಿಸಿರುವ ಪಡಿತರ ವಿತರಕರಿಗೆ ಬರಬೇಕಾಗಿರುವ ಇಕೆವೈಸಿ ಹಣ ಬಿಡುಗಡೆಗೊಳಿಸಿಲ್ಲ. 2016ರ ಅಧಿನಿಯಮ ಆದೇಶದವನ್ನು ತಿದ್ದುಪಡಿ ಮಾಡಿ, ಕೆಲಸ ನಿರ್ವಹಿಸಿರುವ ಪಡಿತರ ವಿತರಕರಿಗೆ ಅನುಕೂಲವಾಗುವಂತೆ ಮರು ಆದೇಶಿಸಬೇಕು. ರಾಜ್ಯದ ಪಡಿತರ ಚೀಟಿದಾರರಿಗೆ 10 ಕೆಜಿ ಅಕ್ಕಿ ಜತೆಗೆ ಎಣ್ಣೆ, ಬೇಳೆ, ಸಕ್ಕರೆ, ಉಪ್ಪು ಇತ್ಯಾದಿ ಪದಾರ್ಥ ವಿತರಬೇಕು ಎಂದು ಮನವಿ ಮಾಡಿದರು. ಪದಾಧಿಕಾರಿಗಳಾದ ಡಿ.ಜಿ.ಶಿವಾನಂದಪ್ಪ, ಎಂ.ಕೆ. ರಾಮಚಂದ್ರ, ಎನ್. ತಿಪ್ಪೇಸ್ವಾಮಿ, ಸಂತೋಷ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net